


ರಾಜ್ಯದ ವಿವಿಧೆಡೆ ಇಂದು ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ ನಡೆದಿದೆ. ಶಿರಸಿಯಲ್ಲಿ ಎಸ್ಡಿಪಿಐ ಮುಖಂಡನನ್ನು ಬಂಧಿಸಲಾಗಿದೆ.
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿಪ್ಪು ನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದು, ಎಸ್ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳೀಯ ಪೊಲೀಸರು ಅಧಿಕಾರಿಗಳು, ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಯಿತು.
ಮುಂಜಾನೆ 3.30ರಿಂದಲೇ ಅಬ್ದುಲ್ ಮನೆಯ ಬಳಿ ಪೊಲೀಸರ ದಂಡೇ ನೆರೆದಿತ್ತು. ಸುಮಾರು 6 ಗಂಟೆಯ ವೇಳೆಗೆ ಈತನ ಮನೆಗೆ ಅಧಿಕಾರಿಗಳು ತೆರಳಿದ್ದು ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕಗಳು ಹಾಗೂ ಒಂದು ಸಿಡಿಯನ್ನು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಅಬ್ದುಲ್ ಜೊತೆ ಅಲ್ಲೇ ಸಮೀಪದಲ್ಲಿದ್ದ ಆತನ ತಮ್ಮನ ಮನೆಯ ಮೇಲೂ ಶೋಧ ನಡೆದಿದೆ. ಆದರೆ ಆತ ಮನೆಯಲ್ಲಿ ಇಲ್ಲದ ಕಾರಣ ಅಬ್ದುಲ್ ಬಂಧನ ಮಾತ್ರ ಆಗಿದೆ ಎಂದು ಮೂಲಗಳು ತಿಳಿಸಿವೆ. (kpc)
