

ಮೈಸೂರು, ಮಾ.೨೫ : ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ‘ನಮ್ಮ ಆರೆಸ್ಸೆಸ್’ ಎಂದು ಹೇಳುವ ಮೂಲಕ ಕೋಮುವಾದ ಮತ್ತು ಜಾತೀಯತೆಯನ್ನು ಪೋಷಣೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಆದವರು ಯಾವುದೇ ರಾಜಕೀಯ ಪಕ್ಷದ ಪರವಾಗಿ ಇರಬಾರದು, ಪಕ್ಷಾತೀತವಾಗಿ ಅವರು ಕರ್ತವ್ಯ ನಿರ್ವಹಿಸಬೇಕು, ಆದರೆ ವಿಶ್ವೇಶ್ವರ ಹೆಗಡೆ ಕಾಗೇರಿ ‘ನಮ್ಮ ಆರೆಸ್ಸೆಸ್’ ಎಂದು ಹೇಳುವ ಮೂಲಕ ಮತ್ತೆ ಜಾತೀಯತೆ, ವರ್ಣಭೇದ, ಮೇಲು ಕೀಳು ಮತ್ತು ಕೋಮುವಾದವನ್ನು ಪೋಷಣೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
೧೯೨೫ರಲ್ಲಿ ಆರೆಸ್ಸೆಸ್ ರಚನೆ ಆಯಿತು. ಹೆಡಗೇವಾರ್ ಇದನ್ನು ಹುಟ್ಟುಹಾಕಿದರು. ಅಂದಿನಿಂದ ಇಂದಿನವರೆಗೆ ಅಸ್ಪೃಶ್ಯತೆ ಬಗ್ಗೆ ಹೋರಾಡಿದ್ದಾರ? ಸಮಾನತೆ ಬಗ್ಗೆ ಹೋರಾಡಿದ್ದಾರ? ಹೋಗಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರ? ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರ ಹೆಸರು ಹೇಳಲಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಸ್ಪೀಕರ್ ಆದವರು ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಲಹೆ ನೀಡಿದರು.
ಬಿಜೆಪಿಯವರ ಆಡಳಿತ ಸಂಪೂರ್ಣ ಕುಸಿತ ಕಂಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಖ್ಯಮಂತ್ರಿಯ ಅಂಗರಕ್ಷಕ ಪೊಲೀಸರೇ ಗಾಂಜಾ ಮಾರಾಟ ಮಾಡುತ್ತಾರೆ ಎಂದರೆ ಇವರ ಆಡಳಿತಕ್ಕೆ ಇದಕ್ಕಿಂತ ಬೇರೆ ಕನ್ನಡಿ ಬೇಕೆ? ಮಂಡ್ಯದಲ್ಲಿ ತಹಶೀಲ್ದಾರ್ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ೧೦೦ ಮೂಟೆ ಪಡಿತರ ಅಕ್ಕಿಯನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದರೆ, ಪೊಲೀಸರು ಆ ಅಕ್ಕಿಯೇ ಇಲ್ಲದಂತೆ ಮಾಯ ಮಾಡಿದ್ದಾರೆ. ಇದರ ಅರ್ಥ ಕಾನೂನು ಇವರ ಹಿಡಿತದಲ್ಲಿದೆಯೇ ಎಂಬುದು ಅರ್ಥವಾಗುತ್ತಿದೆ ಎಂದು ಸಿದ್ದರಾಮಯ್ಯ ಕುಟುಕಿದರು.
(ಆಕರ : ವಾರ್ತಾಭಾರತಿ ೨೫.೩.೨೦೨೨)
