

ಬಿಜೆಪಿಗೆ ಗುಡ್ ಬೈ ಹೇಳಿದ ಮೋಹನ್ ಲಿಂಬಿಕಾಯಿ : ಇಂದೇ ಕಾಂಗ್ರೆಸ್ ಸೇರುತ್ತಿರುವ ಬಿಎಸ್ ವೈ ಆಪ್ತ!
ರಾಜ್ಯ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಆಪ್ತ ಮೋಹನ್ ಲಿಂಬಿಕಾಯಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಬೆಂಗಳೂರು: ರಾಜ್ಯ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಆಪ್ತ ಮೋಹನ್ ಲಿಂಬಿಕಾಯಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಇಂದು ಸಂಜೆಯೇ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಮೋಹನ್ ಲಿಂಬಿಕಾಯಿ ಇಂದು ಬೆಳಗ್ಗೆ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಹಾಯಕರ ಮೂಲಕ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ರಾಜೀನಾಮೆ ಪತ್ರ ತಲುಪಿಸಿದ ಲಿಂಬಿಕಾಯಿ, ಇಂದು ಸಂಜೆ 4.30ಕ್ಕೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಬಿಜೆಪಿ ತ್ಯಜಿಸಿ ಕೆಜೆಪಿ ಕಟ್ಟಿದಾಗ ಮೊದಲನೆಯದಾಗಿ ರಾಜೀನಾಮೆ ಸಲ್ಲಿಸಿದ್ದು ಮೋಹನ್ ಲಿಂಬಿಕಾಯಿ ಅವರಾಗಿದ್ದರು. ಅಂದು ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಎಸ್ವೈ ಹಿಂದೆ ಸಾಗಿದ್ದರು. ಹುಬ್ಬಳ್ಳಿ – ಧಾರವಾಡ ಪಶ್ಚಿಮ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು.
ನಂತರ ಯಡಿಯೂರಪ್ಪ ಪಕ್ಷಕ್ಕೆ ಮರಳಿದ ನಂತರ ಅವರ ಹಿಂದೆಯೇ ಲಿಂಬಿಕಾಯಿ ಕೂಡ ಬಿಜೆಪಿಗೆ ವಾಪಸ್ ಆಗಿದ್ದರು. ಅಲ್ಲದೇ, ಮೈತ್ರಿ ಸರ್ಕಾರ ಪತನಗೊಂಡ 2019ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದರು. (ಕಪ್ರಡಾ)
