ಅಂಕೋಲಾ: ಕಪ್ಪೆ ಚಿಪ್ಪು ತೆಗೆಯುವಾಗ ಕಾಲು ಜಾರಿ ಮೂವರು ವಿದ್ಯಾರ್ಥಿಗಳು ನೀರುಪಾಲು
ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ನೀರುಪಾಲಾದ ಘಟನೆ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದೆ.
ಕಾರವಾರ: ಗಂಗಾವಳಿ ನದಿಯ ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಕಲ್ ಕಡಕಾರ್ ಬಳಿ ಸಂಭವಿಸಿದೆ. ಮೃತರನ್ನು ಕಡಕಾರ ನಿವಾಸಿ ಪೂಜಾ ಮಹೇಶ ನಾಯ್ಕ, ಕುಮಟಾ ಕೋನಳ್ಳಿ ನಿವಾಸಿ ದಿಲೀಪ ನಾಯ್ಕ, ಅಘನಾಶಿನಿ ನಿವಾಸಿ ನಾಗೇಂದ್ರ ನಾಯ್ಕ ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಸಂಬಂಧಿಕರಾಗಿದ್ದಾರೆ. ದಿಲೀಪ ಮತ್ತು ನಾಗೇಂದ್ರ ಕುಮಟಾದಿಂದ ಇಂದು ಬೆಳಿಗ್ಗೆ ತಮ್ಮ ಸಂಬಂಧಿಕರಾದ ಪೂಜಾರ ಮನೆಗೆ ಆಗಮಿಸಿದ್ದರು. ಪೂಜಾ ಪಿಯುಸಿ ಓದುತ್ತಿದ್ದರು ಎಂದು ತಿಳಿದುಬಂದಿದೆ. ಮೂವರು ಸೇರಿ ಕಪ್ಪೆ ಚಿಪ್ಪು ತೆಗೆಯಲು ಹೋದಾಗ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಮೂವರ ಮೃತ ದೇಹಗಳು ಪತ್ತೆಯಾಗಿವೆ. ಅಂಕೋಲಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. (ಈಟಿಬಿಕೆ)