ಶಾಸಕಿ ರೂಪಾಲಿ ನಾಯ್ಕ್ ಪುತ್ರನ ಅದ್ಧೂರಿ ಕಲ್ಯಾಣ : ಪರ್ಭತ್ ಕೈ ಹಿಡಿದ ಮೈಸೂರಿನ ರೇಖಾ
ಸುಮಾರು ಐದು ಎಕರೆ ವಿಶಾಲ ಪ್ರದೇಶದಲ್ಲಿ ಸಿದ್ಧಪಡಿಸಲಾಗಿದ್ದ ವಿವಾಹ ಮಹೋತ್ಸವದ ಮಂಟಪ ಮದುವೆಗೆ ಆಗಮಿಸಿದ್ದವರ ಕಣ್ಮನ ಸೆಳೆಯಿತು. ಸುಮಾರು 30ಕ್ಕೂ ಅಧಿಕ ತರಹೇವಾರಿ ಖಾದ್ಯಗಳ ಭೂರಿಭೋಜನವನ್ನ ಅತಿಥಿಗಳಿಗಾಗಿ ಉಣಬಡಿಸಲಾಯಿತು..
ಕಾರವಾರ : ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುತ್ತಾರೆ. ಆದರೆ, ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ತಮ್ಮ ಮಗನ ಮದುವೆಗಾಗಿ ಸ್ವರ್ಗವನ್ನೇ ಧರೆಗಿಳಿಸಿದ್ದರು.
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್‌ರ ಮುದ್ದಿನ ಮಗ, ಪರ್ಭತ್ ನಾಯ್ಕ್ ಇಂದು ಕಾರವಾರ ತಾಲೂಕಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಗ್ರಾಮೀಣ ಪ್ರದೇಶವಾದ ನಿವಳಿಯಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಮೈಸೂರಿನ ಬೆಡಗಿ ರೇಖಾಳ ಕೈ ಹಿಡಿದರು.
ಶಾಸಕಿ ರೂಪಾಲಿ ನಾಯ್ಕ್ ಪುತ್ರನ ಅದ್ಧೂರಿ ಕಲ್ಯಾಣೋತ್ಸವ..
ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡಿದ್ದ ಅದ್ಧೂರಿ ಮಂಟಪದಲ್ಲಿ, ಮೂವರು ವೈದಿಕರ ನೇತೃತ್ವದಲ್ಲಿ ನಡೆದ ಮದುವೆಯ ವಿಧಿ- ವಿಧಾನದಲ್ಲಿ ರೇಖಾಳೊಂದಿಗೆ ಪರ್ಭತ್ ಸಪ್ತಪದಿ ತುಳಿದರು.
ಮಂಗಳವಾದ್ಯ, ಮೈಸೂರಿನ ಇಂಗ್ಲಿಷ್ ಬ್ಯಾಂಡ್, ಹೊನ್ನಾವರ ಹಡಿನಬಾಳದ ಬ್ಯಾಂಡ್ ಸೆಟ್ಗಳ ಜೊತೆಗೆ ಖ್ಯಾತ ಬಹುಭಾಷಾ ಗಾಯಕ ವಿಜಯ ಪ್ರಕಾಶ್-ಅನುರಾಧಾ ಭಟ್ ಅವರ ಆರ್ಕೆಸ್ಟ್ರಾ ವಿವಾಹ ಮಹೋತ್ಸವದಲ್ಲಿ ಮೆರುಗು ನೀಡಿದವು.
ಈ ಅದ್ಧೂರಿ ವಿವಾಹಕ್ಕೆ ಹತ್ತಾರು ಸಚಿವ, ಶಾಸಕರು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅತಿಥಿ, ಗಣ್ಯರು, ಕುಟುಂಬಸ್ಥರು, ಬಂಧು- ಬಾಂಧವರು, ಗ್ರಾಮಸ್ಥರು ಸಾಕ್ಷಿಯಾದರು.
ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರುಗಳಾದ ಶಿವರಾಮ ಹೆಬ್ಬಾರ್, ಜಗದೀಶ್ ಶೆಟ್ಟರ್, ಕೋಟ ಶ್ರೀನಿವಾಸ್ ಪೂಜಾರಿ, ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಶಾಂತರಾಮ ಸಿದ್ದಿ, ಚಿತ್ರನಟಿ, ಬಿಜೆಪಿ ಮಹಿಳಾ ಮುಖಂಡೆ ತಾರಾ ಅನುರಾಧಾ, ಶಾಸಕ ಸುನೀಲ್ ನಾಯ್ಕ ಸೇರಿದಂತೆ ಅನೇಕರು ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡರು.
ಸುಮಾರು ಐದು ಎಕರೆ ವಿಶಾಲ ಪ್ರದೇಶದಲ್ಲಿ ಸಿದ್ಧಪಡಿಸಲಾಗಿದ್ದ ವಿವಾಹ ಮಹೋತ್ಸವದ ಮಂಟಪ ಮದುವೆಗೆ ಆಗಮಿಸಿದ್ದವರ ಕಣ್ಮನ ಸೆಳೆಯಿತು. ಸುಮಾರು 30ಕ್ಕೂ ಅಧಿಕ ತರಹೇವಾರಿ ಖಾದ್ಯಗಳ ಭೂರಿಭೋಜನವನ್ನ ಅತಿಥಿಗಳಿಗಾಗಿ ಉಣಬಡಿಸಲಾಯಿತು.
ಅಂಕೋಲಾ ಮತ್ತು ಕಾರವಾರದಿಂದ ಸಾರಿಗೆ ಬಸ್, ಖಾಸಗಿ ಬಸ್ಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ವಾಹನಗಳ ಪಾರ್ಕಿಂಗ್ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿಯ ಕಾರ್ಯಕರ್ತರು, ಸ್ಥಳೀಯ ಯುವಕರು ಸ್ವಯಂಸೇವಕರಾಗಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ಬೀಳ್ಕೊಟ್ಟರು. ಕಾರವಾರ ನಗರದಿಂದ ರಸ್ತೆಯುದ್ದಕ್ಕೂ, ವಿವಾಹ ಮಹೋತ್ಸವದ ಮಂಟದಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು. (etbk)