ವೆಜಿಟೇಬಲ್ಸ್ ಇರೋ ನಾನ್ ವೆಜಿಟೇರಿಯನ್ ಹಾಡು: ಹಿಗ್ಗಿ ಹೀರೆಕಾಯಾಗಿಸೋ Non Veg ಸಾಂಗ್: 2 ದಿನದಲ್ಲಿ 25 ಲಕ್ಷ ವೀಕ್ಷಣೆ
ಪ್ರಪಂಚದಲ್ಲಿ ‘ವೆಜಿಟೇಬಲ್ಸ್ ಇರೋ ನಾನ್ ವೆಜಿಟೇರಿಯನ್ ಹಾಡು’ ಅಂತೇನಾದ್ರೂ ಇದ್ರೆ ಅದು ಕನ್ನಡದ ‘ತೋತಾಪುರಿ’ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು. ಈ ಚೇಷ್ಟೆಭರಿತ ಹಾಡನ್ನು ‘ಹೀರೇಕಾಯಿ ಸಾಂಗ್’ ಎಂದರೂ ತಪ್ಪಿಲ್ಲ. 2 ದಿನಗಳಲ್ಲಿ 25 ಲಕ್ಷಕ್ಕೂ ಹೆಚ್ಚು views ಈ ಹಾಡಿಗೆ ಸಿಕ್ಕಿರುವುದು ಇದರ ಪಾಪ್ಯುಲಾರಿಟಿಗೆ ಹಿಡಿದ ಕೈಗನ್ನಡಿ.
ಪ್ರಪಂಚದಲ್ಲಿ ‘ವೆಜಿಟೇಬಲ್ಸ್ ಇರೋ ನಾನ್ ವೆಜಿಟೇರಿಯನ್ ಹಾಡು’ ಅಂತೇನಾದ್ರೂ ಇದ್ರೆ ಅದು ಕನ್ನಡದ ‘ತೋತಾಪುರಿ’ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು. ಈ ಚೇಷ್ಟೆಭರಿತ ಹಾಡನ್ನು ‘ಹೀರೇಕಾಯಿ ಸಾಂಗ್’ ಎಂದರೂ ತಪ್ಪಿಲ್ಲ. ಯಾಕೆ, ಏನು, ಹೇಗೆಂದು ಇಂಚಿಂಚೂ ಬಿಡಿಸಿ ಹೇಳುವುದು ನಿಷಿದ್ಧ! ಅದು ಅವರವರ ಭಾವಕ್ಕೆ ಭಕುತಿಗೆ ಬಿಟ್ಟ ವಿಚಾರ.
ಆಪ್ಪಟ ನೆಲದ ಸೊಗಡು ಮತ್ತು ಚೇಷ್ಟೆಭರಿತ ಸಂಭಾಷಣೆಗಳಿಗೆ ಹೆಸರಾಗಿರುವ ವಿಜಯಪ್ರಸಾದ್, ‘ತೋತಾಪುರಿ’ ಸಿನಿಮಾದ ನಿರ್ದೇಶಕ. ಈ ಚೇಷ್ಟೆಭರಿತ ನಾನ್ ವೆಜಿಟೇರಿಯನ್ ಹಾಡನ್ನು ರಚಿಸಿರುವ ಮಹಾಶಯರೂ ಅವರೇ. ಸಂಗೀತ ನೀಡಿರುವವರು ಮತ್ತೋರ್ವ ದೇಸಿ ಪ್ರತಿಭೆ ಅನುಪ್ ಸೀಳಿನ್. 2 ದಿನಗಳಲ್ಲಿ 25 ಲಕ್ಷಕ್ಕೂ views ‘ಬಾಗ್ಲು ತೆಗಿ ಮೇರಿ ಜಾನ್’ ಈ ಹಾಡಿಗೆ ಸಿಕ್ಕಿರುವುದು ಇದರ ಪಾಪ್ಯುಲಾರಿಟಿಗೆ ಹಿಡಿದ ಕೈಗನ್ನಡಿ.
ನೆಲದ ಸೊಗಡಿನ ಹಾಡು
ಸಿನಿಮಾ ಆಗಲಿ ಹಾಡೇ ಆಗಲಿ ತುಂಬಾ ಗಂಭೀರವಾಗಿರಬಾರದು ಎನ್ನುವುದು ಸಿದ್ಲಿಂಗು, ನೀರ್ ದೋಸೆ ಖ್ಯಾತಿಯ ವಿಜಯಪ್ರಸಾದ್ ಫಿಲಾಸಫಿ. ಎಂಥ ಗಂಭೀರ ವಿಷಯ ಹೇಳುವಾಗಲೂ ಚೇಷ್ಟೆ ಮತ್ತು ತುಂಟತನದಿಂದ ಪ್ರಸ್ತುತ ಪಡಿಸುವ ಕಲೆ ಅವರಿಗೆ ಕರಗತ. ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನಲ್ಲಿನ ಸರಳ ಗ್ರಾಮ್ಯ ಭಾಷೆ ಮತ್ತು ಮುಸ್ಲಿಮರ ಆಡುಭಾಷೆಯ ಬಳಕೆ ಅದಕ್ಕೆ ಸಾಕ್ಷ್ಯ ನುಡಿಯುತ್ತದೆ.
ವಿವಾದ ಸೃಷ್ಟಿಸಿದ ಪದ
‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನ ಪ್ರಾರಂಭದಲ್ಲಿ ಬರುವ ಒಂದು ಹಿಂದಿ ಪದ ಅವಹೇಳನಕಾರಿಯಾಗಿದೆ ಎನ್ನುವ ವಿವಾದ ಸೃಷ್ಟಿಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸ್ಪಷ್ಟನೆ ಕೊಟ್ಟಿರುವ ವಿಜಯಪ್ರಸಾದ್ ಆ ಪದವನ್ನು ‘ಮೂರ್ಖ’ ಎನ್ನುವ ಅರ್ಥದಲ್ಲಿ ಬಳಸಿಕೊಂಡಿರುವುದಾಗಿ ಹೇಳಿದ್ದಾರೆ.
ಹಿಂದೂ ಮುಸ್ಲಿಂ ಡುಯೆಟ್ ಸಾಂಗ್
ಸಿನಿಮಾದಲ್ಲಿ ಜಗ್ಗೇಶ್ ಅವರು ಈರೇಗೌಡ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಅವರು ಶಕೀಲಾ ಬಾನು ಎನ್ನುವ ಮುಸ್ಲಿಂ ಸಮುದಾಯದ ಹುಡುಗಿ ಪಾತ್ರ ನಿರ್ವಹಿಸಿದ್ದಾರೆ. ಗುಟ್ಟಾಗಿ ಒಬ್ಬರನ್ನೊಬ್ಬರು ಪ್ರೇಮಿಸುತ್ತಿರುವ ನಾಯಕ ನಾಯಕಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವ ಹಾಡಿದು. ಹೀಗಾಗಿ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ನಿಜಾರ್ಥದಲ್ಲಿ ಜಾತ್ಯತೀತ ಹಾಡು.
ಈ ಹಾಡಿನ ಲಿರಿಕ್ಸ್ ಅನ್ನು ಮೊದಲು ಓದಿದಾಗ ಸಂಗೀತ ನಿರ್ದೇಶಕ ಅನುಪ್ ಸೀಳಿನ್ ಅವರಿಗೂ ನಗು ಬಂದಿತ್ತು. ಹಾಡಿನ ಪ್ರಾರಂಭದಲ್ಲಿ 80ರ ದಶಕದ ‘ಕರ್ಜ್’ ಹಿಂದಿ ಸಿನಿಮಾದ ‘ಓಂ ಶಾಂತಿ ಓಂ’ ಹಾಡಿನ ಮೊದಲ ಸಾಲನ್ನು ಬಳಸಿಕೊಳ್ಳಲಾಗಿದೆ. ಹಾಡಿನ ಪ್ರಾರಂಭದ ಸಾಲು ಮತ್ತು ಅಂತ್ಯದಲ್ಲಿ ಕೇಳಿಬರುವ ಗಂಟೆ ಶಬ್ದದ ಕ್ರೆಡಿಟ್ಟನ್ನು ಅನುಪ್ ಸೀಳಿನ್ ಅವರು ವಿಜಯಪ್ರಸಾದ್ ಅವರಿಗೆ ನೀಡುತ್ತಾರೆ.
ಕೊರಿಯೊಗ್ರಫಿಯಲ್ಲೂ ತುಂಟತನ
ನಿರ್ದೇಶಕ ವಿಜಯಪ್ರಸಾದ್ ಬರೆದ ಸಾಲುಗಳು ಎಷ್ಟು ತುಂಟತನದಿಂದ ಕೂಡಿವೆಯೋ, ಅಷ್ಟೇ ತುಂಟತನವನ್ನು ಕೊರಿಯೋಗ್ರಫಿ ಮೂಲಕ ಮುರಳಿ ಮಾಸ್ಟರ್ ವ್ಯಕ್ತಪಡಿಸಿರುವುದು ವಿಶೇಷ. ಒಟ್ಟಿನಲ್ಲಿ ಸಮಾನಮನಸ್ಕ ತುಂಟರು ಒಟ್ಟಾಗಿ ಕಲೆತಿರುವುದರಿಂದಲೇ ಈ ಮ್ಯಾಜಿಕ್ ಸೃಷ್ಟಿಯಾಗಿದೆ ಎನ್ನಲಡ್ಡಿಯಿಲ್ಲ.
ಹಾಡಿನಲ್ಲಿ ಜಗ್ಗೇಶ್- ಅದಿತಿ ಪ್ರಭುದೇವ ಅವರಿಗೆ ಕಲಾವಿದೆಯರಾದ ವೀಣಾ ಸುಂದರ್ ಮತ್ತು ಹೇಮಾ ದತ್ ಸಾಥ್ ನೀಡಿದ್ದಾರೆ. ಸಿನಿಮಾದ ಹಾಡೇ ಹೊಟ್ಟೆ ಹುಣ್ಣಾಗುವಂತೆ ನಗಿಸುವಂತಿದೆ, ಇನ್ನು ಸಿನಿಮಾ ಎಷ್ಟು ನಗಿಸಬಹುದು ಎನ್ನುವ ಕಾತರವನ್ನು ‘ಹೀರೇಕಾಯಿ ಸಾಂಗ್’ ಅಲ್ಲಲ್ಲ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಹುಟ್ಟುಹಾಕಿದೆ. (ಕಪ್ರಡಾ)