

ಮಹಾಪುರುಷರ ಹುಟ್ಟುಹಬ್ಬದ ದಿನ ಗುಣಗಾನ ನಡೆಯುತ್ತಾ ಇರುತ್ತದೆ.
ಅರಸು ಅವರನ್ನು ನಿಜವಾಗಿಯೂ ಗೌರವಿಸುವವರು, ಕಷ್ಟಕಾಲದಲ್ಲಿಯೂ ಕೈಬಿಡದೆ ಜೊತೆಯಲ್ಲಿ ನಿಂತವರು, ರಾಜಕೀಯವಾಗಿ ವಿರುದ್ಧ ದಿಕ್ಕಿನಲ್ಲಿದ್ದರೂ ಅರಸು ಅವರನ್ನು ಸೈದ್ಧಾಂತಿಕವಾಗಿ ಒಪ್ಪುವವರ ಜೊತೆಯಲ್ಲಿ,
ಅರಸು ಬೆನ್ನಿಗೆ ಇರಿದವರು, ಕಷ್ಟಕಾಲದಲ್ಲಿ ಕೈಬಿಟ್ಟು ಹೋದವರು, ಅವರಿದ್ದ ಪಕ್ಷದಲ್ಲಿಯೇ ಇದ್ದು ಅವರ ವಿರುದ್ಧ ಮಾತನಾಡುತ್ತಿರುವವರು…
ಹೀಗೆ ತರಹೇವಾರಿ ಜನ ಇಂದು ದೇವರಾಜ ಅರಸು ಅವರನ್ನು ಹೊಗಳಿ ಹಾಡುತ್ತಿದ್ದಾರೆ.
ಒಬ್ಬ ಮಹಾಪುರುಷನಿಂದ ಕಲಿಯಬೇಕಾಗಿರುವುದು ಕೇವಲ ಅವರ ಶಕ್ತಿ-ಸಾಮರ್ಥ್ಯ ಮತ್ತು ಸಾಧನೆಗಳಿಂದ ಮಾತ್ರ ಅಲ್ಲ,
ಅವರ ದೌರ್ಬಲ್ಯ ಮತ್ತು ವೈಫಲ್ಯಗಳಿಂದಲೂ ಕಲಿಯುವುದಿರುತ್ತದೆ.
ಮೂರುನಾಲ್ಕು ವರ್ಷಗಳ ಹಿಂದೆ ಆಗಿನ್ನೂ ನನಗೆ ಆತ್ಮೀಯರಾಗಿದ್ದ ಎಚ್.ವಿಶ್ವನಾಥ್ ದೇವರಾಜ ಅರಸು ಬಗ್ಗೆ ಬರೆದಿದ್ದ ಪುಸ್ತಕವನ್ನು ಮೈಸೂರಿನಲ್ಲಿ ನಾನು ಬಿಡುಗಡೆ ಮಾಡಿದ್ದೆ. ಆ ಸಮಾರಂಭದಲ್ಲಿ ನಾನಾಡಿದ ಮಾತುಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ದಾಖಲಿಸಿದ್ದೇನೆ:
“….ದೇವರಾಜ ಅರಸು ಅವರ ಬದುಕಿನಿಂದ ಇಂದಿನ ರಾಜಕಾರಣಿಗಳು ಕಲಿಯಬೇಕಾಗಿರುವ ಮತ್ತು ಕಲಿಯಬಾರದ ಕೆಲವು ಪಾಠಗಳಿವೆ.
ಮೊದಲನೆಯದಾಗಿ ಅರಸು ಅವರಿಗೆ ಜ್ಯೋತಿಷಿಗಳು, ಮಂತ್ರವಾದಿಗಳ ಬಗ್ಗೆ ಇದ್ದ ಮೂಢನಂಬಿಕೆ,
ಎರಡನೆಯದಾಗಿ ತಮ್ಮ ಸುತ್ತ ಕೂಡಿಹಾಕುತ್ತಿದ್ದ ಭಟ್ಟಂಗಿಗಳು ಮತ್ತು ಮೂರನೆಯದಾಗಿ ಅವರು ತಮ್ಮ ಗೆಳತಿಯರ ಆಯ್ಕೆಯಲ್ಲಿ ಮಾಡುತ್ತಿದ್ದ ತಪ್ಪುಗಳು.
ಈ ದೌರ್ಬಲ್ಯಗಳನ್ನು ದೇವರಾಜ ಅರಸು ಅವರಿಗೆ ಮೀರಲು ಸಾಧ್ಯವಾಗಿದ್ದರೆ ಅವರು ಇನ್ನೊಂದಿಷ್ಟು ಕಾಲ ಬದುಕಿರುತ್ತಿದ್ದರು, ಕರ್ನಾಟಕದ ರಾಜಕೀಯ ಬೇರೆಯೇ ಹಾದಿ ಹಿಡಿಯುತ್ತಿತ್ತು. ತಮಿಳುನಾಡು, ಆಂಧ್ರಪ್ರದೇಶಗಳಂತೆ ಕರ್ನಾಟಕದಲ್ಲಿಯೂ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರುತ್ತಿತ್ತು.
ಅರಸು ಅವರಿಗೆ ಜ್ಯೋತಿಷಿಗಳು, ಮಂತ್ರವಾದಿಗಳ ಬಗ್ಗೆ ಇದ್ದ ಮೂಢ ನಂಬಿಕೆ ಬಗ್ಗೆ ಹಲವಾರು ಸತ್ಯ,ಅರ್ಧ ಸತ್ಯ ಮತ್ತು ಸುಳ್ಳು ಕತೆಗಳಿವೆ. ಅದೇನೇ ಇದ್ದರೂ ಅವರು ಜ್ಯೋತಿಷಿಗಳನ್ನು ನಂಬುತ್ತಿದ್ದದ್ದು ನಿಜ. ಅವರು ತಮ್ಮ ಎರಡೂ ತೋಳುಗಳಲ್ಲಿ ಕಟ್ಟಿಕೊಂಡಿದ್ದ ತಾಯಿತಗಳ ಬಗ್ಗೆ ವಡ್ಡರ್ಸೆಯವರು ಬೇಸರದಿಂದ ಬರೆದಿದ್ದರು. ಆದರೆ ನಂಬಿದ್ದ ಜ್ಯೋತಿಷಿಗಳು ಹೇಳಿದ್ದ ಯಾವ ಭವಿಷ್ಯವೂ ಅವರ ಬದುಕಲ್ಲಿ ನಿಜ ಆಗಿರಲಿಲ್ಲ.
ಎರಡನೆಯದಾಗಿ ಅವರ ಸುತ್ತ ಇದ್ದ ಭಟ್ಟಂಗಿಗಳ ಕೂಟ. 1977ರ ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಹುಟ್ಟು ನೀಡಿದ ನಂತರ, ಅರಸು ಅವರಿಗೆ ತಮ್ಮ ಪಕ್ಷದಲ್ಲಿ ಮಾತ್ರವಲ್ಲ ವಿರೋಧಪಕ್ಷಗಳಲ್ಲಿಯೂ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ‘’ ಬುದ್ದಿ, ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿರುವ ನೀವು ಅವರಿಗಿಂತ ಏನು ಕಡಿಮೆ? ಎಂಬರ್ಥದ ಹೊಗಳಿಕೆಯ ಮಾತುಗಳಿಗೆ ಅರಸು ತಲೆದೂಗಲಾರಂಭಿಸಿದ್ದರಂತೆ. ಅಂತಿಮವಾಗಿ ಇಂತಹ ಭಟ್ಟಂಗಿಗಳು ಅರಸು ಅವರಲ್ಲೊಬ್ಬ ಬಂಡುಕೋರನನ್ನು ಹುಟ್ಟುಹಾಕಿದ್ದರು.
ಮೂರನೆಯದಾಗಿ, ಕೊನೆದಿನಗಳಲ್ಲಿ ಅವರಿಗೆ ಗೆಳತಿಯರು, ದತ್ತುಪುತ್ರಿಯರ ರೂಪದಲ್ಲಿ ಬಂದ ಹೆಣ್ಣುಮಕ್ಕಳು, ಖಾಸಗಿ ವಿಷಯಗಳಿಗಷ್ಟೇ ಸೀಮಿತಗೊಳ್ಳದೆ, ಅವರ ರಾಜಕೀಯ ತೀರ್ಮಾನಗಳ ಮೇಲೆಯೂ ಪ್ರಭಾವ ಬೀರುವಷ್ಟು ಪ್ರಬಲರಾಗಿ ಹೋದರು. ಇದು ಅರಸು ಬದುಕಲ್ಲಿ ಮಾತ್ರ ನಡೆಯಲಿಲ್ಲ, ಜಾರ್ಜ್ ಫರ್ನಾಂಡಿಸ್, ಎನ್.ಟಿ.ರಾಮರಾವ್, ಎಂ.ಜಿ.ರಾಮಚಂದ್ರನ್ ಮೊದಲಾದವರ ಬದುಕಲ್ಲಿಯೂ ನಡೆದಿದೆ ( ಉದ್ದೇಶಪೂರ್ವಕವಾಗಿ ಈಗ ಬದುಕಿರುವ ರಾಜಕಾರಣಿಗಳ ಹೆಸರನ್ನು ನಾನು ಉಲ್ಲೇಖಿಸಿಲ್ಲ, ಕ್ಷಮಿಸಿ).
-ಇಷ್ಟು ಮಾತುಗಳನ್ನು ಆ ಸಭೆಯಲ್ಲಿ ಹೇಳಿದ ನಂತರ ನಾನು ವಾಪಸು ಬೆಂಗಳೂರಿಗೆ ಬಂದೆ.
ಅಲ್ಲಿರುವ ಸ್ನೇಹಿತರು ನಂತರ ಪೋನ್ ಮಾಡಿ ನಿಮ್ಮ ಭಾಷಣದ ಬಗ್ಗೆ ವಿಶ್ವನಾಥ್ ಬೇಸರಿಸಿಕೊಂಡಿದ್ದರು ಎಂದು ಹೇಳಿದ್ದರು. ಯಾಕೆಂದು ನನಗೆ ಗೊತ್ತಾಗಿಲ್ಲ. ಆದರೆ ನಂತರದ ದಿನಗಳಲ್ಲಿ ನನಗೆ ಪೋನ್ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು. (-dinesh ameenmattu)
