

ಜಾತ್ರೆ,ಹಬ್ಬಗಳಲ್ಲಿ ಜನರಿಗೆ ರಕ್ಷಣೆ ಭದ್ರತೆ ನೀಡುವ ಪೊಲೀಸರು ಜಾತ್ರೆ ನಡೆಸಿದರೆ ಹೇಗಿರುತ್ತೆ ಎನ್ನುವ ಕತೂಹಲವಿದ್ದವರು ಈ ಸ್ಟೋರಿಯನ್ನು ಕಡ್ಡಾಯವಾಗಿ ಓದಲೇಬೇಕು. ಹೌದು ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬೀರಗುಂಡಿ ಭೂತೇಶ್ವರ ಜಾತ್ರೆ, ಈ ಜಾತ್ರೆಯ ವಿಶೇಶವೆಂದರೆ ಇಲ್ಲಿ ಜಾತ್ರೆ ಸಂಘಟಕರು ಪೊಲೀಸರು.
ಈ ದಿನ ಇಲ್ಲಿ ಪೊಲೀಸರು ಸಮವಸ್ತ್ರ ತೊಡದೆ ಜಾತ್ರೆಯ ಭಜಕರಾಗಿ ಕೆಲಸಮಾಡುತ್ತಾರೆ. ಈ ಜಾತ್ರೆಯನ್ನು ಪೊಲೀಸರೇ ಯಾಕೆ ನಡೆಸುತ್ತಾರೆ ಎನ್ನುವ ಪ್ರಶ್ನೆ ಏಳುವುದು ಸಹಜ, ಅದಕ್ಕೂ ಒಂದು ಚರಿತ್ರೆಯಿದೆ. ಹಲವು ವರ್ಷಗಳ ಹಿಂದೆ ಈಗ ಪೊಲೀಸ್ ಠಾಣೆ ಇರುವ ಪ್ರದೇಶದಲ್ಲಿ ಈ ಭೂತೇಶ್ವರ ದೇವರಿದ್ದಿತ್ತಂತೆ ನಂತರ ಈ ಪ್ರದೇಶದಲ್ಲಿ ಪೊಲೀಸ್ ಠಾಣೆ ನಿರ್ಮಾಣವಾದ ಮೇಲೆ ಸ್ಥಳಾಂತರವಾದ ಭೂತೇಶ್ವರ ದೇವರಿಗೆ ಪೂಜಿಸಿ ಹರಕೆ ಹೊತ್ತುಕೊಂಡರೆ ಕಳ್ಳರನ್ನು ಹಿಡಿಯುವುದು ಸೇರಿದಂತೆ ಪೊಲೀಸರ ಕೆಲಸಗಳೆಲ್ಲಾ ಸರಾಗವಾಗಿ ಆಗುತಿದ್ದವಂತೆ.
ಇಂಥ ನಂಬಿಕೆ ಕಾರಣಕ್ಕೆ ಪೊಲೀಸರು ಸಂಘಟಿಸಲು ಪ್ರಾರಂಭಿಸಿದ ಈ ಜಾತ್ರೆಗೆ ಈಗ ೩೦ ವರ್ಷ ಕಳೆದಿದೆ.
ಪ್ರತಿವರ್ಷ ಹೊಸವರ್ಷದ ಒಂದು ದಿನ ನಡೆಯುವ ಈ ಜಾತ್ರೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕೂಡಾ ಮಾಡುತ್ತಾರೆ. ಇಂದು ನಡೆದ ಈ ಜಾತ್ರೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಜಾತ್ರೆಗೆ ಬಂದವರಿಗೆ ಅಡಿಗೆ ಬಡಿಸಿ,ಜನರೊಂದಿಗೆ ತಾವೂ ಬೆರೆತು ಊಟ ಮಾಡಿದರು.
ಹೀಗೆ ದೇವರಿಗೆ ಪೂಜಿಸಿ, ಅನ್ನಸಂತರ್ಪಣೆ ಮಾಡಿ ಸಾರ್ವಜನಿಕರೊಂದಿಗೆ ಬೆರೆತರೆ ಜನಸ್ನೇಹಿ ಪೊಲೀಸ್ ಉದ್ದೇಶವೂ ಈಡೇರಿದಂತಾಗುತ್ತದೆ ಎನ್ನುವುದು ಇಲಾಖೆಯ ಅಭಿಮತ.ಪೊಲೀಸರೇ ನಡೆಸುವ ಈ ಜಾತ್ರೆಗೆ ಎಲ್ಲಾ ಸಹಕಾರ ನೀಡುವ ಸ್ಥಳಿಯರು ಪೊಲೀಸರು,ಅವರ ಕುಟುಂಬದೊಂದಿಗೆ ಬೆರೆತು ಸಂಬ್ರಮಿಸುತ್ತಾರೆ. ದಿನಂಪ್ರತಿ ಜಾತ್ರೆ, ಹಬ್ಬ,ಕಾರ್ಯಕ್ರಮಗಳಿಗೆ ರಕ್ಷಣೆ ನೀಡುವ ಪೊಲೀಸರು ಈ ಜಾತ್ರೆಯಲ್ಲಿ ಸಮವಸ್ತ್ರ,ಇಲಾಖೆಯ ರೀತಿ ರಿವಾಜುಗಳನ್ನು ಬಿಟ್ಟು ಜನಸಾಮಾನ್ಯರಂತೆ ಪಾಲ್ಗೊಳ್ಳುವುದರಿಂದ ಸ್ಥಳೀಯರಿಗೂ ಪೊಲೀಸರ ಬಗ್ಗೆ ಭಿನ್ನ ಭಾವ ಉಂಟಾಗುತ್ತದೆ. ನಂಬಿಕೆ,ಸಾಹಾರ್ದತೆ,ಸಮಾಧಾನಗಳ ಹಿನ್ನೆಲೆಯಲ್ಲಿ ಪೊಲೀಸರ ಸಂಘಟನೆಯಲ್ಲಿ ನಡೆಯುವ ಈ ಜಾತ್ರೆ ರಾಜ್ಯದ ಅಪರೂಪದ ಪೊಲೀಸ್ ಜಾತ್ರೆಗಳಲ್ಲಿ ಒಂದು ಎನ್ನಲಾಗಿದೆ. ಈ ಜಾತ್ರೆಯಲ್ಲಿ ಪೊಲೀಸರೊಂದಿಗೆ ಇತರ ಇಲಾಖೆಯ ಸಿಬ್ಬಂದಿಗಳೂ ಸಾರ್ವಜನಿಕರಂತೆ ಬೆರೆತು ಜಾತ್ರೆ ಆಚರಿಸುವುದು ಬೀರಗುಂಡಿ ಭೂತೇಶ್ವರ ಜಾತ್ರೆಯ ವಿಶೇಶ.
