

ಬಿಜೆಪಿ ಹಾಗೂ ಆರ್ಎಸ್ಎಸ್ ತನ್ನ ಅಜೆಂಡಾ ಸ್ಥಾಪಿಸಲು ತಮ್ಮಲ್ಲಿನ ಮುಗ್ದ ಕಾರ್ಯಕರ್ತರಿಗೆ ಯಾವ ವೇಷವನ್ನು ಬೇಕಿದ್ದರೂ ಹಾಕಿ ಕಳಿಸುತ್ತವೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬೆಂಗಳೂರು: ಕೊಡಗಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ವ್ಯಕ್ತಿಯ ಕಾಂಗ್ರೆಸ್ ಕಾರ್ಯಕರ್ತ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಆ ವ್ಯಕ್ತಿ ಗಣ ವೇಷಧಾರಿಯಾಗಿರುವ ಭಾವಚಿತ್ರವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಆರೋಪಿ ಆರೋಪಿ ಸಂಪತ್, ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದರು. ಇದು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್, ಆರ್ಎಸ್ಎಸ್ ಶಾಖೆಯಲ್ಲಿ ಗಣವೇಷಧಾರಿಯಾಗಿ ಸಂಪತ್ ಇರುವ ಫೋಟೋವನ್ನು ಬಿಡುಗಡೆ ಮಾಡಿ ತಿರುಗೇಟು ನೀಡಿದೆ.
ಬಿಜೆಪಿ ಹಾಗೂ ಆರ್ಎಸ್ಎಸ್ ತಮ್ಮ ಅಜೆಂಡಾ ಸ್ಥಾಪಿಸಲು ತಮ್ಮಲ್ಲಿನ ಮುಗ್ದ ಕಾರ್ಯಕರ್ತರಿಗೆ ಯಾವ ವೇಷವನ್ನು ಬೇಕಿದ್ದರೂ ಹಾಕಿ ಕಳಿಸುತ್ತವೆ. ಯಾವ ಕೃತ್ಯಗಳನ್ನು ಬೇಕಿದ್ದರೂ ಮಾಡಿಸುತ್ತವೆ. ಅವರನ್ನೇ ಕೊಂದು ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತವೆ. ಆರ್ಎಸ್ಎಸ್ ಪ್ಯಾಂಟು ತೊಟ್ಟವನಿಗೆ ಕಾಂಗ್ರೆಸ್ ವೇಷ ತೊಡಿಸಿದ ಮಾತ್ರಕ್ಕೆ ಕಾಗೆ ನವಿಲಾಗುತ್ತದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
- xಬಿಜೆಪಿ & RSS ತನ್ನ ಅಜೆಂಡಾ ಸ್ಥಾಪಿಸಲು ತಮ್ಮಲ್ಲಿನ ಮುಗ್ದ ಕಾರ್ಯಕರ್ತರಿಗೆ ಯಾವ ವೇಷವನ್ನು ಬೇಕಿದ್ದರೂ ಹಾಕಿ ಕಳಿಸುತ್ತವೆ, ಯಾವ ಕೃತ್ಯಗಳನ್ನು ಬೇಕಿದ್ದರೂ ಮಾಡಿಸುತ್ತವೆ, ಅವರನ್ನೇ ಕೊಂದು ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತವೆ.
RSS ‘ಪ್ಯಾಂಟು’ ತೊಟ್ಟವನಿಗೆ ಕಾಂಗ್ರೆಸ್ ವೇಷ ತೋಡಿಸಿದ ಮಾತ್ರಕ್ಕೆ ಕಾಗೆ ನವಿಲಾಗುತ್ತದೆಯೇ?! pic.twitter.com/88tLhMNeGN— Karnataka Congress (@INCKarnataka) August 20, 2022
ಇತ್ತ, ತಮ್ಮ ಮೇಲೆ ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಂಡು ವಿಡಿಯೋ ಬಿಡುಗಡೆ ಮಾಡಿರುವುದನ್ನು ಗಮನಿಸಿದ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿ, ಆರೋಪಿ ಯಾರೇ ಆಗಿದ್ದರೂ ಅಥವಾ ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಕಠಿಣ ಕ್ರಮ ಕೈಗೊಳ್ಳಿ. ರಾಜ್ಯ ಬಿಜೆಪಿ ಶಾಸಕರ ನಂತರ ಇದೀಗ ಬೀದಿಪುಂಡರ ಆಪರೇಷನ್ಗೂ ಮುಂದಾಗಿದೆ ಎಂದು ಲೇವಡಿ ಮಾಡಿದ್ದರು.
ಅಲ್ಲದೇ, ಬಿಜೆಪಿಯ ಇಂತಹ ನಾಟಕಗಳೆಲ್ಲ ಹಳತಾಗಿದೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳಿಸಿ. ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. (etbk)
