

ಸಿದ್ದಾಪುರ: ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಫಲಿತಾಂಶಕ್ಕೆ ಕಾರಣಿಕರ್ತರಾದ ಶಿಕ್ಷಕರನ್ನು ಕಾನಗೋಡ ಗ್ರಾಮ ಪಂಚಾಯ್ತಿ ವತಿಯಿಂದ ಸನ್ಮಾನಿಸುವ ಮೂಲಕ ಮಾದರಿ ಹೆಜ್ಜೆ ಇಟ್ಟಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಂದೇಶ ಬೋರ್ಕರ್, ಮೇಘನಾ ನಾಯ್ಕ, ಫರಿನ್ ಬಾನು, ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್.ಭಟ್, ಶಿಕ್ಷಕರಾದ ಕಾಂಚನಾ ಕಾಮತ್, ಎಂ.ವಿ.ನಾಯ್ಕ, ಕೇಶವ ಹೆಗಡೆ, ಸಂಧ್ಯಾ ಭಟ್, ಅನಿತಾ ಹೆಗಡೆ, ಹಾಲೇಶ್ ಬಿ.ಆರ್., ಸತೀಶ ಹೆಗಡೆ, ಮಂಜುನಾಥ ಹಟ್ಟಿ, ಆರ್.ಆರ್.ನಾಯ್ಕ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಾ ಪಂಚಾಯ್ತಿ ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ದಿನೇಶ್ ಡಿ ಮಾತನಾಡಿ, ಅಂಕಗಳ ಜತೆಗೆ ನೈತಿಕ ಶಿಕ್ಷಣ ಹಾಗೂ ಸವಾಲುಗಳನ್ನು ಎದುರಿಸುವ ಶಿಕ್ಷಣ ನೀಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾತನಾಡಿ, ಶಿಕ್ಷಣ ಕ್ಷೇತ್ರದ ಸಾಧನೆ ನಿರಂತರವಾಗಿರುತ್ತದೆ. ಕಾನಗೋಡ ಗ್ರಾಮ ಪಂಚಾಯ್ತಿಯ ಈ ಕಾರ್ಯ ಉಳಿದ ಪಂಚಾಯ್ತಿಗಳಿಗೆ ಪ್ರೇರಣೆಯಾಗಬೇಕು. ಮಕ್ಕಳು ಪರೀಕ್ಷೆ ಹಾಗೂ ಅಂಕಕ್ಕಾಗಿ ಓದ ಬೇಡಿ. ಓದಬೇಕು ಎಂದು ಓದಿ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಕೆ.ಶಿವಾನಂದ ಮಾತನಾಡಿ, ಮಕ್ಕಳಲ್ಲಿ ಸ್ಪಷ್ಟ ಗುರಿಯಿರಬೇಕು. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು. ಬಡ ಕೂಲಿಕಾರರ ಮಕ್ಕಳು ಅಧ್ಯಯನ ಮಾಡುತ್ತಿರುವ ಕಾನಗೋಡ ಸರ್ಕಾರಿ ಶಾಲೆಗೆ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿಗಳು ಶಾಲೆಯ ಕೀರ್ತಿಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳಗಬೇಕು ಎಂದರು.
ಈ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ದೇವರಾಜ ತೆವಳ್ಳಕ್ಕನವರ್, ಪಿಡಿಓ ರಾಜಾರಾಮ ಭಟ್, ಸದಸ್ಯರಾದ ಶಿವರಾಯ ಕೊತ್ವಾಲ್, ವೀಣಾ ನಾಯ್ಕ, ರುಜಾರೋ ಪುಡ್ತಾಡೋ, ಕೃಷ್ಣಮೂರ್ತಿ ನಾಯ್ಕ, ಮಾದೇವಿ ಮೇದಾರ, ಲೀಲಾವತಿ ತಳವಾರ್, ಮಾಜಿ ಅಧ್ಯಕ್ಷ ಕೇಶವ ನಾಯ್ಕ ಉಪಸ್ಥಿತರಿದ್ದರು.

ಪರೀಕ್ಷೆಗಾಗಿ ಓದಿಸಬೇಡಿ. ಜ್ಞಾನಗಳಿಕೆಗಾಗಿ ಓದಿಸಿ. – ಸದಾನಂದ ಸ್ವಾಮಿ.
ಸಿದ್ದಾಪುರ: ೧೫- ಇಂದಿನ ಬದಲಾದ ಸ್ಥಿತಿಯಲ್ಲಿ ಪಾಲಕರು, ಶಿಕ್ಷಕರು ತಮ್ಮ ಮಕ್ಕಳು ಹೆಚ್ಚು ಅಂಕಗಳಿಸಬೇಕೆಂದು ಬಯಸಿ ಕೇವಲ ಪರೀಕ್ಷೆಗಾಗಿ ಓದಿಸುವ ಪ್ರವೃತ್ತಿ ಬೆಳೆದಿದ್ದು ಇದು ತುಂಬಾ ಅಪಾಯಕಾರಿ. ಇದರ ಬದಲಿಗೆ ಮಕ್ಕಳಿಗೆ ಅಭಿರುಚಿಗೆ ತಕ್ಕಂತೆ ಜ್ಞಾನ ಗಳಿಸುವ ದೃಷ್ಟಿಯಿಂದ ಪಠ್ಯವಲ್ಲದೆ ಇತರ ಪುಸ್ತಕಗಳನ್ನೂ ಓದಿಸಿದರೆ ವಿದ್ಯಾರ್ಥಿಗಳ ಭವಿಷ್ಯ ಭದ್ರವಾಗುತ್ತದೆ. ಆದ್ದರಿಂದ ಮಕ್ಕಳನ್ನು ಅಂಕಗಳಿಕೆಗೆ ಓದಿಸದೇ ಜ್ಞಾನ ಸಂಪಾದನೆಗಾಗಿ ಓದಿಸಲು ತೊಡಗಿಸಬೇಕೆಂದು ಸಿದ್ದಾಪುರ ಕ್ಷೇತ್ರಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಸಲಹೆ ನೀಡಿದರು.
ಅವರು ಇಂದು ಪಟ್ಟಣದ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕಿನ ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬಿ ಆರ್ ಸಿ ಸಮನ್ವಯಾಧಿಕಾರಿ ಚೈತನ್ಯ ಕುಮಾರ ಕಲಿಕಾ ಚೇತರಿಕೆ ಅನುಷ್ಠಾನ ಕುರಿತು ಮಾತನಾಡಿದರು. ಹಾಳದಕಟ್ಟಾ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಜಿ.ಆಯ್. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ವಿಷಯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಫ್.ಎನ್. ಹರನಗಿರಿ , ಉಪಾಧ್ಯಕ್ಷ ಎಮ್. ಬಿ. ನಾಯ್ಕ ವೇದಿಕೆಯಲ್ಲಿದ್ದರು. ತಾಲೂಕಿನ ಎಲ್ಲಾ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರು ಪಾಲ್ಗೊಂಡಿದ್ದರು.
ಕು ಕ್ಷಮಾ ಸಂಗಡಿಗರು ಪ್ರಾರ್ಥಿಸಿದರೆ ಶಿಕ್ಷಕ ನಿತ್ಯಾನಂದ ಹೆಗಡೆ ಸ್ವಾಗತಿಸಿದರು. ಕನ್ನಡ ಶಿಕ್ಷಕಿ ಗೀತಾ ಬಿ.ಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

