2022ರ ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡ ಕ್ರಿಕೆಟ್ ಇತಿಹಾಸದಲ್ಲೇ ಅತಿ ಅಪರೂಪದ ದಾಖಲೆ ನಿರ್ಮಿಸಿದ್ದು, ಒಂದೇ ಇನ್ನಿಂಗ್ಸ್ ನಲ್ಲಿ 7 ಅರ್ಧಶತಕ ಮತ್ತು 2 ಶತಕಗಳು ದಾಖಲಾಗಿವೆ.
ಕ್ರಿಕೆಟ್ ಇತಿಹಾಸದಲ್ಲೇ ಅತ್ಯಪರೂಪದ ದಾಖಲೆ ನಿರ್ಮಿಸಿದ ಬಂಗಾಳ, 7 ಅರ್ಧಶತಕ, 2 ಶತಕ!!
ಬೆಂಗಳೂರು: 2022ರ ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡ ಕ್ರಿಕೆಟ್ ಇತಿಹಾಸದಲ್ಲೇ ಅತಿ ಅಪರೂಪದ ದಾಖಲೆ ನಿರ್ಮಿಸಿದ್ದು, ಒಂದೇ ಇನ್ನಿಂಗ್ಸ್ ನಲ್ಲಿ 7 ಅರ್ಧಶತಕ ಮತ್ತು 2 ಶತಕಗಳು ದಾಖಲಾಗಿವೆ.
ಹೌದು.. 2022ರ ರಣಜಿ ಟ್ರೋಫಿಯ ಮೊದಲ ಕ್ವಾರ್ಟರ್ ಫೈನಲ್ ನಲ್ಲಿ ಜಾರ್ಖಂಡ್ ತಂಡದ ವಿರುದ್ಧದ ಪಂದ್ಯದಲ್ಲಿ ಬಂಗಾಳ ತಂಡ ಈ ದಾಖಲೆ ನಿರ್ಮಿಸಿದ್ದು, ತಮ್ಮ ಒಂಬತ್ತು ಬ್ಯಾಟರ್‌ಗಳು ಅರ್ಧಶತಕಗಳನ್ನು ಗಳಿಸುವುದರೊಂದಿಗೆ ಬಂಗಾಳ ಕ್ರಿಕೆಟ್ ತಂಡವು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಬೆಂಗಳೂರಿನಲ್ಲಿ ನಡೆದ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಂಗಾಳ ತಂಡ 7 ವಿಕೆಟ್ ನಷ್ಟಕ್ಕೆ 773ರನ್ ಗಳಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ತಂಡದ ಈ ಮ್ಯಾರಥಾನ್ ರನ್ ಗಳಿಕೆಯಲ್ಲಿ 7 ಅರ್ಧಶತಕ ಮತ್ತು 2 ಶತಕಗಳು ಸೇರಿದ್ದವು. ಅವಕಾಶ ಪಡೆದು ಅಂಗಳಕ್ಕಿಳಿದ ಬಂಗಾಳ ತಂಡದ ಎಲ್ಲಾ ಬ್ಯಾಟರ್‌ಗಳು ಕನಿಷ್ಠ ತಲಾ ಅರ್ಧಶತಕ ಬಾರಿಸಿದರು. ನಂ. 3 ಬ್ಯಾಟರ್ ಸುದೀಪ್ ಘರಾಮಿ (186) ಮತ್ತು ನಂ. 4 ಅನುಸ್ತುಪ್ ಮಜುಂದಾರ್ (117) ಮೂರಂಕಿ ಸ್ಕೋರ್ ತಲುಪಿದರು.
ಪ್ರಥಮ ದರ್ಜೆ ಇನ್ನಿಂಗ್ಸ್ ನಲ್ಲಿ ಒಂಬತ್ತು ಬ್ಯಾಟ್ಸ್ ಮನ್‌ಗಳು ತಲಾ ಅರ್ಧಶತಕ ಸಿಡಿಸಿದ್ದು ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು. ಈ ಹಿಂದೆ ಮೊದಲ ದರ್ಜೆಯ ಇನ್ನಿಂಗ್ಸ್ ನಲ್ಲಿ ತಂಡವೊಂದರ ಎಂಟು ಬ್ಯಾಟರ್‌ಗಳು ಅರ್ಧಶತಕಗಳನ್ನು ಗಳಿಸಿದ್ದು 1893 ರಲ್ಲಿ ಘಟಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಪೋರ್ಟ್ಸ್‌ಮೌತ್‌ನಲ್ಲಿ ನಡೆದ ಆ ಪಂದ್ಯದಲ್ಲಿ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ತಂಡದ ಎಂಟು ಸದಸ್ಯರು ಕನಿಷ್ಠ ತಲಾ ಅರ್ಧಶತಕ ಗಳಿಸಿದ್ದರು.
ಅಂದಹಾಗೆ ಹಾಲಿ ಪಂದ್ಯದಲ್ಲಿ ಬಂಗಾಳ ನೀಡಿರುವ ಬೃಹತ್ ರನ್ ಅನ್ನು ಬೆನ್ನು ಹತ್ತಿರುವ ಜಾರ್ಖಂಡ್ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 139ರನ್ ಗಳಿಸಿ ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿ ಸಿಲುಕಿದೆ. 17 ರನ್ ಗಳಿಸಿರುವ ವಿರಾಟ್ ಸಿಂಗ್ ಮತ್ತು ದಿನದಾಟದ ಕೊನೆಯ ಹಂತದಲ್ಲಿ ಕ್ರೀಸ್ ಗೆ ಇಳಿದ ಅನುಕುಲ್ ರಾಯ್ 1 ರನ್ ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. (kpc)