

ಮೊಸರು, ಲಸ್ಸಿ, ಮಜ್ಜಿಗೆ ಮೇಲಿನ ಜಿಎಸ್ ಟಿ ಹೇರಿಕೆ ವಿಚಾರವಾಗಿ ವ್ಯಾಪಕ ಚರ್ಚೆ ಮತ್ತು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಬಿಜೆಪಿ ಸ್ಪಷ್ಟನೆ ನೀಡಿದೆ.

ನವದೆಹಲಿ: ಮೊಸರು, ಲಸ್ಸಿ, ಮಜ್ಜಿಗೆ ಮೇಲಿನ ಜಿಎಸ್ ಟಿ ಹೇರಿಕೆ ವಿಚಾರವಾಗಿ ವ್ಯಾಪಕ ಚರ್ಚೆ ಮತ್ತು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಬಿಜೆಪಿ ಸ್ಪಷ್ಟನೆ ನೀಡಿದೆ.
ಹೌದು.. ಇತ್ತೀಚೆಗೆ ಮೊಸರು, ಲಸ್ಸಿ, ಮಜ್ಜಿಗೆ ಸೇರಿದಂತೆ ವಿವಿಧ ಹಾಲಿನ ಉತ್ಪನ್ನಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ ಈ ಹಿಂದೆ ಜಿಎಸ್ ಟಿ ಜಾರಿ ವೇಳೆ ಇದೇ ವಿಚಾರವಾಗಿ ಮಾತನಾಡಿದ್ದ ಪ್ರಧಾನಿ ಮೋದಿ, ಇಷ್ಟು ಅಕ್ಕಿ, ಬೇಳೆ, ಮೊಸರಿನ ಮೇಲೆಯೂ ತೆರಿಗೆ ಹೇರಲಾಗುತ್ತಿತ್ತು. ಆದರೆ ಇದೀಗ ಜಿಎಸ್ ಟಿ ಜಾರಿ ಬಳಿಕ ಅವು ತೆರಿಗೆ ಮುಕ್ತವಾಗಲಿವೆ ಎಂದು ಹೇಳಿದ್ದರು.
ಆದರೆ ಇದೀಗ ಮತ್ತೆ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ ಹೇರಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮಾತು ತಪ್ಪಿದರೇ ಎಂಬ ಪ್ರಶ್ನೆ ಮೂಡುತ್ತಿದೆ. ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಬಿಜೆಪಿ ಸ್ಪಷ್ಟನೆ
ಇದೀಗ ಇದೇ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಬಿಜೆಪಿ ಹಾಲು, ಮೊಸರಿನ ಮೇಲೆ ಜಿಎಸ್‌ಟಿ ಹೇರಿಕೆ ಏಕಪಕ್ಷೀಯ ತೀರ್ಮಾನವಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ‘ಹಾಲು, ಮೊಸರು, ಮಂಡಕ್ಕಿ ಸೇರಿದಂತೆ ಕೆಲವು ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿರುವುದು ಕೇಂದ್ರ ಸರ್ಕಾರದ ಏಕಪಕ್ಷೀಯ ತೀರ್ಮಾನ ಅಲ್ಲ. ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲ ರಾಜ್ಯಗಳ ಪ್ರತಿನಿಧಿಗಳೂ ಇದ್ದಾರೆ. ಮಂಡಳಿಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು. (kpc)
