

ಸತ್ಯ ಹೇಳುವುದು,ಸತ್ಯ ಶೋಧಿಸುವುದು ಪತ್ರಕರ್ತರು ಮತ್ತು ಶಿಕ್ಷಕರ ಕೆಲಸ ಎಂದು ಪ್ರತಿಪಾದಿಸಿರುವ ಖ್ಯಾತ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಇಂದು ಮಾಧ್ಯಮಗಳ ಆದ್ಯತೆ ಬದಲಾಗಿರುವುದರಿಂದ ಮಾಧ್ಯಮಗಳ ಮೇಲಿನ ಭರವಸೆ ಕುಸಿಯುತ್ತಿದೆ ಎಂದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರ ಕನ್ನಡ ಜಿಲ್ಲಾ ಘಟಕ ನೀಡುವ ಹರ್ಮನ್ ಮೊಗ್ಲಿಂಗ್ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ಮತಪ್ರಚಾರಕ್ಕಾಗಿ ಬಂದಿದ್ದ ಹರ್ಮನ್ ಮೊಗ್ಲಿಂಗ್ ಕನ್ನಡದಲ್ಲಿ ಮೊದಲ ಪತ್ರಿಕೆ ಪ್ರಾರಂಭಿಸಬೇಕಾಯಿತು.ಹಲವು ವಿಚಾರಗಳನ್ನು ತಿಳಿಸಿದವರು,ಸಂಶೋಧಿಸಿದವರು ಹೊರಗಿನವರು ನಮ್ಮ ವಿದ್ಯೆ ನಮಗೆ ಸತ್ಯ ಹೇಳುವ ಧೈರ್ಯ ಕೊಡದಿದ್ದರೆ ಹೇಗೆ? ಪಠ್ಯಕ್ರಮದ ಅಸಂಬಧ್ಧತೆ ನೋಡಿದ್ದೀರಿ ಶಿಕ್ಷಕರು ಗಾಂಧಿ,ಅಂಬೇಡ್ಕರ್,ಕುವೆಂಪು, ಬಸವಣ್ಣನವರ ಬಗ್ಗೆ ವಾಸ್ತವ ಸತ್ಯ ಹೇಳುವಂತಾದರೆ ಪಠ್ಯ ರಾಜಕೀಯದ ಬಗ್ಗೆ ಮಾತನಾಡುವ ಅನಿವಾರ್ಯತೆ ಉದ್ಭವಿಸುವುದಿಲ್ಲ ಎಂದು ಶಿಕ್ಷಕರ ಜವಾಬ್ಧಾರಿ ನೆನಪಿಸಿದರು.

ಪ್ರಶಸ್ತಿಪ್ರದಾನ,ಸನ್ಮಾನ,ಅಭಿನಂದನಾ ಕಾರ್ಯಕ್ರಮವನ್ನು ಪುಸ್ತಕ ವಿತರಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದ ಅಂಕಣಕಾರ ಡಿ. ರಾಮಪ್ಪ ಮಾತನಾಡಿ ಕನ್ನಡದ ಸಾಕ್ಷಿಪ್ರಜ್ಞೆಗಳಾಗಿರುವ ದಿನೇಶ್ ಅಮೀನ್ ಮಟ್ಟು, ದೇವನೂರು ಮಹಾದೇವರಂಥವರು ಈಗ ಹೆಚ್ಚು ಕಾಡುತಿದ್ದಾರೆ. ಇಂದಿನ ಭಾರತದ ಪ್ರಕ್ಷುಬ್ದತೆಗೂ ಇವರಲ್ಲೇ ಪರಿಹಾರವಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟುಗಳ ಸಬಲೀಕರಣಕ್ಕೆ ಶ್ರಮಿಸಿದ ಡಾ.ಮಹೇಂದ್ರ ಕುಮಾರ್, ಕಾರವಾರ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಹೇಮಂತ ರಾಮಡಗಿ, ಡಿ.ಎಸ್.ಎಸ್. ಪ್ರಮುಖ,ನಿವೃತ್ತ ಶಿಕ್ಷಕ ಶಂಕರ್ ಸಿ.ಎ. ರನ್ನು ಸನ್ಮಾನಿಸಿ,ಗೌರವಿಸಲಾಯಿತು.

ಯುವ ಪ್ರತಿಭೆಗಳಾದ ಲೋಹಿತ್ ನಾಯಕ,ಪ್ರಥ್ವಿ ಪಾಟೀಲ್ ಮತ್ತು ಗಣೇಶ್ ನಾಯ್ಕ ರನ್ನು ಸನ್ಮಾನಿಸಿ,ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಜೆ.ಡಬ್ಲೂ ರಾಜ್ಯಾಧ್ಯಕ್ಷ ಬಿ.ನಾರಾಯಣ ಮಾತನಾಡಿ ಸಮಾಜದಲ್ಲಿ ಪತ್ರಕರ್ತನ ಪ್ರಾಮುಖ್ಯತೆ ಮತ್ತು ಮಾಧ್ಯಮ ಕ್ಷೇತ್ರದ ಶೋಷಣೆಗಳ ಬಗ್ಗೆ ವಿವರವಾಗಿ ಮಾತನಾಡಿ ಮಾಧ್ಯಮ,ಪತ್ರಕರ್ತರಿಂದ ಎಲ್ಲವನ್ನೂ ನಿರೀಕ್ಷಿಸುವ ಸಮಾಜ ಪತ್ರಕರ್ತರ ಹಿತಾಸಕ್ತಿಗೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದರು.


