

ಸಿದ್ದಾಪುರ: ತಾಲೂಕಾ ಆಡಳಿತ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕಾ ಆಡಳಿತ ಸೌಧದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು.
ಹಿರಿಯ ವಕೀಲ ಎನ್.ಡಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾರಾಯಣಗುರುಗಳ ಅಂದಿನ ಕಾಲದ ಹೋರಾಟ, ಸೇವೆಯನ್ನು ಸ್ಮರಿಸುವ ಜತೆಗೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಭಾರತದ ಇತಿಹಾಸದಲ್ಲಿ ಕ್ರಾಂತಿ ಮಾಡಿದ ರಾಜ್ಯ ಕೇರಳದಲ್ಲಿ ಹುಟ್ಟಿ ತುಳಿತಕ್ಕೊ ಳಗಾದ ಸಮಯದಾಯಗಳನ್ನು ಮೇಲಕ್ಕೆತ್ತಿದ ನಾರಾಯಣಗುರುಗಳ ಕೊಡುಗೆ ಅಪಾರವಾಗಿದೆ. ಅವರ ಹೆಸರು ಶಾಶ್ವತವಾಗಿಡುವ ಕೆಲಸ ನಮ್ಮಿಂದಾಗಬೇಕು ಎಂದರು.
ತಾಲೂಕಾ ನಾಮಧಾರಿ ಸಂಘದ ಅಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ, ಸರ್ಕಾರಿ ಜಯಂತಿಗಳು ಅಧಿಕಾರಿಗಳ ಜಯಂತಿಗಳಾಗದೇ ಜನರ ಪಾಲ್ಗೊಳ್ಳುವಿಕೆ ಇರಬೇಕು. ನಾರಾಯಣಗುರುಗಳು ಹಿಂದುಳಿದ ವರ್ಗ, ದಲಿತರುಗಳಿಗೆ ಅನೇಕ ಸಂದೇಶ ನೀಡಿದ್ದರು. ಅವರು ಹಾಕಿಕೊಟ್ಟ ಮಾನವೀಯತೆಯ ಮೌಲ್ಯಗಳ ಕುರಿತು ಮನೆಮನೆಗೆ ಮಾಹಿತಿ ನೀಡಬೇಕು ಎಂದರು.

ಪತ್ರಕರ್ತ ಕನ್ನೇಶ ಕೋಲಶಿರ್ಸಿ ಉಪನ್ಯಾಸ ನೀಡಿ, ಸಾಮಾಜಿಕ ಸ್ಥಿತಿಗತಿಗನುಗುಣವಾಗಿ ನಾರಾಯಣಗುರುಗಳು ಧಾರ್ಮಿಕ ಆಚರಣೆಯ ತಾರತಮ್ಯದ ವಿರುದ್ಧ ಸಿಡಿದೆದ್ದಿದ್ದರು. ನಾರಾಯಣಗುರು ಚಳವಳಿ ಹಾಗೂ ವೈಚಾರಿಕತೆಯ ಆಧಾರದಲ್ಲಿ ಅಂಬೇಡ್ಕರ್ ಬಂದರು. ಜನಸಾಮಾನ್ಯರ ಪರವಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮಾನತೆ ಕೇಳಿದ್ದರು. ನಮ್ಮ ಸ್ವಾಭಿಮಾನ, ಹಕ್ಕಿನ ಕಾರಣಕ್ಕೆ ನಾರಾಯಣಗುರು ನಮಗೆ ಬೇಕಾಗಿದ್ದಾರೆ ಎಂದರು.
ತಹಶೀಲ್ದಾರ ಸಂತೋಷ ಭಂಡಾರಿ ಪ್ರಾಸ್ತಾವಿಕ ಮಾತನಾಡಿ, ಅರಸೊತ್ತಿಗೆ, ಬಾಲ್ಯವಿವಾಹ, ಕಂದಾಚಾರ, ಮೇಲ್ವರ್ಗದವರ ದಬ್ಬಾಳಿಕೆ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣದ ಮೂಲಕ ಕ್ರಾಂತಿಯನ್ನುಂಟು ಮಾಡಿದ ಮಹಾನ್ ಮಾನವತಾವಾದಿಯಾಗಿದ್ದರು. ಅವರು ಹಾಕಿ ಕೊಟ್ಟ ಆದರ್ಶಗಳನ್ನು ಪಾಲಿಸೋಣ ಎಂದರು.
ಸಿದ್ದಾಪುರ ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ತಾಲೂಕಾ ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಆನಂದ ನಾಯ್ಕ, ಉಪಾಧ್ಯಕ್ಷ ವಿ.ಎನ್.ನಾಯ್ಕ, ಕಾರ್ಯದರ್ಶಿ ಎಸ್.ಎಂ.ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ, ಬಿ.ಎಸ್.ಎನ್.ಡಿ.ಪಿ ಸಂಘಟನೆಯ ಅಧ್ಯಕ್ಷ ವಿನಾಯಕ ನಾಯ್ಕ, ಪ್ರಮುಖರಾದ ವಸಂತ ನಾಯ್ಕ ಮನಮನೆ, ಬಿ.ಆರ್.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಶಿರಸ್ತೆದಾರ ಎನ್.ಐ.ಗೌಡ ಸ್ವಾಗತಿಸಿದರು. ಕಂದಾಯ ಇಲಾಖೆಯ ಗಣೇಶ ನಿರೂಪಿಸಿದರು.
ಸಾಧಕರಿಗೆ ಸನ್ಮಾನ
ಯಕ್ಷಗಾನ ಕಲಾವಿದ ನಂದನ ನಾಯ್ಕ ಹಾರ್ಸಿಕಟ್ಟಾ, ಹಿರಿಯ ವಕೀಲ ಎನ್.ಡಿ.ನಾಯ್ಕ, ಸಾಹಿತಿ ವಿ.ಎಂ.ನಾಯ್ಕ ಅವರಗುಪ್ಪಾ, ಯಕ್ಷಗಾನ ಅಕಾಡೆಮಿಯಿಂದ ಯಕ್ಷಸಿರಿ ಪ್ರಶಸ್ತಿ ಪಡೆದ ಕೃಷ್ಣಾಜಿ ಬೇಡ್ಕಣಿ, ಪುನೀತ ರಾಜಕುಮಾರ ಅನಾಥಾಶ್ರಮದ ಮಮತಾ ನಾಯ್ಕ, ಹಿರಿಯರಾದ ಬಿ.ಆರ್.ನಾಯ್ಕ ಇವರನ್ನು ಇದೇ ವೇಳೆ ಸನ್ಮಾನಿಸಲಾಯಿತು.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
