


ಉತ್ತರ ಕನ್ನಡ ಜಿಲ್ಲೆಯಲ್ಲಿ ಏರುತ್ತಿದೆ ಅಡಕೆ ಕೊಳೆ ರೋಗ : ಮರಿಚೀಕೆಯಾಗಿದೆ ಪರಿಹಾರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಅಡಕೆ ಬೆಳೆಗೆ ಕೊಳೆರೋಗ ಆವರಿಸುವ ಭೀತಿ ಉಂಟಾಗಿದೆ. ಕೊಳೆರೋಗಕ್ಕೆ ತುತ್ತಾಗಿರುವ ಸಾವಿರಾರು ಹೆಕ್ಟೇರ್ ಪ್ರದೇಶದ ಅಡಕೆ ಬೆಳೆಗೆ ಸರ್ಕಾರದ ಪರಿಹಾರ ಮಾತ್ರ ಮರೀಚಿಕೆಯಾಗಿದೆ.
ಶಿರಸಿ (ಉತ್ತರಕನ್ನಡ) : ಅತಿಯಾದ ಮಳೆ, ಆಗಾಗ ಬಂದು ಹೋಗುವ ಬಿಸಿಲು ಮಲೆನಾಡಿನ ಪ್ರಮುಖ ಬೆಳೆ ಅಡಕೆ ಬೆಳೆಗೆ ಕೊಳೆರೋಗ ಆವರಿಸುವ ಭೀತಿ ಉಂಟಾಗಿದೆ. ಅಡಕೆ ಬೆಳೆ ಹಾನಿಗೆ ಅಲ್ಪ ಮೊತ್ತದ ವಿಮೆ ಸೌಲಭ್ಯ ಬಿಟ್ಟರೆ ಹಾನಿಗೀಡಾಗುವ ಬೆಳೆಗೆ ಪರಿಹಾರ ನೀಡಲು ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ಇಲ್ಲ. ಕಾರಣ ಕೊಳೆರೋಗ ಪರಿಹಾರ ಎನ್ನುವುದು ಕೃಷಿಕರಿಗೆ ಮರೀಚಿ ಕೆಯಾಗಿದೆ.
ಪ್ರತಿ ವರ್ಷ ಸಾವಿರಾರು ಹೆಕ್ಟೇರ್ ಅಡಕೆ ಬೆಳೆ ಕೊಳೆ ರೋಗದಿಂದ ನಾಶವಾಗುತ್ತದೆ. ಆದರೆ, ಅದಕ್ಕೆ ಪರಿಹಾರ ನೀಡಲು ಸರ್ಕಾರದ ಕಾನೂನಡಿ ಅವಕಾಶವಿಲ್ಲ. ಈ ಬಗ್ಗೆ ಪ್ರತಿ ವರ್ಷ ತೋಟಗಾರಿಕಾ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದರೂ, ಪರಿಹಾರ ಬರುವ ಭರವಸೆಯೇ ಇಲ್ಲದಂತಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಏರುತ್ತಿದೆ ಅಡಿಕೆ ಕೊಳೆ ರೋಗ : ಮರಿಚೀಕೆಯಾಗಿದೆ ಪರಿಹಾರ
ಉತ್ತರ ಕನ್ನಡ ಜಿಲ್ಲೆಯಲ್ಲಿ 32 ಸಾವಿರ ಹೆಕ್ಟೇರ್ ಅಡಕೆ ಪ್ರದೇಶವಿದೆ. ಅಂದಾಜು 3,900 ಹೆಕ್ಟೇರ್ ಪ್ರದೇಶದಷ್ಟು ಹಾನಿಯಾಗಿದೆ. ಅತಿವೃಷ್ಟಿ ಕಾರಣಕ್ಕೆ ಉಂಟಾದ ಕೊಳೆರೋಗಕ್ಕೆ ಪರಿಹಾರ ನೀಡಲು ಸರ್ಕಾರದ ನಿಯಮದಲ್ಲಿ ಅವಕಾಶ ಇಲ್ಲ.ಇದಕ್ಕಾಗಿಯೇ ಪ್ರತ್ಯೇಕ ಸಹಾಯಧನ ಘೋಷಣೆ ಆಗಬೇಕಿರುವ ಕಾರಣ ಪರಿಹಾರ ಸಿಗುವುದು ಕಷ್ಟವಾಗಿದೆ.
ಇನ್ನು ಈ ಕೊಳೆರೋಗ ಪರಿಹಾರ ಎನ್ನುವುದು ಸಿದ್ಧರಾಮಯ್ಯ ಸರ್ಕಾರದಲ್ಲಿ ಮಾತ್ರ ನೀಡಲಾಗಿತ್ತು.ಈ ಬಾರಿ ಅಡಕೆ ಕೊಳೆರೋಗಕ್ಕೆ ವಿಶೇಷ ಪರಿಹಾರ ನೀಡಲು ಸರ್ಕಾರ ನಿರ್ಣಯಿಸಬೇಕು. ಇದಲ್ಲದೇ ಹಾನಿಗೆ ಒಳಗಾದ ಭತ್ತ, ಜೋಳಕ್ಕೂ ಪರಿಹಾರ ಒದಗಿಸುವ ಕೆಲಸ ಆಗಬೇಕಿದೆ. ನೇರವಾಗಿ ಅತಿವೃಷ್ಟಿ ಹಾನಿ ಅಲ್ಲದೇ ಹೋದರೂ ಅಡಕೆ ಕೊಳೆ ಎಂಬುದು ಅತಿಯಾದ ಮಳೆಯಿಂದಲೇ ಬರುವ ರೋಗವಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ಒಟ್ಟಾರೆಯಾಗಿ ಪ್ರತಿ ವರ್ಷದಂತೆ ಈ ವರ್ಷವೂ ತೋಟಗಾರಿಕಾ ಇಲಾಖೆಯಿಂದ ಕೊಳೆ ರೋಗದ ಮಾಹಿತಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅದು ಸರ್ಕಾರಕ್ಕೆ ತಲುಪುತ್ತದೆ. ಆದರೆ, ಅಡಕೆ ಬೆಳೆಗಾರರೇ ಹೆಚ್ಚಿರುವ ಜಿಲ್ಲೆಗೆ ಮಾತ್ರ ಸರ್ಕಾರದ ಪರಿಹಾರ ಇಲ್ಲವಾಗಿದೆ. (etbk)

