

ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ರಚಿಸಿದ್ದ ‘ನಿಜ ಕನಸುಗಳು’ ಪುಸ್ತಕ ಬಿಡುಗಡೆಯನ್ನು ನಿಲ್ಲಿಸಿದ ಕಾಂಗ್ರೆಸ್, ಇದೀಗ ಸಾಕಷ್ಟು ಎಚ್ಚರಿಕೆಯ ನಡೆಗಳನ್ನು ಇಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುವ ಮೂಲಕ ಶಾಸಕಾಂಗ ಪಕ್ಷದ ನಾಯಕನ ಮೇಲೆ ಯಾವುದೇ ರೀತಿಯ ಹಲ್ಲೆ ನಡೆಯದಂತೆ ರಕ್ಷಿಸುವ ಪ್ರಯತ್ನಗಳನ್ನು ಮಾಡುತ್ತಿದೆ.

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ರಚಿಸಿದ್ದ ‘ನಿಜ ಕನಸುಗಳು’ ಪುಸ್ತಕ ಬಿಡುಗಡೆಯನ್ನು ನಿಲ್ಲಿಸಿದ ಕಾಂಗ್ರೆಸ್, ಇದೀಗ ಸಾಕಷ್ಟು ಎಚ್ಚರಿಕೆಯ ನಡೆಗಳನ್ನು ಇಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುವ ಮೂಲಕ ಶಾಸಕಾಂಗ ಪಕ್ಷದ ನಾಯಕನ ಮೇಲೆ ಯಾವುದೇ ರೀತಿಯ ಹಲ್ಲೆ ನಡೆಯದಂತೆ ರಕ್ಷಿಸುವ ಪ್ರಯತ್ನಗಳನ್ನು ಮಾಡುತ್ತಿದೆ.
ಈ ನಡುವೆ ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರೂ ಅಲ್ಲದ ಸಿದ್ದರಾಮಯ್ಯನವರೇ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿರುವುದು ಏಕೆ ಎಂಬ ಪ್ರಶ್ನೆ ಸಿದ್ದರಾಮಯ್ಯ ಅವರ ಬೆಂಬಲಿಗರಲ್ಲಿ ಮೂಡತೊಡಗಿದೆ.
ಆಡಳಿತ ಪಕ್ಷವು ಸಿದ್ದರಾಮಯ್ಯ ಅವರನ್ನೇಕೆ ಗುರಿ ಮಾಡುತ್ತಿದೆ? ಅವರನ್ನೇಕೆ ಮುಸ್ಲಿಂ ದೊರೆ ಟಿಪ್ಪು ಸುಲ್ತಾನ್‌ಗೆ ಸಮೀಕರಿಸುತ್ತಿದೆ, ಬಿಜೆಪಿ ಮತ್ತು ಬಲಪಂಥೀಯರು ಅವರ ವಿರುದ್ಧವೇಕೆ ತೀವ್ರ ಪ್ರಚಾರ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಹಸಿವು ಮುಕ್ತ ರಾಜ್ಯ ಮತ್ತು ಸರಿಯಾದ ವಸತಿ, ಪೌಷ್ಟಿಕ ಆಹಾರ, ಸಾಮಾಜಿಕ ನ್ಯಾಯ ಮತ್ತು ಎಲ್ಲರಿಗೂ ಮೂಲಭೂತ ಸೌಕರ್ಯಗಳ ಒದಗಿಸುವುದು ಸಿದ್ದರಾಮಯ್ಯನವರ ನಿಜ ಕನಸುಗಳು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಆಡಳಿತದಲ್ಲಿ ಸಿದ್ದರಾಮಯ್ಯನವರ ಈ ಕನಸುಗಳನ್ನು ನನಸಾಗಿಸಲು ಸಾಕಷ್ಟು ಕೆಲಸಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಸಿದ್ದರಾಮಯ್ಯ ಮಾಸ್ ಲೀಡರ್ ಎಂಬುದು ನಮಗೆ ತಿಳಿದಿದೆ. ದಮನಿತ ವರ್ಗಗಳು ಅವರ ಮೇಲೆ ವಿಶ್ವಾಸ ಹೊಂದಿದ್ದಾರೆ. ಕೆಲವರು ಹೆದರಿಕೆಯಿಂದ ಅವರ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಹೆಣೆಯಲು ಪ್ರಯತ್ನಿಸುತ್ತಿದ್ದಾರೆಂದು ಹೇಳಿದ್ದಾರೆ.
ಮಾಜಿ ಸಚಿವ ಮತ್ತು ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ‘ಡಬಲ್ ಇಂಜಿನ್ ಸರ್ಕಾರದ ಸಾಧನೆ ತೋರಿಸಲು ಏನೂ ಇಲ್ಲ. ಅದಕ್ಕಾಗಿಯೇ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆಡಳಿತ ಪಕ್ಷವೊಂದು ತನ್ನ ಕೆಲಸದ ಬಗ್ಗೆ ಏನೂ ಹೇಳದಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ.
ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಮಾತನಾಡಿ, ”ಕಳೆದ ಹಲವು ತಿಂಗಳುಗಳಿಂದ ಬೊಮ್ಮಾಯಿ ಸರಕಾರ ಮತ್ತು ಅದರ ಐಟಿ ಸೆಲ್ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಅವರು ಅವರನ್ನು ಸಿದ್ದರಾಮುಲ್ಲಾ ಖಾನ್ ಎಂದು ಕರೆಯಲು ಪ್ರಾರಂಭಿಸಿದರು. ಈಗ, ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುರಕ್ಷಿತ ಕ್ಷೇತ್ರವನ್ನು ಹುಡುಕಲು ಹೆಣಗಾಡುತ್ತಿದ್ದಾರೆ ಎಂಬ ನಿರೂಪಣೆಯನ್ನು ನಿರ್ಮಿಸಲು ಅವರು ಅವರ ಬಗ್ಗೆ ಪುಸ್ತಕವನ್ನು ಹೊರತಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಅತಿದೊಡ್ಡ ಮುಖವಾಗಿರುವುದರಿಂದ ಅವರನ್ನು ಗುರಿಯಾಗಿಸಬೇಕಾಗಿದೆ ಎಂದು ಬಿಜೆಪಿ ಹೈಕಮಾಂಡ್ ನಂಬಿದೆ. ರಾಜ್ಯದಲ್ಲಿ ಈಗ ವಿಶ್ವಾಸಾರ್ಹ ಹಿಂದುಳಿದ ಜಾತಿಯ ಮುಖವಿಲ್ಲ ಎಂಬುದನ್ನು ಆಡಳಿತ ಪಕ್ಷ ಮರೆತಿದೆ. ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದ್ದು, ಮೈಸೂರಿನಿಂದ ಎ.ಎಚ್.ವಿಶ್ವನಾಥ್ ಹೊರನಡೆದಿದ್ದಾರೆ. ಒಟ್ಟಾರೆಯಾಗಿ, ಇದು ಬಿಜೆಪಿ ಹೈಕಮಾಂಡ್‌ನ ದುರುದ್ದೇಶಪೂರಿತ ನಡೆಯಂತೆ ತೋರುತ್ತಿದೆ ಎಂದು ಹೇಳಿದ್ದಾರೆ. (ಕಪ್ರಡಾ)
