ಸಿದ್ದಾಪುರ: ಯಕ್ಷಗಾನದ ಹಿರಿಯ ಕಲಾವಿದ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಇಲ್ಲಿನ ಶ್ರೀ ಅನಂತ ಯಕ್ಷ ಕಲಾ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ಅನಂತ ಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ, ಕಾರ್ಯದರ್ಶಿ ಹಾಗೂ ಹೆಸರಾಂತ ಭಾಗವತ, ಕೇಶವ ಹೆಗಡೆ ಕೊಳಗಿ ಈ ವಿಷಯ ತಿಳಿಸಿದ್ದು, ಯಕ್ಷಗಾನದ ಸವ್ಯಸಾಚಿ ಕಲಾವಿದರಾಗಿದ್ದ ದಿ.ಅನಂತ ಹೆಗಡೆ ಕೊಳಗಿ ಅವರ ನೆನಪಿನಲ್ಲಿ
ಯಕ್ಷಗಾನ ಕ್ಷೇತ್ರದಲ್ಲಿ ಸ್ತ್ರೀ ಪಾತ್ರದ ಮೂಲಕ ನಾಡಿನಾದ್ಯಂತ ಮನೆ ಮಾತಾದ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಈ ಪ್ರಶಸ್ತಿ ಪ್ರಕಟಿಸುತ್ತಿರುವದು ಹರ್ಷ ತಂದಿದೆ ಎಂದಿದ್ದಾರೆ.
ಸಿದ್ದಾಪುರದ ಇಟಗಿ ಕಲಗದ್ದೆ ನಾಟ್ಯ ವಿನಾಯಕ ದೇವಾಲಯದಲ್ಲಿ ಡಿಸೆಂಬರ್ ಕೊನೇ ವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುತ್ತಿದೆ. ನಾಲ್ಕು ದಶಕಗಳಿಗೂ ಅಧಿಕಾಲ ದೇಶ, ಹೊರ ದೇಶಗಳಲ್ಲಿಯೂ ಎಂಟು ಸಾವಿರಕ್ಕೂ ಅಧಿಕ ಕಲಾ ಪ್ರದರ್ಶನ ನೀಡಿದ ಭಾಸ್ಕರ ಜೋಶಿ ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಶಿರಳಗಿ ಅವರು ದಿ. ಅನಂತ ಹೆಗಡೆ ಅವರ ಶಿಷ್ಯರೂ, ಒಡನಾಡಿಗಳೂ ಹೌದು ಎಂದೂ ಪ್ರಕಟಣೆ ಯಲ್ಲಿ ಉಲ್ಲೇಖಿಸಿದ್ದಾರೆ.