


ಮಾ.15 ರಿಂದ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ : ಸಕಲ ಸಿದ್ಧತೆ
ರಾಜ್ಯದ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿರಸಿಯ ಮಾರಿಕಾಂಬ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ದೇವಾಲಯ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಾರ್ಚ್ 15ರಿಂದ 23ರ ವರೆಗೆ ಜಾತ್ರೆ ನಡೆಯಲಿದೆ.
ಶಿರಸಿ(ಉತ್ತರ ಕನ್ನಡ) : ರಾಜ್ಯದ ಅತಿದೊಡ್ಡ ಜಾತ್ರೆ ಅಂತ ಹೆಗ್ಗಳಿಕೆ ಪಡೆದಿರೋ ಶಿರಸಿಯ ಮಾರಿಕಾಂಬಾ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಯ ಮುಂಚಿತವಾಗಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದು, ಜಾತ್ರೆಗೆ ಅಗತ್ಯವಿರುವ ಗದ್ದುಗೆ ಮಂಟಪ, ಪೊಲೀಸ್ ಬಂದೋಬಸ್ತ್ ಸೇರಿದಂತೆ ಅಗತ್ಯ ಸಿದ್ಧತೆಗಳು ದೇವಸ್ಥಾನದಿಂದ ಮತ್ತು ಪೊಲೀಸ್ ಇಲಾಖೆಯಿಂದ ನಡೆದಿವೆ.
ಮಾ.15 ರಿಂದ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ
ದಕ್ಷಿಣ ಭಾರತದಲ್ಲೇ ಅತಿದೊಡ್ಡ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಮಾರಿಕಾಂಬಾ ಜಾತ್ರೆ ಮಾರ್ಚ್ 15 ರಿಂದ 23ರವರೆಗೆ ನಡೆಯಲಿದ್ದು, ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ 15 ರ ರಾತ್ರಿ ದೇವಿಯ ಕಲ್ಯಾಣೋತ್ಸವ ಜರುಗಲಿದ್ದು, 16 ರ ಬೆಳಗ್ಗೆ ರಥೋತ್ಸವ ಜರುಗಲಿದೆ. ನಂತರ 5 ದಿನಗಳ ಕಾಲ ಸೇವಾ ಕಾರ್ಯಗಳು ನೆರವೇರಲಿದ್ದು, ಮಾ. 23 ರಂದು ದೇವಿಯು ನಿರ್ಗಮಿಸಲಿದ್ದಾಳೆ. ಈಗಾಗಲೇ ದೇವಿಯ ರಥೋತ್ಸವದ ವರೆಗಿನ ಎಲ್ಲಾ ಧಾರ್ಮಿಕ ವಿಧಾನಗಳು ಅಚ್ಚುಕಟ್ಟಾಗಿ ನಡೆದಿದ್ದು, ದೇವಿಯ ಪ್ರತಿಷ್ಠಾಪನೆಗೊಳ್ಳುವ ಮಂಟಪವೂ ಉತ್ತಮವಾಗಿ ರಚನೆಯಾಗಿದೆ.
ಈ ಬಗ್ಗೆ ದೇವಾಲಯದ ಅಧ್ಯಕ್ಷ ಆರ್ ಜಿ ನಾಯ್ಕ್ ಅವರು ಮಾತನಾಡಿ, ಈ ಬಾರಿಯ ಜಾತ್ರಾ ವೈಭವಕ್ಕಾಗಿ ಸಕಲ ಸಿದ್ಧತೆಗಳೂ ನಡೆಯುತ್ತಿದ್ದು, ಶಿರಸಿಯ ಹೃದಯ ಭಾಗವಾಗಿರೋ ಬಿಡಕಿ ಬೈಲಲ್ಲಿ ದೇವಿಯ ಗದ್ದುಗೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಒಂದೆಡೆ ದೇವಿಯ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಮತ್ತೊಂದೆಡೆ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ. ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಪಡೆಯನ್ನೂ ರಚಿಸಲಾಗಿದೆ.
ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದ್ದು, ಅಷ್ಟೇ ವೇಗದಲ್ಲಿ ಸಕಲ ಸಿದ್ಧತೆಗಳು ಕೂಡಾ ನಡೆಯುತ್ತಿದೆ. ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ವಿಶಾಲ ಹೊರಾಂಗಣವನ್ನ ತಯಾರು ಮಾಡಲಾಗುತ್ತಿದೆ. ಇನ್ನೇನು ಎರಡು ದಿನದಲ್ಲಿ ಪ್ರಾರಂಭಗೊಳ್ಳುವ ದೇವಿಯ ಜಾತ್ರಾ ಮಹೋತ್ಸವವನ್ನ ಕಣ್ತುಂಬಿಕೊಳ್ಳಲು ರಾಜ್ಯಾದ್ಯಂತ ಭಕ್ತರು ಎದುರು ನೋಡುತ್ತಿದ್ದಾರೆ. (etbk)
