UPSC result-2022..
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾನ್ಮನೆಯ ಹಣಗಾರಿನ ರಾಮನಾಥ ಹೆಗಡೆ ಮತ್ತು ಗೀತಾ ಹೆಗಡೆ ಪುತ್ರ ಮನೋಜ ಹೆಗಡೆ ಯುಪಿಎಸ್ಸಿ ಪರೀಕ್ಷೆಯಲ್ಲಿ 213ನೇ ರ‍್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಶಿರಸಿ(ಉತ್ತರ ಕನ್ನಡ): ಅಪ್ಪಟ ಗ್ರಾಮೀಣ ಪ್ರತಿಭೆಯಾದ ಯುವಕನೋರ್ವ ಯುಪಿಎಸ್ಸಿ ಪರೀಕ್ಷೆಯಲ್ಲಿ 213ನೇ ರ‍್ಯಾಂಕ್ ಪಡೆದು ಮಿಂಚಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾನ್ಮನೆಯ ಹಣಗಾರಿನ ರಾಮನಾಥ ಹೆಗಡೆ ಮತ್ತು ಗೀತಾ ಹೆಗಡೆ ಪುತ್ರ ಮನೋಜ ಹೆಗಡೆ ಯುಪಿಎಸ್ಸಿ ಪರೀಕ್ಷೆಯಲ್ಲಿ 213ನೇ ರ‍್ಯಾಂಕ್ ಪಡೆದು ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ತಂದೆ ಪಶು ಇಲಾಖೆ ನಿವೃತ್ತ ಸಿಬ್ಬಂದಿಯಾಗಿದ್ದು, ತಾಯಿ ಶಾಸಕರ ಮಾದರಿ ಶಾಲೆ 5ರಲ್ಲಿ ಶಿಕ್ಷಕಿಯಾಗಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಲಿತಿದ್ದು, ಉಂಚಳ್ಳಿ ಶಾಲೆಯಲ್ಲಿ 1 ರಿಂದ 6ನೇ ತರಗತಿ ಕಲಿತಿದ್ದಾರೆ. ನಂತರ ಪ್ರೌಢ ಶಿಕ್ಷಣವನ್ನು ಶಿರಸಿಯ ಲಯನ್ಸ್ ಪ್ರೌಢಶಾಲೆಯಲ್ಲಿ ಮುಗಿಸಿ, ಪಿಯುಸಿಯನ್ನು ಎಮ್ಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಾಡಿದ್ದಾರೆ. ಧಾರವಾಡದಲ್ಲಿ ಬಿಎಸ್ಸಿ ಆಗ್ರಿಕಲ್ಚರ್ ಓದಿ, ಡಿಗ್ರಿ ನಂತರ ಐಎಎಸ್ಗೆ ತಯಾರಿ ನಡೆಸಿದ್ದರು. ಈಗ ಫಲಿತಾಂಶ ಹೊರ ಬಂದಿದ್ದು, ಶಿರಸಿಯ ಕೀರ್ತಿ ದೇಶ ಮಟ್ಟದಲ್ಲಿ ಬೆಳಗುವಂತಾಗಿದೆ.
ಮನೋಜ್ ಹೆಗಡೆಗೆ 213ನೇ ರ‍್ಯಾಂಕ್
ಈ ಫಲಿತಾಂಶದ ಬಗ್ಗೆ ಶಿರಸಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮನೋಜ್ ಹೆಗಡೆ, ಒಂದು ಬಾರಿ ಕೆಎಎಸ್ ಹಾಗೂ 3 ಬಾರಿ ಐಎಎಸ್ ಪರೀಕ್ಷೆ ಎದುರಿಸಿದ್ದೇನೆ. ಈಗ 5ನೇ ಬಾರಿ ಪ್ರಯತ್ನಕ್ಕೆ ಫಲ ದೊರೆತಿದೆ. ದಿನಕ್ಕೆ ಎಷ್ಟು ತಾಸು ಓದುತ್ತೇವೆ ಎನ್ನುವುದಕ್ಕಿಂತ ಪ್ರಶ್ನೆ ಪತ್ರಿಕೆಗಳನ್ನು ಅರಿತುಕೊಂಡಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ರ‍್ಯಾಂಕ್ ಪ್ರಕಾರ ಐಪಿಎಸ್ ಸಿಗಬಹುದು. ಅಲ್ಲಿ ನೀಡುವ ತರಬೇತಿಯ ನಂತರ ಸಿಗುವ ಕೆಲಸದ ಮೇಲೆ ಯಾವ ರೀತಿ ಜನರಿಗೆ ಒಳ್ಳೆಯದನ್ನು ಮಾಡಬಹುದು ಎಂದು ನಿರ್ಧರಿಸುತ್ತೇನೆ ಎಂದು ಹೇಳಿದರು. (etbk)