


ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದೆ.
ಶಿರಸಿ(ಉತ್ತರ ಕನ್ನಡ): ರಾಜ್ಯದ ಪ್ರಸಿದ್ಧ, ನಾಡಿನ ಅಧಿದೇವತೆ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ವಿದ್ಯುಕ್ತವಾಗಿ ಮಂಗಳವಾರದಿಂದ ಪ್ರಾರಂಭವಾಗಿದೆ. ಬುಧವಾರ ದೇವಸ್ಥಾನದಿಂದ ರಥದ ಮೂಲಕ ಆಗಮಿಸಿದ ತಾಯಿ ಇಲ್ಲಿನ ಬಿಡಕಿ ಬೈಲಿನ ಗದ್ದುಗೆಯಲ್ಲಿ ಪ್ರತಿಷ್ಠಾಪನೆಯಾಗಿದ್ದಾಳೆ.
ಮಾರಿಕಾಂಬಾ ದೇವಿಯ ಕಲ್ಯಾಣೋತ್ಸವ ಮಂಗಳವಾರ ತಡರಾತ್ರಿ ಜರುಗಿತು. ಬುಧವಾರ ಬೆಳಿಗ್ಗೆ ಅಮ್ಮನ ಮೆರವಣಿಗೆಯ ರಥೋತ್ಸವ ನಡೆಯಿತು. ಮಧ್ಯಾಹ್ನ ಸುಮಾರು 12.57ಕ್ಕೆ ಮಾರಿಕಾಂಬೆ ಗದ್ದುಗೆಯನ್ನು ಅಲಂಕರಿಸಿದ್ದು, ಅಪಾರ ಸಂಖ್ಯೆಯ ಭಕ್ತರ ಜಯಘೋಷದೊಂದಿಗೆ ಪ್ರತಿಷ್ಠಾಪನಾ ಕಾರ್ಯ ಜರುಗಿದೆ.
ರಥೋತ್ಸವ: ಬುಧವಾರ ಬೆಳಿಗ್ಗೆ 7.23ಕ್ಕೆ ಮಾರಿಕಾಂಬೆಯ ರಥವನ್ನೇರಿದ್ದು, 8.36ಕ್ಕೆ ದೇವಾಲಯದ ರಥ ಆವರಣದಿಂದ ಹೊರಟಿದೆ. ಬಿಡಕಿ ಬೈಲಿನಲ್ಲಿರುವ ಜಾತ್ರಾ ಗದ್ದುಗೆಗೆ ಬರುವ ವೇಳೆಗಾಗಲೇ ಸೂರ್ಯ ನೆತ್ತಿ ಸುಡುತ್ತಿದ್ದ. ಉರಿವ ಬಿಸಿಲು ಲೆಕ್ಕಿಸದೇ ಅಮ್ಮನ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು. ರಥೋತ್ಸವದುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಸೇರಿದ ಜನಸ್ತೋಮ ದೇವಿ ಮಾರಿಕಾಂಬೆ ಜಾತ್ರಾ ಗದ್ದುಗೆಗೆ ಆಸೀನಳಾಗುವವರೆಗೂ ಶಾಂತಿಯಿಂದ ಪಾಲ್ಗೊಂಡರು. (etbk)
