

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಅಸ್ತಂಗತ; “ಜಂಗಮರಿಗೆ ಅಳಿವಿಲ್ಲ”- ಸ್ಮಾರಕ ನಿರ್ಮಿಸದಂತೆ ಶ್ರೀಗಳ ಸೂಚನೆ
ಶತಮಾನದ ಸಂತ, ದೇಶ ಕಂಡ ಎರಡನೇ ವಿವೇಕಾನಂದ ಎಂದೇ ಪೂಜಿಸಲ್ಪಡುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.

ವಿಜಯಪುರ: ಶತಮಾನದ ಸಂತ, ದೇಶ ಕಂಡ ಎರಡನೇ ವಿವೇಕಾನಂದ ಎಂದೇ ಪೂಜಿಸಲ್ಪಡುವ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (82) ಇಹಲೋಕ ತ್ಯಜಿಸಿದ್ದಾರೆ.
ಅನಾರೋಗ್ಯಕ್ಕೀಡಾಗಿದ್ದ ಶ್ರೀಗಳು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಸೋಮುವಾರ ಸಂಜೆ ಬಳಿಕ ಶ್ರೀಗಳ ಆರೋಗ್ಯ ಚಿಂತಾಜನಕವಾಗಿತ್ತು. ಶ್ರೀಗಳ ಅಂತಿಮ ದರ್ಶನ ಪಡೆಯುವುದಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದತ್ತ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೈತ ಕುಟುಂಬದಲ್ಲಿ 1941 ರ ಅಕ್ಟೋಬರ್ 24 ರಂದು ಜನಿಸಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ
ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ 4 ನೇ ತರಗತಿವರೆಗೆ ಓದಿದ ನಂತರ ಅವರು ವೇದಾಂತ ಕೇಸರಿ ಎಂದೇ ಪ್ರಖ್ಯಾತರಾಗಿದ್ದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳವರನ್ನು ಆಶ್ರಯಿಸಿದರು. ಬಾಲಕನ ಚುರುಕುತನವನ್ನು ಗುರುತಿಸಿದ ಹಿರಿಯ ಶ್ರೀಗಳು ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ದೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಸಿದ್ದೇಶ್ವರ ಶ್ರೀಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು.
