ರಾಜ್ಯದ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದುಗೊಳಿಸಲು ಒತ್ತಾಯಿಸಿ ಆರ್ ಬಿ ಐ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ಬೆಂಗಳೂರು: ರಾಜ್ಯದ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದುಗೊಳಿಸಲು ಒತ್ತಾಯಿಸಿ ಆರ್ ಬಿ ಐ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಕರ್ನಾಟಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ರೈತರು ಕೃಷಿ ಚಟುವಟಿಕೆ ನಡೆಸಲು ಬ್ಯಾಂಕ್‌ನಲ್ಲಿ ಸಾಲ ಕೇಳಲು ಹೋದಾಗ ಸಾಲಗಾರರ ಸಿಬಿಲ್ ಪರೀಕ್ಷೆ ಮಾಡಿ ನಂತರ ಸಾಲ ಕೊಡಬೇಕೆ ಬೇಡವೆ ಎಂದು ತಿಳಿಸುತ್ತೇವೆ ಎನ್ನುತ್ತಾರೆ. ಇದರಿಂದ ಬಹುತೇಕ ರೈತರಿಗೆ ಸಾಲ ಸಿಗದಂತೆ ಆಗುತ್ತದೆ. ರೈತ ದೇಶದ ಜನರಿಗೆ ಆಹಾರ ಉತ್ಪಾದನೆ ಮಾಡುವ ಸಲುವಾಗಿ ಬೆಳೆ ಬೆಳೆಯಲು, ವ್ಯವಸಾಯ ಚಟುವಟಿಕೆಗಾಗಿ ಸಾಲ ತೆಗೆದುಕೊಳ್ಳುತ್ತಾನೆ.
ಕೆಲವು ಸಂದರ್ಭ ಪ್ರಕೃತಿಯ ವಕ್ರದೃಷ್ಟಿಯಿಂದ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ ಹಾನಿ, ಬರಹಾನಿ ಸಿಲುಕಿ ಬೆಳೆ ನಷ್ಟ ಅನುಭವಿಸುತ್ತಾನೆ. ಇದರಿಂದ ಕೆಲವು ಸಂದರ್ಭಗಳಲ್ಲಿ ನಿಯಮಗಳ ಪ್ರಕಾರ ಸಕಾಲಕ್ಕೆ ಸಾಲ ಪಾವತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೈತನ ಸಿಬಿಲ್ ಸ್ಕೋರ್ ಉತ್ತಮವಾಗಿರಲು ಸಾಧ್ಯವಾಗುವುದಿಲ್ಲ. ಎಲ್ಲ ವಿಷಯಗಳನ್ನು ಗಮನಿಸಿ ರೈತರ ಕೃಷಿ ಚಟುವಟಿಕೆಗೆ ನೀಡುವ ಸಾಲಕ್ಕೆ ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಕರೋನಾ ಸಂಕಷ್ಟದಿಂದ ರೈತರು ಕಷ್ಟ ಅನುಭವಿಸುತ್ತಿದ್ದರು ರೈತರಿಗೆ ಪ್ರೋತ್ಸಾಹದಾಯಕ ಯಾವುದೇ ಯೋಜನೆ ಜಾರಿ ಮಾಡಿಲ್ಲ ಆದರೆ ಉದ್ಯಮಿಗಳಿಗೆ ಶೇಕಡ 30ರಷ್ಟು ಹೆಚ್ಚುವರಿ ಸಾಲ ಪಡೆದುಕೊಂಡು ವ್ಯಾಪಾರ ಅಭಿವೃದ್ಧಿಪಡಿಸಲು ಪ್ರೋತ್ಸಾಹ ನೀಡಲಾಗಿದೆ ಇಂತಹ ನೀತಿ ರೈತರನ್ನು ನಿರ್ಲಕ್ಷಿಸುವ ನೀತಿ ಗಳಾಗಿವೆ. ಸಂಕಷ್ಟದಲ್ಲಿರುವ ರೈತರ ಸಾಲ ವಸೂಲಾತಿ ಗಾಗಿ ಬ್ಯಾಂಕ್ಗಳು ನೋಟಿಸ್ ನೀಡಿ ಕಿರುಕುಳ ನೀಡುತ್ತಿವೆ ಹಾಗೂ ನ್ಯಾಯಾಲಯಕ್ಕೆ ದಾವೆ ದಾಖಲಿಸುತ್ತೇವೆ ಇದು ಕೂಡಲೇ ನಿಲ್ಲಬೇಕು. ಸರ್ಕಾರಿ ಯೋಜನೆಗಳ ಪ್ರೋತ್ಸಾಹಧನ ಹಣ ರೈತರ ಸಾಲಕ್ಕೆ ವಜಾ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಆನ್ಲೈನ್ ಹಣ ಪಾವತಿ, ರೈತರ ಖಾತೆಯಿಂದ ಅನಾಮಧೇಯರು ವಂಚಿಸುತ್ತಿರುವ ಬಗ್ಗೆ ಜಿಲ್ಲಾಮಟ್ಟದಲ್ಲಿ ತನಿಖಾ ತಂಡ ರಚಿಸಿ ತಕ್ಷಣವೇ ನ್ಯಾಯ ಕೊಡಿಸುವಂತಾಗಬೇಕು ಎಂದು ಆಗ್ರಹಿಸಿದರು.
ಪೊಲೀಸರ ಸರ್ಪಗಾವಲಿನ ನಡುವೆ ಪ್ರತಿಭಟನೆಯ ಮನವಿ ಸ್ವೀಕರಿಸಿದ ರಿಸರ್ವ್ ಬ್ಯಾಂಕ್ ಬ್ಯಾಂಕ್ ಇಂಡಿಯಾ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆನಂದ ಕಿಶೋರ್ ಪಾಟೀಲ್ ಸಮ್ಮುಖದಲ್ಲಿ ಹತ್ತು ಜನ ರೈತ ಪ್ರತಿನಿಧಿಗಳ ಸಭೆ ನಡೆಯಿತು. ರೈತರ ಒತ್ತಾಯ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೌರ್ನರ್ ರವರಿಗೆ ವರದಿ ನೀಡುವುದಾಗಿ ಹಾಗೂ ರೈತರ ಇನ್ನಿತರ ವಿಚಾರಗಳ ಬಗ್ಗೆ 15 ದಿವಸದಲ್ಲಿ ಎಲ್ಲಾ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆದು ರೈತ ಪ್ರತಿನಿಧಿಗಳನ್ನು ಸಭೆಗೆ ಆಮಂತ್ರಣ ನೀಡುವುದಾಗಿ ತಿಳಿಸಿದರು. ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದ ನಂತರ ತೀರ್ಮಾನಕ್ಕೆ ಬರಲಾಯಿತು. (kpc)