


ಪರೇಶ್ ಮೇಸ್ತಾ ಹತ್ಯೆ ಆರೋಪಿಗೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ: ಬಿಜೆಪಿ ವಿರುದ್ಧ ಆಕ್ರೋಶ
ಪರೇಶ್ ಮೇಸ್ತಾ ಕೊಲೆ ಪ್ರಕರಣ ಪ್ರಮುಖ ಆರೋಪಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾರವಾರ: ಪರೇಶ್ ಮೇಸ್ತಾ ಸಾವಿನ ಪ್ರಕರಣದ ಪ್ರಮುಖ ಆರೋಪಿಗೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಡಿಸೆಂಬರ್ 2017 ರಲ್ಲಿ ಹೊನ್ನಾವರ ಪಟ್ಟಣದಲ್ಲಿ ಗಲಭೆಯೊಂದು ನಡೆದಿತ್ತು. ಇದರಲ್ಲಿ ಪಟ್ಟಣದ ಪರೇಶ್ ಮೇಸ್ತಾ ಎನ್ನುವ ಯುವಕ ನಾಪತ್ತೆಯಾಗಿ, ಎರಡು ದಿನಗಳ ನಂತರ ಶವವಾಗಿ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿದ್ದ. ಮೇಸ್ತಾನನ್ನು ಕೋಮು ಗಲಭೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಬಿಜೆಪಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಇದು ಹೊನ್ನಾವರ, ಕಾರವಾರ, ಕುಮಟಾ, ಶಿರಸಿಯಲ್ಲಿ ದೊಡ್ಡ ಗಲಭೆಗೂ ಸಹ ಕಾರಣವಾಗಿತ್ತು. ಬಳಿಕ ಈ ಪ್ರಕರಣವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು.
ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಜಮಾಲ್ ಅಜಾದ್ ಅಣ್ಣಿಗೇರಿ ಎಂಬಾತನನ್ನು ಎ1 ಆರೋಪಿಯನ್ನಾಗಿ ಮಾಡಿ ಬಂಧಿಸಲಾಗಿತ್ತು. ಈ ಪ್ರಕರಣವನ್ನ ಇನ್ನೂ ಸಿಬಿಐ ತನಿಖೆ ಮಾಡುತ್ತಿದ್ದು, ಬಂಧಿತರೆಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದರ ನಡುವೆ ಕೆಲ ದಿನಗಳ ಹಿಂದೆ ಜಿಲ್ಲಾ ವಕ್ಫ್ ಬೋರ್ಡ್ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಉಪಾಧ್ಯಕ್ಷ ಸ್ಥಾನವನ್ನ ಎ1 ಆರೋಪಿ ಅಜಾದ್ ಅಣ್ಣಿಗೇರಿಗೆ ನೀಡಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.
ಪರೇಶ್ ಮೇಸ್ತಾ ಹತ್ಯೆ ವಿರುದ್ಧ ಹೋರಾಡಿ ಅಧಿಕಾರ ಪಡೆದಿರುವ ಬಿಜೆಪಿ, ಪ್ರಕರಣದ ಆರೋಪಿಗೆ ಸರ್ಕಾರಿ ಸಂಸ್ಥೆಯಲ್ಲಿ ಸ್ಥಾನ ಕೊಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೇ, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದಲೇ ಉಪಾಧ್ಯಕ್ಷ ಸ್ಥಾನ ನೀಡಿದ್ದು, ಬಿಜೆಪಿಗೆ ನೈತಿಕತೆ ಏನು ಉಳಿದಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
