ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದೆ ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆಗೆ ಅಂಕೋಲಾ- ಕಾರವಾರ ಬಿಜೆಪಿ ಶಾಸಕಿ ರುಪಾಲಿ ನಾಯಕ್ ತಕರಾರು ವ್ಯಕ್ತ ಪಡಿಸಿದ್ದಾರೆ.
ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದೆ ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆಗೆ ಅಂಕೋಲಾ- ಕಾರವಾರ ಬಿಜೆಪಿ ಶಾಸಕಿ ರುಪಾಲಿ ನಾಯಕ್ ತಕರಾರು ವ್ಯಕ್ತ ಪಡಿಸಿದ್ದಾರೆ.
ಹೆದ್ದಾರಿ ಕಾಮಗಾರಿ ಶೇ. 50ರಷ್ಟು ಪೂರ್ಣಗೊಂಡಿಲ್ಲ ಎಂದಿರುವ ಶಾಸಕಿ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಕಂಪನಿ ವಿರುದ್ಧ ಹರಿ ಹಾಯ್ದಿದ್ದಾರೆ. ಮೊದಲು ಕೆಲಸ ಪೂರ್ಣಗೊಳಿಸಿ ನಂತರ ಟೋಲ್ ಸಂಗ್ರಹಿಸಬೇಕು, ಇಲ್ಲದಿದ್ದರೇ ಕ್ರಮ ಕೈಗೊಳ್ಳುವುದಾಗಿ ಐ ಆರ್ ಬಿ ಕಂಪನಿಗೆ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡದಿಂದ ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಗಡ್ಕರಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಸಂಬಂಧ ಮಾಡಿದ್ದ ಟ್ವೀಟ್ ನಲ್ಲಿ ರಸ್ತೆ ಫೋಟೋ ಹಾಕಿದ್ದ ಗಡ್ಕರಿ ಶೀಘ್ರವೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬರೆದುಕೊಂಡಿದ್ದರು.
ಮಳೆಯಿಂದಾಗಿ ರಸ್ತೆ ಜಲಾವೃತಗೊಂಡಿರುವ ಬಗ್ಗೆ ಗುರುವಾರ ಮಾಧ್ಯಮಗಳು ಶಾಸಕರೊಂದಿಗೆ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದಾಗ ರುಪಾಲಿ ನಾಯಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಿಲ್ಲ. ಕಂಪನಿಯವರು ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಕಡೆ ಮಾತ್ರ ರಸ್ತೆಗಳನ್ನು ಮಾಡಿದ್ದಾರೆ. ಸಿಕ್ಕ ಕಡೆಗಳಲ್ಲಿ ಮೋರಿಗಳನ್ನು ನಿರ್ಮಿಸಿದ್ದಾರೆ. ಆದರೆ ಸರ್ವೀಸ್ ರಸ್ತೆಗಳು ಎಲ್ಲಿವೆ? ಸ್ಥಳೀಯರು ಇನ್ನೊಂದು ಬದಿಗೆ ಹೇಗೆ ದಾಟಬೇಕು? ಎಂದು ರೂಪಾಲಿ ನಾಯಕ್ ಪ್ರಶ್ನಿಸಿದ್ದಾರೆ.
‘ಹಲವು ಕಡೆ ಕಾಮಗಾರಿ ಆರಂಭವಾಗಿಲ್ಲ. ಪಾದಚಾರಿಗಳು, ಸಾಮಾನ್ಯವಾಗಿ ಗ್ರಾಮೀಣ ಜನರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಾರೆ. ಒಂದೇ ಒಂದು ಬೀದಿದೀಪವನ್ನೂ ಅಳವಡಿಸಿಲ್ಲ’ ಎಂದು ಆರೋಪಿಸಿದರು. ಸಂಸ್ಥೆಯು ಕೇವಲ ಬೆರಳೆಣಿಕೆಯಷ್ಟು ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದೆ ಎಂದು ಸೂಚಿಸಿದ ಅವರು, ಇಡೀ ಯೋಜನೆಯು ಅವೈಜ್ಞಾನಿಕವಾಗಿದೆ ಎಂದು ಹರಿಹಾಯ್ದಿದ್ದಾರೆ.
ರಸ್ತೆ ಉದ್ದಕ್ಕೂ ಚರಂಡಿಗಳಿಲ್ಲ. ಸಂಗ್ರಹವಾದ ನೀರನ್ನು ಬೇರೆಡೆಗೆ ತಿರುಗಿಸಬೇಕು. ಆದರೆ ರಸ್ತೆಗಳು ಜಲಾವೃತವಾಗಿವೆ ಎಂದು ಅವರು ಹೇಳಿದರು.
ಗಡ್ಕರಿ ಟ್ವೀಟ್ ಕುರಿತು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಶಾಸಕಿ ರುಪಾಲಿ ನಾಯ್ ಕಂಪನಿಯ ಅಧಿಕಾರಿಗಳು ಗಡ್ಕರಿ ಅವರನ್ನು ದಾರಿ ತಪ್ಪಿಸಿದ್ದಾರೆ . ನಾನು ಈ ಸಂಬಂಧ ಗಡ್ಕರಿ ಅವರಿಗೆ ಪತ್ರ ಬರೆಯುತ್ತೇನೆ, ಕಾಮಗಾರಿಯ ವಾಸ್ತವತೆಯನ್ನು ವಿವರಿಸುತ್ತೇನೆ” ಎಂದು ತಿಳಿಸಿದ್ದಾರೆ.
ಜಿಲ್ಲಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಐಆರ್‌ಬಿ ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ಮತ್ತು ಯೋಜನೆಗೆ ಸಂಬಂಧಿಸಿದ ಜನರ ಸಭೆ ಕರೆದು ರಸ್ತೆ ಯೋಜನೆಗೆ ಇರುವ ಅಡೆತಡೆಗಳನ್ನು ತೆರವುಗೊಳಿಸಿ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು. (ಕಪ್ರಡಾ)