

ಸಿದ್ಧಾಪುರ ತಾಲೂಕಿನ ಹುಲಿಮನೆಯ ಕೃಷಿಕ ಕಮಲಾಕರ ಮಹಾಬಲೇಶ್ವರ ನಾಯ್ಕ ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಉತ್ತಮ ಕೃಷಿಕರೂ, ಮಿತಭಾಷಿಯೂ ಆಗಿದ್ದ ಕಮಲಾಕರ ನಾಯ್ಕ (೪೯) ಪತ್ನಿ,ಪುತ್ರಿ,ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶನಿವಾರ ಮುಂಜಾನೆ ಇವರ ಅಂತ್ಯಕ್ರೀಯೆ ಹುಲಿಮನೆಯಲ್ಲಿ ನಡೆಯಲಿದೆ. ಮೃತರ ಆತ್ಮಕ್ಕೆ ಸದ್ಘತಿ ಕೋರಿ ವಕೀಲ ಕೆ.ಜಿ.ನಾಯ್ಕ,ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ.ಆಯ್. ನಾಯ್ಕ,ಅಣ್ಣಪ್ಪ ನಾಯ್ಕ, ರಾಮಾನಾಯ್ಕ,ಗುರುಮೂರ್ತಿ ನಾಯ್ಕ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಸಿದ್ದಾಪುರದ ಬಡವರ ಪಾಲಿನ ಧನ್ವಂತರಿ ದಿ. ಡಾ.ಎಮ್ ಪಿ.ಶೆಟ್ಟಿ ವೈದ್ಯರು
೨೦೦೪ ರ ಅಗಸ್ಟ ತಿಂಗಳ ಒಂದಿನ. ಜಡಿ ಮಳೆಯ ರಾತ್ರಿ. ಸಮಯ ಸುಮಾರು ೧೧-೦೦ ಗಂಟೆ. ಅಮಾವಾಸ್ಯೆ ಕತ್ತಲು ಬೇರೆ…ನನ್ನ ಒಂದು ವರ್ಷದ ಮಗಳಿಗೆ ಇದ್ದಕ್ಕಿದ್ದಂತೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಸಿದ್ದಾಪುರದಿಂದ ಹತ್ತು ಕಿ.ಮೀ ದೂರದ ಹಿತ್ತಲಕೊಪ್ಪ ಹಳ್ಳಿಯಲ್ಲಿ ವಾಸವಿದ್ದ ನಮಗೆ ಒಂದು ಕ್ಷಣ ಏನು ಮಾಡಬೇಕೆಂದು ತೋಚಲಿಲ್ಲ. ಒದ್ದೆಬಟ್ಟೆಯಿಂದ ಮಗುವಿನ ತಲೆ, ಎದೆಭಾಗ ವರೆಸಿ ಬಿಸಿ ಹಾಲು ಕುಡಿಸಿ ಲಘುಬಗೆಯಿಂದ ಹಳ್ಳಿಯಲ್ಲೇ ಇರುವ ಒಂದೇ ಒಂದು ಅಪಾದ್ಭಾಂದವ ವಾಹನ ಜೀಪೊಂದಿತ್ತು. ಈಗಿನಂತೆ ಮನೆಗೊಂದು ಕಾರು, ಟ್ಯಾಕ್ಸಿ ಇರಲಿಲ್ಲ. ಅದೇ ಜೀಪಿನ ಚಾಲಕ ಮಂಜು ಮನೆ ಬಾಗಿಲು ತಟ್ಟೆ ಅಂತೂ ಇಂತೂ ಕರೆತರಲಾಯಿತು. ಪತ್ನಿ ಲಘು ಬಗೆಯಿಂದ ಕೈಗೆ ಸಿಕ್ಕಿದ ಬಟ್ಟೆ ನೀರಿನ ಬಾಟಲ್ ಗಳನ್ನು ಚೀಲಕ್ಕೆ ತುರುಕಿ ಮಗುವನ್ನು ನನ್ನ ಕೈಗಿತ್ತಳು. ಒಂದೇ ಸಮನೆ ಸುರಿಯುತ್ತಿದ್ದ ಮಳೆ, ಜೊತೆಗೆ ಅಮಾವಾಸ್ಯೆಯ ಕರ‍್ಗತ್ತಲನ್ನು ಜೀಪಿನ ಹೆಡ್ ಲೈಟ್ ಸೀಳಿಕೊಂಡು ರೊಯ್… ಗುಟ್ಟುತ್ತ ಸಮೀಪದ ತಾಳಗುಪ್ಪ ಡಾಕ್ಟರ್ ಒಬ್ರ ಮನೆಗೆ ಹೋದೆವು. ಎಷ್ಟೇ ಬಾಗಿಲು ಬಡಿದರೂ ತೆಗೆಯಲೇ ಇಲ್ಲ. ಮತ್ತೆ ಸ್ವಲ್ಪ ಹೊತ್ತು ಜೋರಾಗಿ ಬಡಿದಾಗ ಒಳಗಿನಿಂದ ಲೈಟ್ ಮೂಡಿತು. ಸ್ವಲ್ಪ ಸಮಾಧಾನ. ಬಾಗಿಲ ತೆರೆಯದೇ ಪಕ್ಕದ ಕಿಟಕಿಯ ಒಳಗಿನಿಂದಲೇ ಒಬ್ಬ ವ್ಯಕ್ತಿ “ಯಾರದು ಇಷ್ಟೊತ್ತಲ್ಲಿ.? ಗಟ್ಟಿ ಧ್ವನಿಯಲ್ಲಿ ಕೂಗಿದ ಶಬ್ದ. ನಾನು ಆತಂಕದಿಂದಲೇ “ಸರ್ ನಮ್ಮ ಮಗುವಿಗೆ ಸಿಕ್ಕಾಪಟ್ಟೆ ಜ್ವರಬಂದಿದೆ. ದಯವಿಟ್ಟು ಚಕ್ ಮಾಡಿ ಔಷಧ ನೀಡಿ” ಎಂದೆ. ಒಳಗಿಂದಲೇ “ನಾನು ಇಷ್ಟೊತ್ತಲ್ಲಿ ನೋಡಲ್ಲ, ಅದರಲ್ಲೂ ಮಕ್ಕಳಿಗೆ ಇಂತಾ ರಾತ್ರಿ ವೇಳೆ ನೋಡಲ್ಲ ನೀವು ಸಾಗರ ಅಥವಾ ಶಿರಸಿ ಕರಕೊಂಡು ಹೋಗಿ. ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ನಮ್ಮ ತಲೆ ತಿಂತೀರಾ ಹೋಗಿ, ಹೋಗಿ ” ಎಂದು ಲೈಟ್ ಆಪ್ ಮಾಡಿಯೇ ಬಿಟ್ರು.
ಮುಂದೆ ದಿಕ್ಕು ತೋಚದ ಸ್ಥಿತಿ. ಅಳುವುದೊಂದೇ ಬಾಕಿ.! ಮುಂದೇನು ಸಾಗರದಲ್ಲಿ ಯಾರೂ ಪರಿಚಿತರಿವಲ್ಲವಲ್ಲ!, ನೋಡೋಣ ಸಿದ್ದಾಪುರಕ್ಕೆ ಹೋದರೆ ಅಲ್ಲಿಂದ ಶಿರಸಿಗಾದರೂ ಹೋಗಬಹುದು ಎಂದು ಮತ್ತೆ ಜೀಪ ನ್ನೇರಿದೆವು.
ಸಿದ್ದಾಪುರ ಪಟ್ಟಣದ ಆಸ್ಪತ್ರೆ ಮುಂದೆ ಬಂದುನಿಂತಾಗ ಮತ್ತೆ ನಿರಾಶೆ. ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರಿರಲಿ ಯಾವ ವೈದ್ಯರೂ ಇರಲಿಲ್ಲ. ರಾತ್ರಿ ಸುಮಾರು ೧೨ ಗಂಟೆಯಾಗಿರಬಹುದು. ನರ‍್ಸ ” ಡಾಕ್ಟರ್ ಇಲ್ಲ , ನಾವು ಚಿಕಿತ್ಸೆ ಕೊಡೋಕೆ ನಮಗೆ ಪರ‍್ಮಿಶನ್ ಇಲ್ಲ” ಎಂದು ಆದೇಶ ವಾಣಿಯಿತ್ತರು. ಮಗುವಿನ ಜ್ವರ ಬಾಧೆ ಹೆಚ್ಚುತ್ತಲೇ ಇತ್ತು.ನಮ್ಮಿಬ್ಬರ ಸ್ಥಿತಿ ಏನಾಗಿರಬೇಡ. ಚಾಲಕ ಮಂಜು “ಸರ್ , ಶೆಟ್ಟಿ ಡಾ. ಮನೆಗೆ ಹೋಗೋಣ ಸರ್. ಅವರು ಖಂಡಿತವಾಗಿ ನೋಡ್ತಾರೆ.” ಸಲಹೆ ಕೊಟ್ಟ. ಮುಳುಗುವವನಿಗೆ ಹುಲ್ಲಿನ ಕಡ್ಡಿಯೇ ಆಸರೆಯೆಂದು ತಲೆಯಾಡಿಸಿದೆವು. ಜೀಪ್ ಸೊರಬಾ ರಸ್ತೆಯಲ್ಲಿರುವ ಡಾ.ಎಮ್ ಪಿ ಶೆಟ್ಟಿ ಯವರ ಮನೆಬಾಗಿಲಿಗೆ ಬಂದು ನಿಂತಿತು.
ಗೇಟ್ ತಲುಪುತಿದ್ದಂತೆ ಬ್ರಹದಾಕಾರದ ಎರಡು ಶಪರ‍್ಡ ನಾಯಿಗಳು ಬೌ,ಬೌ, ಶಬ್ದಮಾಡಲಾರಂಭಿಸಿದವು. ಏನುಮಾಡಬೇಕೆಂದು ತೋಚದೆ ಸ್ವಲ್ಪ ಹೊತ್ತು ಗೇಟ್ ಬಡಿಯುತ್ತ ನಿಂತೆವು. ನಾಯಿಗಳ ಕಾಲಿಂಗ್ ಬೆಲ್! ಶಬ್ದದ ಮಧ್ಯದಲ್ಲಿಯೇ ಶ್ವೇತವಸ್ತ್ರದ ಶ್ವೇತರ‍್ಣಿ ವೃದ್ದರೊಬ್ಬರು ಹೊರಬಂದರು. ದೂರದ ಹಾನಗಲ್ ನಿಂದ ಒಂದು ತಿಂಗಳ ಮೊದಲಷ್ಟೇ ಇಲ್ಲಿಗೆ ಬಂದ ನನಗೆ ಅವರ ಪರಿಚಯವಿರಲಿಲ್ಲ. ಚಾಲಕ ಮಂಜು ” ಸರ್ ಇವರು ನಮ್ಮೂರ ಮೇಷ್ಟ್ರು ಹೊಸದಾಗಿ ಬಂದಿದ್ದಾರೆ, ಇವರ ಮಗುಗೆ ತುಂಬಾ ಜ್ವರವಂತೆ” ಎಂದ. ತಕ್ಷಣ ಇಷ್ಟೊತ್ನಲ್ಲಿ ಬಂದರೆ ನಾನೇನ ಮಾಡ್ಲಿ ಸಂಜೆ ವರೆಗೂ ಹಾಳ ಹರಟೆ ಹೊಡಿತೀರಾ , ಗಂಟಲವರೆಗ ಬಂದಾಗ ಇಲ್ಲಿಗೆ ಓಡಿ ಬರತೀರಾ…ಸ್ವಲ್ಪ ಜೋರಾಗೆ ರೇಗಿದರು. ” ಇಲ್ಲ ಸರ್ ನಾನೂರಲ್ಲಿ ಇರಲಿಲ್ಲ. ಟ್ರೈನಿಂಗ್ ಹೋಗಿದ್ದೆ. ರಾತ್ರಿ ಒಂಬತ್ತಕ್ಕೆ ಮನೆಗೆ ಬಂದೆ. ಜ್ವರ ಕಡಿಮೆ ಇತ್ತು ಬೆಳಗ್ಗೆ ಆಸ್ಪತ್ರೆಗೆ ಹೋಗೋಣ ಅಂತಾ..ಏನೇನೋ ಹೇಳುತ್ತಿದ್ದಂತೆ ಒಳ ಕರೆದು ಕಿವಿಗೆ ಸ್ಥೆತಾಸ್ಕೋಪ್ ಹಾಕಿ ಮಗುವನ್ನು ಪರೀಕ್ಷಿಸಿ ಒಂದು ಸಿರೀಂಜ್ ಪ್ಯಾಕ್ ಹರಿದು ಔಷಧ ತುಂಬಿ ಇಂಜೆಕ್ಷನ್ ನೀಡಿದರು. ಹಾಗೇ ಒಂದು ಚಿಕ್ಕ ಚಪ್ ನಲ್ಲಿ ಕೆಂಪು ಬಣ್ಣದ ಔಷಧ ಅವರೇ ಕುಡಿಸಿದರು. “ಹೊರಗಿನ ವರಾಂಡದಲ್ಲಿ ಇರುವ ಆ ಕಾಟ್ ಮೇಲೆ ಮಲಗಿಸಿ” ಎಂದು ಜ್ವರ ಬಂದ ಹಾಗೂ ಶೀತಲ ವಾತಾವರಣದ ಕುರಿತು ಮ ಹೇಳಿದರು.
ಹೊರಗೆ ಬಂದು ಜೇಬಿಗೆ ಕೈಹಾಕಿದೆ. ಆಗ ಸಾವಿರ ರೂ ನೋಟುಗಳ ದರಬಾರು..!. ಒಳಹೋಗಿ ಸಾವಿರ ರೂ ನೋಟನ್ನು ಮುಂದೆ ಮಾಡಿ ಸರ್ ಬಿಲ್ ಎಷ್ಟೆಂದು ಕೇಳಿದೆ. “ಚಿಲ್ಲರೆ ಇಲ್ವಾ ? ೫೦ ರೂ ಕೊಡಿ ಸಾಕು !” ಎನ್ನಬೇಕೆ? ನನಗೆ ಆಶ್ಚರ್ಯ ವಾಗದಿರುವುದೇ ? ನಾನು ಇರಲಿ ಬಿಡಿ ಸರ್. ಇಷ್ಟು ಹೊತ್ತಿನಲ್ಲಿ ನೀವು ಸಿಕ್ಕಿದ್ದೇ ದೊಡ್ಡದು . ದೇವರ ಸಿಕ್ಕಾಂಗಾಯ್ತು ಎಂದೆ. ಮಾಷ್ಟ್ರೇ ನೀವು ಹೊಸಬರು ಅಂತೀರಾ, ನೀವ್ ತಿಳಕೊಂಡಾಂಗೆ ನಾ ಬೇಕಾಬಿಟ್ಡಿ ಬಿಲ್ ಮಾಡಿದ್ದಿದ್ರೆ ಇಂತಾ ಹತ್ತು ಮನೆ, ಆಸ್ಪತ್ರೆಗಳನ್ನ ಕಟ್ಟಿಸ್ತಿದ್ದೆ. ಮನುಷ್ಯನಿಗೆ ಆಸೆ ಇರಬೇಕು , ಆದರೆ ದುರಾಸೆ ಇರಬಾರದು ಎಂದರು. ನಾನು ಮತ್ತೆ ಜೇಬಿಗೆ ಕೈ ಹಾಕಿ ನೂರರ ನೋಟು ಕೊಟ್ಟೆ, ಅದರಲ್ಲೂ ಐವತ್ತು ರೂ ಮರಳಿಸಿ ನಮ್ಮೊಂದಿಗೆ ಮಾತಿಗಿಳಿದರು. ವರ್ಷ ದ ಮಗು ನನ್ನ ಮಡದಿಯ ಸೆರಗಲ್ಲಿ ಸ್ವಲ್ಪ ಹೊತ್ತು ಅತ್ತು ಸುಮ್ಮನೆ ನಿದ್ರಿಸಿತು.
ಮಧ್ಯ ರಾತ್ರಿ ಕಳೆದಿದ್ದರಿಂದ ಅವರ ಗೋಡೆಯ ಗಡಿಯಾರದ ಮುಳ್ಳುಗಳು ಒಂದು ಗಂಟೆಯತ್ತ ದಾಪುಗಾಲು ಹಾಕತೊಡಗಿದವು.
ಜ್ವರ ಇಳಿಮುಖವಾಗುತ್ತಿದ್ದಂತೆ ಇಷ್ಟೊತ್ತಲ್ಲಿ ಹೋಗಬೇಡಿ. ಬೆಳಗಿನವೆರಗೂ ಇಲ್ಲಿದ್ದು ಹೋಗಿ ಎಂದು ಒಳಬಾಗಿಲು ಹಾಕಿಕೊಂಡು ಮಲಗಿದರು. ಚಾಲಕ ಮತ್ತು ನಾನು ಬೆಂಚಿನಲ್ಲೇ ಕುಳಿತೇ ನಿದ್ರೆಹೋದೆವು.
ಬೆಳಿಗ್ಗೆ ಐದು ಗಂಟೆಯಾಗಿರಬಹುದು. ಮತ್ತೆ ಬಾಗಿಲು ಟ್ರರ್…. ಶಬ್ದ ಮಾಡಿತು. ನಿದ್ರೆಯ ಮಂಪಿನಲ್ಲೆ ಎದ್ದೆ. ನೋಡಿದರೆ ಅದೇ ಡಾಕ್ಟರ್ ಮತ್ತೆ ಮಗುವನ್ನು ಪರೀಕ್ಷಿಸುತ್ತಿದ್ದರು. ಮಡದಿ ಕೃತಜ್ಞತೆಯಿಂದ ಅವರನ್ನೇ ನೋಡುತ್ತಿದ್ದಳು. ಜ್ವರ ಕಮ್ಮಿಯಾಗಿದೆ. ಶೀತವಾಗದಂತೆ ನೋಡಿಕೊಳ್ಳಿ”ಎಂದು ಒಂದು ಬಾಟಲ್ ನಲ್ಲಿ ಕೆಂಪು ಬಣ್ಣದ ಔಷಧ , ಎರಡು ತರದ ಮಾತ್ರೆ ನೀಡಿ ” ದಿನಕ್ಕೆ ಮೂರು ಭಾರಿ ಸಮಯಕ್ಕೆ ಸರಿಯಾಗಿ ಕೊಡಿ” ಎಂದರು.
ಮತ್ತೆ ಹಣ ಕೊಡಲು ಹೋದೆ. ,ಯಾವೂರು? ಎಲ್ಲಾ ವಿಚಾರಿಸಿ ಕೊನೆಗೆ ಒಂದು ನೂರು ರೂಪಾಯಿ ಮಾತ್ರ ಪಡೆದರು. ನೀವು ಮಾಷ್ಟ್ರು ಅಂತಾ ನೂರು ರೂಪಾಯಿ ಜಾಸ್ತಿ ತಗೊಂಡೆ. ಬೇರೆ ಯಾರೋ ಬಡವರು, ಕೃಷಿಕರು ಆಗಿದ್ರೆ ಅದನ್ನೂ ತಗೊಳ್ತಿದ್ದಿಲ್ಲ ಅಲ್ವೇನೋ ಮಂಜಾ…? ಅನ್ನಬೇಕೆ ಚಾಲಕ ಮಂಜನನ್ನು ನೋಡಿ.! ನನಗೆ ಆಶ್ಚರ್ಯ… ಈ ಕಾಲದಲ್ಲಿ ಇಂತಹವರೂ ಇದ್ದಾರಾ? ನಿಜವಾಗಿಯೂ ದೇವತಾಮನುಷ್ಯರು ಅಂದ್ರೆ ಇವರೆ ಅಲ್ವಾ ಅನಿಸ್ತು. ಇದೇ ಬೇರೆ ಆಸ್ಪತ್ರೆಗೆ ಹೋಗಿದ್ದರೆ , ಔಷಧ ಮಾತ್ರೆ ಹೀಗೆ ಲೆಕ್ಕ ತೋರಿಸಿ ಏನಿಲ್ಲವೆಂದರೂ ಹತ್ತು ಸಾವಿರ ಬಿಲ್ಲ ಮಾಡತಿದ್ದರಲ್ವೆ ಅಂತಾ ಚಾಲಕನೊಂದಿಗೆ ಮಾತಿಗಿಳಿದೆ.ತುಸು ಹೊತ್ತಲ್ಲಿ ಸ್ವಲ್ಪ ಸ್ವಲ್ಪ ಬೆಳಕು ಮೂಡಿದಂತಾಯ್ತು. ಮತ್ತೆ ಬಿಳಿ ಅಂಗಿ, ಪಂಜೆಯೊಂದಿಗೆ ಹೊರಬಂದರು. ನಮ್ಮ ನಮಸ್ಕಾರ ಸ್ವೀಕರಿಸಿ ಬೆಳಗಿನ ವಾಯು ವಿಹಾರಕ್ಕೆ ತೆರಳಿದರು. ಹೋಗುವಾಗ ಸರಪಳಿಯೊಂದಿಗೆ ಬಂಧಿಯಾಗಿದ್ದ ಎರಡು ಬಲಿಷ್ಠ ನಾಯಿಗಳೂ ತಮ್ಮನ್ನೂ ಕರೆದುಕೊಂಡು ಹೋಗುವಂತೆ ಒಂದೇ ಸಮನೆ ಬೊಗಳುತ್ತಿದ್ದವು. ಅಥವಾ ಶುಭಕೋರುತ್ತಿದ್ದವು. ಅಂತೂ ಬೆಳಗಿನ ಸರ‍್ಯೋದಯದ ಎಳೆ ಬಿಸಿಲಿನಲ್ಲಿ ಊರಕಡೆಗೆ ಪ್ರಯಾಣ. ಚಾಲಕ ಮಂಜುನ ಉಪಕಾರ, ಸಮಯಪ್ರಜ್ಞೆ ಮೆಚ್ಚುತ್ತ ಮನೆಸೇರಿದೆವು. ಮಗು ಚೇತರಿಸಿಕೊಂಡು ಎದೆಹಾಲು ಸವಿಯುತ್ತಿತ್ತು.
ಇದಾಗಿ ಹದಿನೆಂಟು ವರ್ಷ ಕಳೆಯಿತು. ಕಾಲ ಉರುಳಿದಂತೆ ಅದೃಷ್ಟವೋ, ದೈವಬಲವೋ ಇದೇ ಶೆಟ್ಟಿ ಡಾಕ್ಟರ್ ಮನೆಯ ಸಮೀಪದಲ್ಲೇ ನಾವೂ ನಿವೇಶನ ಖರೀದಿಸಿ ಮನೆ ಮಾಡಿದ್ದೇವೆ. ನಮ್ಮ ಹಾಗೂ ಮಕ್ಕಳ ಪ್ರತಿವ್ಯಾದಿಗಳಿಗೂ ಮೊದಲ ಚಿಕಿತ್ಸೆ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಶೆಟ್ಟಿ ಡಾಕ್ಟರ್.ಹಾಗೂ ಅವರು ನೀಡುವ ಕೆಂಪು ,ಬಿಳಿ ಔಷಧ ಜೊತೆಗೆ ನಾಲ್ಕಾರು ಮಾತ್ರೆಗಳು.. ನನ್ನಂತೆ ಸಿದ್ದಾಪುರದ ಬಡವರು, ಮದ್ಯಮವರ‍್ಗದವರು ಅಷ್ಟೇ ಏಕೆ ಶ್ರೀಮಂತರೂ ಕೂಡ ಡಾ. ಎಮ್ ಪಿ. ಶೆಟ್ಟಿಯವರಿಂದ ಚಿಕಿತ್ಸೆ ಪಡೆದವರೇ ಆಗಿದ್ದಾರೆ.
ಓದುಗರೇ ಡಾ. ಎಮ್ ಪಿ ಶೆಟ್ಟಿ ಯವರು ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಮಾತಿಗಿಳಿದರೆ ಲೋಕವನ್ನೇ ಮರೆಯುವ ಮಗುವಿನಂತ ಮನಸ್ಸು. ಅವರ ಬಿಡುವಿನ ಅವಧಿಯಲ್ಲಿ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು.ಅವರ ಬಗ್ಗೆ ಒಂದು ಲೇಖನ ಬರೆಯಬೇಕೆಂದು ಬಹು ಹಿಂದೆಯೇ ಹಲವು ವಿಷಯ ಪಡೆದಿದ್ದೆ. ಕೆಲಸದ ಒತ್ತಡದ ಮಧ್ಯ ಆಗಲೇ ಇಲ್ಲ.
ಇವರು ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯವರು. ಅಗರ‍್ಭ ಶ್ರೀಮಂತ ಕುಟುಂಬದ ಹಿನ್ನೆಲೆಇದ್ದರೂ ಸ್ವಾಭಿಮಾನಿ. ೧೯೬೭-೬೮ ರಲ್ಲಿ ವೈದ್ಯಕೀಯ ಪದವಿ ಮುಗಿಸಿ ಕೊಡಗಿನಲ್ಲಿ ಕೆಲವು ಕಾಲ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ್ದರು. ನಂತರ ಸಿದ್ದಾಪುರದ ಹಿರಿಯರಾದ ದಿ- ಗಣೇಶ ಹೆಗಡೆ ದೊಡ್ಮನೆಯವರ ಸ್ನೇಹ. ಅವರ ಆಶಯದಂತೆ ನಮ್ಮೂರಿಗೆ ನಿಮ್ಮಂತಹ ಒಬ್ಬ ವೈದ್ಯರ ಅವಶ್ಯಕತೆ ತೀರಾ ಅಗತ್ಯವಿದೆ ದಯವಿಡ್ಡು ಬನ್ನಿ ಎಂದು ಕರೆದರಂತೆ. ತಕ್ಷಣ ಅಲ್ಲಿಂದ ಸಿದ್ದಾಪುರಕ್ಕೆ ಆಗಮನ. ಜೊತೆಗೆ ಗಣೇಶ ಹೆಗಡೆ ಯವರದ್ದೇ ಈಗಿರುವ ಜಾಗ ಖರೀದಿಸಿ ಸಿದ್ದಾಪುರದಲ್ಲೇ ಅತ್ಯಂತ ಸುಸಜ್ಜಿತವಾದ ತಮ್ಮ ಕನಸಿನ ಮನೆಯನ್ನು ಕಟ್ಟಿ ಅದನ್ನೇ ಚಿಕಿತ್ಸಾಲಯವನ್ನಾಗಿಯೂ ಮಾಡಿಕೊಂಡಿದ್ದರು. ಜಾತಿ,ಕುಲ,ಧರ‍್ಮವೆನ್ನದೆ ಸುತ್ತಲಿನ ಹತ್ತಾರು ಯುವಕ, ಯುವತಿಯರಿಗೆ ಸಣ್ಣದಾಗಿ ಉದ್ಯೋಗವನ್ನೂ ನೀಡಿದ್ದರು. ಜೊತೆಗೆ ಕೃಷಿ, ಹೈನುಗಾರಿಕೆ , ನಾಯಿಗಳ ಸಾಕಣಿಕೆಯಲ್ಲಿ ವಿಶೇಷ ಆಸಕ್ತಿ. ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದರು. ಅವರೇ ಹಚ್ಚಿ ಬೆಳೆಸಿದ ಮನೆಯ ಸುತ್ತ ಮುತ್ತಲಿನ ನೂರಾರು ತೆಂಗು, ಅಡಿಕೆ, ಮಾವು, ಚಿಕ್ಕೋ ಮರಗಳು ಇಂದು ಅವರಿಲ್ಲದೇ ಸೊರಗಿದ ಮುಖಹೊತ್ತಿವೆ. ಅವರೇ ಸಾಕಿದ ಹಸುವಿನ ಹಾಲನ್ನು ಮಾತ್ರ ಬಳಸುತ್ತಿದ್ದರು. ಇತ್ತೀಚೆಗೆ ಅವರ ಪತ್ನಿಯ ಅಗಲುವಿಕೆಯಿಂದ ಮಾನಸಿಕವಾಗಿ ತುಂಬಾ ಕುಗ್ಗಿಹೋಗಿದ್ದ ಇವರು ಪ್ರೀತಿಯ ಮಗಳು ಶಿರಸಿಯಲ್ಲಿ ಇದ್ದರೂ ಸಹ ತಮ್ಮ ಗಟ್ಟಿತನ ಇರುವವರೆಗೂ ತಾನು ಕಟ್ಟಿದ ಮನೆಯಲ್ಲಿಯೇ ಇದ್ದು ಇಳಿವಯಸ್ಸಿನಲ್ಲೂ ತಮ್ಮನ್ನು ಅರಸಿಬರುವ ರೋಗಿಗಳ ಚಿಕಿತ್ಸೆ ಮಾಡುವ ಮನೋಭಾವ ಹೊಂದಿದ್ದರು. ಆಪ್ತರೊಂದಿಗೆ ತಮ್ಮ ಹಿಂಗತೆಯನ್ನು ಅತ್ಯಂತ ಆಪ್ತತೆಯನ್ನು ಹಂಚಿಕೊಳ್ಳುತ್ತಿದ್ದರು. ಬಹುಕಾಲದಿಂದ ಅವರ ಕಾರು ಚಾಲಕರಾಗಿದ್ದ ಹಮ್ಜದ್ ಸಾಬ್ ಮತ್ತು ಅವರ ಮಗ ಕೊನೆಯ ದಿನದ ವರೆಗೂ ಶೆಟ್ಟಿ ಡಾಕ್ಟರ್ ಅವರ ಸೇವೆಯನ್ನು ಅತ್ಯಂತ ಪ್ರೀತಿ,ಕಾಳಜಿಯಿಂದ ಮಾಡಿಕೊಂಡು ಬಂದಿದ್ದಾರೆ.ಅಮ್ಜದ್ ಎಮ್ ಪಿ ಶೆಟ್ಟಿಯವರ ಕೊನೆಯ ಆಸೆಯಂತೆ ನಿನ್ನೆ ದಿನಾಂಕ ೧೨-೪-೨೦೨೨ ರಂದು ಅವರನ್ನು ಅವರ ಮನದ ಮನೆ ‘ಜ್ಯೋತಿ’ಗೆ ಕರೆದುಕೊಂಡು ಬಂದು ದಿನವಿಡೀ ಯೋಗಕ್ಷೇಮ ನೋಡಿಕೊಂಡು ಸಂಜೆ ಮತ್ತೆ ಅವರ ಮಗಳ ಶಿರಸಿಯ ಮನಗೆ ಕರೆದುಕೊಂಡು ಹೋಗಿದ್ದರು. ಈ ಸಮಯದಲ್ಲಿ ಶೆಟ್ಟಿ ಡಾಕ್ಟರ್ ಮನೆಗೆ ಬಂದಿದ್ದಾರೆಂಬ ಸುದ್ದಿ ಎಲ್ಲೆಡೆ ಶರವೇಗದಲ್ಲಿ ಪಸರಿಸಿದ್ದೇ ತಡ ಸಿದ್ದಾಪುರದ ಸುತ್ತಮುತ್ತಲಿನ ಸಾವಿರಾರು ಜನರು ಅಭಿಮಾನದಿಂದ ಬಂದು ಭೇಟಿ ನೀಡಿ ಭಾವಪರವಶರಾದರು.
ಆಗಾಗ ಡಾಕ್ಟರು ಕಣ್ಣು ಬಿಟ್ಟು ಕೆಲವರನ್ನು ಗುರುತಿಸಿದರು. ಸಂತೋಷದದಿಂದ ತಮ್ಮ ಸ್ವಂತ ಮನೆಯಲ್ಲಿ ಕೆಲಕಾಲ ಮೌನವಾಗಿ ಆಲಿಸಿದರು. ಕಣ್ತುಂಬಿ ಬಂತು. ಅಂತೂ ಕೊನಗಳಿಗೆಯಲ್ಲಿ ಅವರ ಕಾರು ಚಾಲಕ ಅಮ್ಜದ್ ಅವರ ಪ್ರಾಮಾಣಿಕತೆ, ಸೌಜನ್ಯತೆ ಮೆಚ್ಚಲೇಬೇಕು. ಡಾಕ್ಟರ್ ಶೆಟ್ಟಿ ಸರ್ ಯಾವಾಗಲೂ ಹೇಳುವ ಮಾತು *ಮಾನವೀಯತೆ ಮುಂದೆ ಬೇರೆ ಯಾವುದೇ ಜಾತಿ,ಧರ‍್ಮವಿಲ್ಲ. ಮಾನವೀಯತೆಯೇ ನಿಜವಾದ ಮಾನವ ಧರ‍್ಮ ಎನ್ನುವ ಮಾತನ್ನು ಕೊನಗೂ ನಿಜ ಮಾಡಿದವರು ಡಾ. ಎಮ್ ಪಿ ಶೆಟ್ಟಿ ಸರ್. ನಿಮಗಿದೋ ಸದಾಕಾಲದ ನಮನಗಳು.
ಒಂದು ವಿಶೇಷ: ( * ಇವರ ಆಸ್ಪತ್ರೆಯಲ್ಲಿ ಜ್ವರ, ನೆಗಡಿ, ವಾಂತಿ,ಬೇದಿ ಇತ್ಯಾದಿಗೆ ಅರ‍್ಜಂಟಿಗೆ ಡಾಕ್ಟರ್ ಇಲ್ಲದಿರುವಾಗ ಬಂದಾಗ ಒಂದು ಡೋಸ್ ಮಾತ್ರೆ, ಔಷಧಿಯನ್ನು ಪಡೆದರೆ ಉಚಿತ.!! ಅದಕ್ಕೆ ಹಣವನ್ನೇ ತೆಗೆದುಕೊಳ್ಳುವುದಿಲ್ಲವಾಗಿತ್ತು.) ಇಂತಹ ಉಚಿತ ವೈದ್ಯರು ಕರ‍್ನಾಟಕ ಅಷ್ಟೇ ಅಲ್ಲ ದೇಶದಲ್ಲಿಯೇ ಯಾರಾದರೂ ಸಿಗುವರೇ???
ಹಣಕ್ಕಾಗಿ ಅದೆಷ್ಟೋ ವೈದ್ಯರು ಹೆಣಗಳನ್ನೂ ಸಹ ಒತ್ತೆ ಇಟ್ಟುಕೊಂಡು ಪೀಡಿಸುವವರಿರುವಾಗ ಡಾ. ಎಮ್ ಪಿ ಶೆಟ್ಟಿ ಸರ್ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು ಎಂಬುದು ನಾವು ನೀವೆಲ್ಲರೂ ಕಣ್ಣಾರೆ ಕಂಡ ದಂತಕತೆಯಲ್ಲವೆ??
ಇದೋ ಸರ್ ನಿಮ್ಮಿಂದ ಚಿಕಿತ್ಸೆ ಪಡೆದ ಲಕ್ಷಾಂತರ ಜನರ ಅಂತಿಮ ನಮನಗಳು. ಮರುಜನ್ಮ ಅಂತಾ ಇದ್ದರೆ ನಮ್ಮ ನಿಮ್ಮ ಪ್ರೀತಿಯ ಸಿದ್ದಾಪುರದಲ್ಲೇ ಮತ್ತೊಮ್ಮೆ ಹುಟ್ಟಿ ಬನ್ನಿ ಸರ್..
ನಿಮಗಾಗಿ ಕಾಯುತಿವೆ ಸಾವಿರಾರು ಜನಸಾಮಾನ್ಯರು.
ಗೋಪಾಲ ನಾಯ್ಕ ಭಾಶಿ ಸಿದ್ದಾಪುರ ಉ.ಕ.
೭೯೭೫೨೪೭೦೫೭
