ಸಿದ್ದಾಪುರ: ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಅಗಷ್ಟ 13 ರಂದು ಬೃಹತ್ ಲೋಕ ಅದಾಲತ್ ಆಯೋಜಿಸಲಾಗಿದ್ದು, ನ್ಯಾಯಾಲಯದ ಮೇಲಿನ ಒತ್ತಡ ಕಡಿಮೆ ಮಾಡಲು ಕಕ್ಷಿದಾರರು ಪಾಲ್ಗೊಂಡು ಸಹಕರಿಸಬೇಕು ಎಂದು ನ್ಯಾಯಾಧೀಶ ತಿಮ್ಮಯ್ಯ ಜಿ. ತಿಳಿಸಿದರು.
ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜಿಯಾಗಬಹುದಾದ ಪ್ರಕರಣಗಳು, ಚೆಕ್ ಬೌನ್ಸ್, ಜೀವನಾಂಶ ಕೋರಿ ಬಂದ ಪ್ರಕರಣ, ಆಸ್ತಿಗೆ ಸಂಬಂಧಿಸಿದ ವಿಭಾಗದ ಪ್ರಕರಣಗಳು ಸಹ ಲೋಕ ಅದಾಲತನಲ್ಲಿ ಇತ್ಯರ್ಥ ಮಾಡಲು ಪ್ರಯತ್ನ ಮಾಡಲಾಗುವುದು. ಅಪರಾಧ ಪ್ರಕರಣಗಳ ರಾಜಿಗೂ ಸಹ ಮುಂದಾಗಲಾಗುವುದು. ಕಡಿಮೆ ಸಮಯದಲ್ಲಿ ಹಣ ಉಳಿಸುವ ಜತೆಗೆ ಸಂಬಂಧ ವೃದ್ಧಿಸುವ ಸಲುವಾಗಿ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕೋರಿದರು.
ಕಳೆದ ಅದಾಲತನಲ್ಲಿ 390 ಪ್ರಕರಣ ಇತ್ಯರ್ಥಪಡಿಸಲಾಗಿದ್ದು, ಅಗಷ್ಟ 13 ರಂದು ಒಂದು ಸಾವಿರ ಪ್ರಕರಣ ಅದಾಲತನಲ್ಲಿ ತೆಗೆದುಕೊಳ್ಳಲಾಗುವುದು. ಲೋಕ ಅದಾಲತನ ಪ್ರಯೋಜನವನ್ನು ಜನ ಪಡೆದುಕೊಳ್ಳಬೇಕು ಎಂದರು.
ವೈವಾಹಿಕ ಜೀವನದಲ್ಲಿನ ಸಣ್ಣ ಪುಟ್ಟ ವಿಷಯಕ್ಕೂ ನ್ಯಾಯಾಲಯದ ಮೆಟ್ಟಿಲೇರುತ್ತಿರುವುದು ಸರಿಯಲ್ಲ. ತಾಲೂಕಾ ಕಾನೂನು ಸೇವಾ ಸಮಿತಿ ವತಿಯಿಂದ ಬಡವರಿಗೆ ಉಚಿತವಾಗಿ ವಕೀಲರನ್ನು ನೇಮಿಸಿ ಪ್ರಕರಣ ನಡೆಸುವ ಕಾರ್ಯ ನ್ಯಾಯಾಲಯದಿಂದ ನಡೆಯುತ್ತಿದ್ದು, ಸಾರ್ವಜನಿಕ ಕಕ್ಷಿಧಾರರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಭಟ್ಕಳದಲ್ಲಿ ನೆರೆ ಹಾನಿ: ಅಂಗಡಿ, ಮೀನುಗಾರಿಕಾ ಬೋಟ್ಗಳಿಗೆ ವಿಶೇಷ ಅನುದಾನ ಒದಗಿಸಲು ಸಿಎಂ ಭರವಸೆ!
ಒಂದೇ ದಿನ ಸುರಿದ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ಸಾವನ್ನಪ್ಪಿರುವ ಮುಟ್ಟಳ್ಳಿಯ ಸ್ಥಳಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದು, ಸಾವನ್ನಪ್ಪಿರುವ ಪ್ರತಿಯೊಬ್ಬರಿಗೂ ತಲಾ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
ಕಾರವಾರ: ಭೀಕರ ಮಳೆಯಿಂದ ಗುಡ್ಡ ಕುಸಿದು ಸಾವನ್ನಪ್ಪಿದ ಕುಟುಂಬಕ್ಕೆ ಸಾಂತ್ವನ ಹೇಳಿ ಸಾವನ್ನಪ್ಪಿದ ಪ್ರತಿಯೊಬ್ಬರಿಗೂ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಹಾಗೂ ಅವರ ಕುಟುಂಬದ ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಕರ್ಯ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುಡ್ಡ ಕುಸಿತದಿಂದ ಸಾವಿಗೀಡಾದ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಿಜಕ್ಕೂ ವಿಷಾದನೀಯ. ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವ ಮನೆಗಳಿಗೆ ತೊಂದರೆ ಇದೆ. ಅಂತಹ ಮನೆಯವವರನ್ನು ಈಗಾಗಲೇ ಸ್ಥಳಾಂತರ ಮಾಡಲು ನೋಟಿಸ್ ಕೂಡಾ ನೀಡಲಾಗಿದೆ ಎಂದರು.
ಭಟ್ಕಳ ತಾಲೂಕಿನ ಮುಟ್ಟಳ್ಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ
ಭಟ್ಕಳ ಪಟ್ಟಣ ಹಾಗೂ ಮುಟ್ಟಳ್ಳಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಮೇಘಸ್ಪೋಟಗೊಂಡ ಕಾರಣ ಭಾರಿ ಮಳೆಯಾಗಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಚಿರೆಕಲ್ಲು ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಮಣ್ಣು ಸಡಿಲಗೊಂಡು ಗುಡ್ಡ ಕುಸಿದು ಅವಘಡ ಸಂಭವಿಸಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಈ ಪ್ರದೇಶದಲ್ಲಿ ಜಿಯೋಲಾಜಿಕಲ್ ಸರ್ವೇ ನಡೆಸಿ ಇನ್ನೂ ಯಾವ ಮನೆಗಳಿಗೆ ತೊಂದರೆ ಇದೆ ಎಂಬುದನ್ನು ಪತ್ತೆ ಹಚ್ಚಿ ಆ ಮನೆಗಳ ಸ್ಥಳಾಂತರಕ್ಕೆ ಮೊದಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಳೆ ಹಾನಿಯ ತುರ್ತು ಪರಿಹಾರಕ್ಕೆ 500 ಕೋಟಿ ಬಿಡುಗಡೆ: ರಾಜ್ಯದಲ್ಲಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಮೂಲ ಸೌಕರ್ಯ ಒದಗಿಸಲು ತುರ್ತು ಪರಿಹಾರಕ್ಕಾಗಿ 500 ಕೋಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 14 ಜಿಲ್ಲೆಗಳ 115 ಹಳ್ಳಿಗಳಲ್ಲಿ ಭಾರಿ ಮಳೆಯಿಂದಾಗಿ ನೆರೆ ಹಾನಿ ಸಂಭವಿಸಿದೆ. ಬುಧವಾರ ಮತ್ತೆ ತುಮಕೂರಿನಲ್ಲಿ ನಾಲ್ಕು ಜನ ಹಾಗೂ ವಿಜಯನಗರದಲ್ಲಿ ಓರ್ವರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ 600 ಮನೆಗಳು ಸಂಪೂರ್ಣ, 2 ಸಾವಿರಕ್ಕೂ ಹೆಚ್ಚು ಮನೆಗಳು ತೀವ್ರತರ ಹಾಗೂ 14 ಸಾವಿರಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದೆ. ಎಲ್ಲದಕ್ಕೂ ಕೂಡ ಅನುದಾನ ಬಿಡುಗಡೆ ಮಾಡಲು ಈಗಾಗಲೇ ಸೂಚಿಸಲಾಗಿದೆ. 21,431 ಹೆಕ್ಟೇರ್ ಪ್ರದೇಶ ಬೆಳೆ ನಾಶವಾಗಿದ್ದು, ಇದು ಇನ್ನೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಜಂಟಿ ಸಮೀಕ್ಷೆ ಮಾಡಬೇಕಾಗಿರುವುದರಿಂದ ವರದಿ ಬಂದ ತಕ್ಷಣ ಪರಿಹಾರ ವಿತರಿಸಲಾಗುವುದು ಎಂದರು.
ಇನ್ನು ಭಟ್ಕಳದಲ್ಲಿ ಧಾರಾಕಾರವಾಗಿ ಸುರಿದ ಭಾರಿಮಳೆಯಿಂದಾಗಿ ಮನೆ, ಸಾವಿರಕ್ಕೂ ಹೆಚ್ಚು ಅಂಗಡಿಗಳಿಗೆ, ನೂರಾರು ಬೋಟ್ಗಳಿಗೆ, ರಸ್ತೆ ಸೇತುವೆಗಳಿಗೆ ಹಾನಿಯಾಗಿರುವ ಮಾಹಿತಿ ಇದೆ. ಸುಮಾರು 40 ಕೋಟಿ ರೂ ಹಾನಿಯಾಗಿರುವ ಬಗ್ಗೆ ಸದ್ಯ ಅಂದಾಜಿಸಲಾಗಿದೆ. ಎಷ್ಟೇ ಹಾನಿಯಾದರೂ ಮನೆ, ಅಂಗಡಿ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಲು ಸಿದ್ದವಿದೆ.
ಜಿಲ್ಲಾಧಿಕಾರಿಗೆ ಈಗಾಗಲೇ ನಾಳೆ ಒಳಗಾಗಿ ಪ್ರಾಥಮಿಕ ವರದಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತದ ಬಳಿ ಈಗಾಗಲೇ 38 ಕೋಟಿ ಹಣ ಇದ್ದು, ಎನ್ಡಿಆರ್ಎಫ್ ಪ್ರಕಾರ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ನೆರೆ ನೀರು ನುಗ್ಗಿ ಹಾನಿಗೊಳಗಾಗಿರುವ ಅಂಗಡಿಗಳಿಗೆ ವಿಶೇಷ ಅನುದಾನ ಅಗತ್ಯ ಇದ್ದು, ಈ ಬಗ್ಗೆ ಹಾನಿಗೊಳಗಾದ ವರದಿ ಕಳುಹಿಸಿದರೆ ಅನುಮೋದನೆ ನೀಡಿ ಪರಿಹಾರ ಒದಗಿಸಲಾಗುವುದು. ಮೀನುಗಾರರ ಬೋಟ್ಗಳಿಗೂ ಸಾಕಷ್ಟು ಹಾನಿಯಾಗಿದ್ದು, ತಾಂತ್ರಿಕ ಪರಿಣಿತರಿಂದ ವಿವರವಾದ ವರದಿ ಪಡೆದು, ಅವರಿಗೂ ವಿಶೇಷ ಅನುದಾನ ನೀಡಿ ರಿಪೇರಿ ಮಾಡಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಳಚೆಯಲ್ಲಿರುವವರ ಸ್ಥಳಾಂತರಕ್ಕೆ ಕೆಲವರು ಒಪ್ಪುತ್ತಿಲ್ಲ. ಆದರೆ ಎಲ್ಲರನ್ನು ಮನವೊಲಿಸಿ ಆ ಪ್ರದೇಶದಿಂದ ಸ್ಥಳಾಂತರಿಸಿ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಐಆರ್ಬಿ ಹೆದ್ದಾರಿ ಕಾಮಗಾರಿಯಿಂದ ಅವಾಂತರಗಳಾಗುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಎನ್ಎಚ್ಐ ಮುಖ್ಯ ಎಂಜಿನಿಯರ್ಗಳನ್ನು ಕರೆಸಿ ಮಾತನಾಡುವುದಾಗಿ ತಿಳಿಸಿದರು.
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ವರದಿ ತರಿಸಿ ತಿರ್ಮಾನ: ಈಗಿರುವ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಮೂಲ ಸೌಕರ್ಯ ಒದಗಿಸಿ ಈ ಭಾಗದ ಜನರ ಸೇವೆಗೆ ಒದಗಿಸಲಾಗುವುದು. ಸುಸಜ್ಜಿತ ಆಸ್ಪತ್ರೆ ಬೇಡಿಕೆ ಬಗ್ಗೆ ಇನ್ನು ಎಂಟತ್ತು ದಿನದ ಬಳಿಕ ಕಾರವಾರಕ್ಕೆ ಆಗಮಿಸಲಿದ್ದು, ಅಷ್ಟರೊಳಗೆ ವರದಿ ತರಸಿಕೊಂಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ತಿರ್ಮಾನ ಕೈಗೊಳ್ಳಲಾಗುವುದು. ಇನ್ನು ಜಿಲ್ಲೆಯಲ್ಲಿ ಸೇವೆಗೆ ನಿಯುಕ್ತಿಗೊಳ್ಳುವ ವೈದ್ಯರು ಇಲ್ಲಿಯೇ ಸೇವೆ ಸಲ್ಲಿಸಲು ಬೇಕಾಗಿರುವ ಅಗತ್ಯ ಕ್ರಮಕೈಗೊಳ್ಳುವುದಾಗಿಯೂ ತಿಳಿಸಿದರು.
ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವ ಮಾಡಿಕೊಳ್ಳುತ್ತಿರುವುದು ಸಂತೋಷ. ಅವರು ಇನ್ನು ಹೆಚ್ಚು ಕಾಲ ಬಾಳಲಿ ಎಂದು ಶುಭ ಹಾರೈಸಿದ ಸಿಎಂ, ಇಷ್ಟು ಸಮಸ್ಯೆ, ನೆರೆ ಹಾವಳಿ ಇದ್ದಾಗ ಈ ರಿತಿ ವೈಯಕ್ತಿಕ ಉತ್ಸವ ಮಾಡಿಕೊಳ್ಳಬೇಕೋ ಬೇಡವೋ ಎಂಬುದರ ಬಗ್ಗೆ ಸಿದ್ದರಾಮಯ್ಯ ಅವರೇ ಹೇಳಬೇಕು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಂದಾಯ ಇಲಾಖೆ ಸಚಿವ ಆರ್. ಅಶೋಕ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಇಲಾಖೆ ಸಚಿವ ಶಿವರಾಂ ಹೆಬ್ಬಾರ್ ಹಾಗೂ ಇನ್ನಿತರ ಶಾಸಕರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. (kpc)