

ಸಿದ್ಧಾಪುರ ತಾಲೂಕಿನ ಕಾನಗೋಡು ಕೆರೆಭೇಟೆ ಹಿಂಸೆಗೆ ತಿರುಗಿದ್ದು ಜನಾಕ್ರೋಶಕ್ಕೆ ಸಿಕ್ಕ ೪ ಜನ ಪೊಲೀಸರು ಸೇರಿ ಅನೇಕರಿಗೆ ಗಾಯಗಳಾಗಿವೆ. ವ್ಯಾಪಕ ಪ್ರಚಾರ ಮಾಡಿ ಕೆರೆಭೇಟೆಯಲ್ಲಿ ಮೀನುಹಿಡಿಯುವವರಿಗೆ ತಲಾ ೬೦೦ ಶುಲ್ಕ ನಿಗದಿಮಾಡಿ ಇಂದು ಕಾನಗೋಡಿನಲ್ಲಿ ಕೆರೆಭೇಟೆ ನಿಗದಿಮಾಡಲಾಗಿತ್ತು. ಶುಲ್ಕ ನೀಡಿದ ಆರು ಸಾವಿರ ಜನರ ಜೊತೆಗೆ ಕೆರೆಭೇಟೆ ನೋಡಲು ಬಂದ ಆಸಕ್ತರು ಸೇರಿ ಒಟ್ಟೂ ಹತ್ತು ಸಾವಿರಕ್ಕೂ ಹೆಚ್ಚು ಜನ ಜಮಾಯಿಸಿದ್ದರು.

ನಿಗದಿಯಾದ ಸಮಯ ಒಂದು ಗಂಟೆಗೆ ಕೆರೆಭೇಟೆ ಪ್ರಾರಂಭವಾಗಿ ಅರ್ಧಗಂಟೆಯ ಒಳಗೆ ಮೀನು ದೊರೆಯದ ಕೆರೆಭೇಟೆ ಪ್ರವೀಣರು ಸಂಘಟಕರೊಂದಿಗೆ ಖ್ಯಾತೆ ತೆಗೆದರು. ಕೆಲವುಕಾಲ ಸಮಾಧಾನ ಮಾಡಲು ಯತ್ನಿಸಿದ ಸಂಘಟಕರು ನಂತರ ಕಾಲುಕಿತ್ತರು. ಈ ಸಮಯದಲ್ಲಿ ನೂಕುನು ಗ್ಗಲಾಗಿ ಸಿದ್ಧಾಪುರ ಪೊಲೀಸ್ ಸಬ್ ಇನ್ಗ್ಸೆಕ್ಟರ್ ಜೊತೆಗೆ ಪ್ರಕಾಶ,ಸುಲೋಚನಾ, ವಾಣಿ ಸೇರಿದಂತೆ ನಾಲ್ಕೈದು ಜನ ಪೊಲೀಸರಿಗೆ ಗಾಯಗಳಾದವು.

ಸಂಘಟಕರು, ಪೊಲೀಸರಿಗೆ ಕ್ಯಾರೇ ಮಾಡದ ಜನ ಜಂಗುಳಿ ಕಾನಗೋಡಿನ ಕೆಲವು ಅಂಗಡಿಗಳು,ಸಂಘಟಕರ ಮನೆಗಳಿಗೂ ಹಾನಿ ಮಾಡಿದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಒಟ್ಟೂ ೧೨ ಜನರನ್ನು ಬಂಧಿಸಿರುವುದು ತಿಳಿದುಬಂದಿದೆ. ಈ ಘಟನೆಯ ನಂತರ ಕಾನಗೋಡಿಗೆ ಭೇಟಿ ನೀಡಿ ಪರಿಶೀಲಿಸಿದ ಹಿರಿಯ ಅಧಿಕಾರಿಗಳು ಸಂಘಟಕರ ಜವಾಬ್ಧಾರಿ ರಹಿತ ನಡವಳಿಕೆಯಿಂದ ಗೊಂದಲಗಳಾಗಿ ಗಲಾಟೆ ಆಗಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ. ಈ ಗಲಾಟೆಯಲ್ಲಿ ಪಾಲ್ಗೊಂಡ ಪರ ಊರುಗಳ ಆರೋಪಿಗಳ ಜೊತೆಗೆ ಕೆಲವು ಸಂಜೆಗುಡುಕರೂ ಪೊಲೀಸರಿಗೆ ಸೆರೆಸಿಕ್ಕಿರುವುದಾಗಿ ತಿಳಿದುಬಂದಿದೆ. ಇಂದಿನ ಗಲಾಟೆ, ಸಂಘಟಕರ ಮನೆಗೆ ತೊಂದರೆ, ಅಂಗಡಿಮುಂಗಟ್ಟುಗಳ ಧ್ವಂಸಗಳ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೊಲೀಸರಿಗೆ ದೂರು ನಿಡಿರುವ ಮಾಹಿತಿಯೂ ಸಮಾಜಮುಖಿ ಡಾಟ್ ನೆಟ್ ಗೆ ಲಭಿಸಿದೆ.
