

(ಸಿದ್ಧಾಪುರ) ನಗರದ ಅಜಂತಾ ವೃತ್ತದ ಪ.ಪಂ. ವಾಣಿಜ್ಯ ಸಂಕೀರ್ಣಕ್ಕೆ ಮಾಜಿ ಮುಖ್ಯಮಂತ್ರಿ ದಿ.ಎಸ್ ಬಂಗಾರಪ್ಪ ಹೆಸರಿಡಲು ಸ್ಥಳೀಯ ಪಟ್ಟಣ ಪಂಚಾಯತ್ ನಿರ್ಧರಿಸಿದೆ. ಇಂದು ಇಲ್ಲಿನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಮಾಡಿದ ಪ.ಪಂ. ಈ ಬಗ್ಗೆ ಸರ್ವಾನುಮತದ ಠರಾವು ಮಾಡಿದೆ.
ಸಭೆಗೆ ಈ ವಿಷಯ ತಿಳಿಸಿದ ಹಿರಿಯ ಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್ ರ ಪ್ರಸ್ಥಾಪಕ್ಕೆ ಪ್ರತಿಕ್ರೀಯಿಸಿದ ಸದಸ್ಯ ಗುರುರಾಜ್ ಶಾನಭಾಗ ವಾಣಿಜ್ಯ ಸಂಕೀರ್ಣಕ್ಕೆ ಬಂಗಾರಪ್ಪ ಹೆಸರಿಡುವ ಬದಲು ನಗರದ ಒಂದು ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡುವ ಬಗ್ಗೆ ಗಮನಸೆಳೆಯುವ ಸೂಚನೆ ನೀಡಿದರು.

ಅದಕ್ಕೆ ವಿವರಣೆ ನೀಡಿದ ಕೆ.ಜಿ.ನಾಯ್ಕ ತಾಂತ್ರಿಕ ಕಾರಣ, ತೊಂದರೆಗಳ ಹಿನ್ನೆಲೆಯಲ್ಲಿ ವೃತ್ತಕ್ಕೆ ಹೆಸರಿಡುವುದಕ್ಕಿಂತ ವಾಣಿಜ್ಯ ಸಂಕೀರ್ಣಕ್ಕೆ ಬಂಗಾರಪ್ಪ ಹೆಸರಿಡುವುದು ಸೂಕ್ತ ಎಂದು ಸಮರ್ಥಿಸಿದರು.
ಆರು ಕೋಟಿ ಬಜೆಟ್- ಸಿದ್ಧಾಪುರ ಪ.ಪಂ.ನ ೨೦೨೩-೨೪ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಇಂದು ಮಂಡಿಸಲಾಯಿತು.ಆರು ಕೋಟಿ ೮೨ ಲಕ್ಷ೬೨ ಸಾವಿರ ೧೩೩ ರೂಪಾಯಿಗಳ ಆದಾಯದ ವಾರ್ಷಿಕ ಬಜೆಟ್ ನಲ್ಲಿ೬ ಕೋಟಿ೭೯ ಲಕ್ಷ೨೦ ಸಾವಿರದ ವ್ಯಯ ಕಳೆದು ಮೂರು ಲಕ್ಷ ೪೧ ಸಾವಿರ ನಿಕ್ಕಿ ಉಳಿತಾಯಕ್ಕೆ ಯೋಜಿಸಲಾಗಿದೆ.
ಚಪ್ಪಲಿ ದುರಸ್ತಿ ಮಾಡುವವರಿಗೆ ಶಾಶ್ವತ ಜಾಗ ನೀಡುವ ವಿಚಾರದಲ್ಲಿ ಕೆ.ಜಿ.ನಾಯ್ಕ ಮತ್ತು ನಂದನ್ ಬೋರ್ಕರ್ ನಡುವೆ ಚರ್ಚೆ ನಡೆದು ನಗರದ ಸೌಂದರ್ಯ, ಇತರ ಅನಾನುಕೂಲಗಳಿಗೆ ಎಡೆಯಾಗದಂತೆ ಶಾಶ್ವತ ಜಾಗ ನಿರ್ಮಿಸುವಯೋಜನೆ ಸಿದ್ಧಪಡಿಸಲು ತೀರ್ಮಾನಿಸಲಾಯಿತು.
