ಮನಸ್ಸಿದ್ದರೆ ಕರ್ತವ್ಯದೊಂದಿಗೆ ಜನಸೇವೆ ಮಾಡುತ್ತಾ ಜನಸ್ನೇಹಿ ಪೊಲೀಸ್ ಆಗಬಹುದೆನ್ನುವುದನ್ನು ಸಾಬೀತು ಮಾಡಿದ ಹವಾಲ್ಧಾರ್ ರಾಘವೇಂದ್ರ ನಾಯ್ಕ
ಜನಸ್ನೇಹಿ ಬೀಟ್, ಜನಸ್ನೇಹಿ ಪೊಲೀಸ್ ಎನ್ನುವುದೊಂದು ಗುರಿ ಮತ್ತು ಧ್ಯೇಯ. ಪೊಲೀಸ್ ಇಲಾಖೆ ಇಂಥ ಘೋಷಣೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಸಂಪರ್ಕವನ್ನು ಸಾಧಿಸುವ ಗುರಿ ಹೊಂದಿದೆ. ಆದರೆ ಪೊಲೀಸ್ ಎಂದರೆ ಈಗಲೂ ಜನಮಾನಸದಲ್ಲಿ ಭಯ ಉಳಿದುಕೊಂಡಿದೆ. ಪೊಲೀಸ್ ಎಂದರೆ ಭಯ ಅಲ್ಲ ಭರವಸೆ ಎನ್ನುವ ಕಲ್ಪನೆಯನ್ನು ಸಾಕಾರಮಾಡಲು ಪೊಲೀಸರು ಶ್ರಮಿಸುತಿದ್ದಾರೆ.
ಇಲ್ಲೊಂದು ಜನಪರ ಪೊಲೀಸಿಂಗ್ ನ ಉದಾಹರಣೆ ನಮ್ಮ ಮುಂದೇ ಇದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಹವಾಲ್ಧಾರ್ ಆಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ನಾಯ್ಕ ಪ್ರತಿವರ್ಷ ತಮ್ಮ ಬೀಟ್ ನಲ್ಲಿ ಒಂದೆರಡು ಕಾರ್ಯಕ್ರಮ ಮಾಡಿ ಅಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತಿದ್ದಾರೆ. ರಾಘವೇಂದ್ರ ನಾಯ್ಕ ತಮ್ಮ ಬೀಟ್ ನ ಒಂದೆರಡು ಶಾಲೆಗಳಿಗೆ ಪ್ರತಿವರ್ಷ ನೋಟ್ ಪುಸ್ತಕ, ಲೇಖನಿ ವಿತರಿಸುತ್ತಾರೆ. ಮೊದಮೊದಲು ತಾವೊಬ್ಬರೇ ಮಾಡುತಿದ್ದ ಈ ಪೊಲೀಸ್ ಜನಸ್ನೇಹಿ ಕೆಲಸಕ್ಕೆ ಈಗ ಅವರ ಸಮಾನ ಮನಸ್ಕ ಗೆಳೆಯರ ಸಹಕಾರ ಸಿಗುತ್ತಿದೆ.
ಮಕ್ಕಳಿಗೆ ಪೊಲೀಸರ ಕೆಲಸದ ಅರಿವು ಮೂಡಬೇಕು.ಶಾಲೆಯಲ್ಲಿ ಜನಸ್ನೇಹಿ ಪೊಲೀಸ್ ಕಾರ್ಯಕ್ರಮ ಮಾಡುವ ಮೂಲಕ ಮಕ್ಕಳೊಂದಿಗೆ ಪಾಲಕರು ಸೇರಬೇಕು. ಮಕ್ಕಳ ಮೂಲಕ ಹಿರಿಯರು ಸಾರ್ವಜನಿಕರ ಸಂಪರ್ಕ ಹಿತಕಾರಿಯಾಗಿರಬೇಕು ಇದರಿಂದ ಪೊಲೀಸ್ ಕೆಲಸವೂ ಸರಳವಾಗುತ್ತದೆ. ಪೊಲೀಸರು ಮತ್ತು ಸಾರ್ವಜನಿಕರ ಸಂಪರ್ಕ ಸುಗಮವಾಗುತ್ತದೆ ಎನ್ನುವ ರಾಘವೇಂದ್ರ ನಾಯ್ಕ ತಮ್ಮ ಪೊಲೀಸ್ ಕೆಲಸದ ಜೊತೆಗೆ ಅಸಹಾಯಕ ಮಕ್ಕಳಿಗೆ ನೆರವೂ ನೀಡುತಿದ್ದಾರೆ.
ವಿದ್ಯಾರ್ಥಿಗಳಿಗೆ ಎಲ್ಲರಿಗೂ ಸಮನಾದ ಅನುಕೂಲ ಸೌಲಭ್ಯಗಳಿರುವುದಿಲ್ಲ ಆ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ತಮ್ಮ ಪುಟ್ಟ ಪ್ರಯತ್ನ ಎನ್ನುವ ಈ ಪೊಲೀಸ್ ತಮ್ಮ ಶಾಲಾದಿನಗಳಲ್ಲಿತಾವು ನೋಡಿದ ಅನುಭವಿಸಿದ ಕಷ್ಟಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಿಸುವ ಮೂಲಕ ಈ ಕೆಲಸ ಇತರರಿಗೂ ಪ್ರೇರಣೆಯಾದರೆ ಯಾವ ವಿದ್ಯಾರ್ಥಿಗೂ ತನ್ನ ಕೊರತೆ, ಅಸಹಾಯಕತೆ ಎನಿಸುವುದಿಲ್ಲ ಎನ್ನುತ್ತಾರೆ ರಾಘವೇಂದ್ರ ನಾಯ್ಕ.
ಸಿದ್ದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ತಮ್ಮ ಕೆಲವು ಬೀಟ್ ಗಳಲ್ಲಿ ಹಲವು ಶಾಲೆಗಳ ವಿದ್ಯಾರ್ಥಿಗಳಿಗೆ ಪಟ್ಟಿ ಪೆನ್ ವಿತರಿಸಿ ಶಾಲೆಗಳಲ್ಲೇ ಜನಸ್ನೇಹಿ ಪೊಲೀಸ್ ಬೀಟ್ ಕಾರ್ಯಕ್ರಮ ಮಾಡಿದ್ದಾರೆ. ಪೊಲೀಸ್ ಹುದ್ದೆಯಿಂದ ಹವಾಲ್ಧಾರರಾಗಿ ಪದೋನ್ನತಿ ಹೊಂದಿರುವ ರಾ ಘವೇಂದ್ರ ನಾಯ್ಕರ ಈ ಜನಸ್ನೇಹಿ ಪೊಲೀಸಿಂಗ್ ಗೆ ಅಪಾರ ಜನಬೆಂಬಲವೂ ವ್ಯಕ್ತವಾಗಿದೆ. ಪೊಲೀಸ್ ಪೇದೆಯೊಬ್ಬರ ಈ ಸಮಾಜಮುಖಿ ಮನಸ್ಥಿತಿ, ಜನಪರ ಕಾಳಜಿಗೆ ಅವರ ಹಿರಿಯ ಅಧಿಕಾರಿಗಳ ಬೆಂಬಲವೂ ದೊರೆಯುತಿದ್ದು ಇಲಾಖೆ ಈ ಪೊಲೀಸ್ ಬಗ್ಗೆ ಅಭಿಮಾನವನ್ನೂ ವ್ಯಕ್ತಮಾಡುತ್ತಿದೆ.
ರಾಘವೇಂದ್ರ ನಾಯ್ಕರ ಈ ಜನಸ್ನೇಹಿ ಕೆಲಸ ಇತರ ಪೊಲೀಸ್ ರಿಗೂ ಮಾದರಿಯಾಗಿದ್ದು ಸಮಾಜಮುಖಿ ಯಾದ ಯಾವುದೇ ಕೆಲಸಕ್ಕೆ ಜನಬೆಂಬಲ ದೊರೆಯುತ್ತದೆನ್ನುವ ದೃಷ್ಟಾಂತಕ್ಕೆ ಈ ಪೊಲೀಸರ ಜನಸ್ನೇಹಿ ಬೀಟ್ ಕಾರ್ಯಕ್ರಮ ಉತ್ತಮ ಉದಾಹರಣೆ.