

ಬೆಳಗಾವಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಡಿ.ಬಿ.ಇನಾಂದಾರ್ ನಿಧನ
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಬಿ ಇನಾಂದಾರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಡರಾತ್ರಿ ವಿಧಿವಶರಾಗಿದ್ದಾರೆ.

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಬಿ ಇನಾಂದಾರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಡರಾತ್ರಿ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇನಾಂದಾರ್, ಚಿಕಿತ್ಸೆ ಫಲಿಸದೇ ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
74 ವರ್ಷದ ಇನಾಂದಾರ್ ಅವರು, ಲಂಗ್ಸ್ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಸಿರಸಂಗಿ ದೇಸಾಯಿ ಫೌಂಡೇಷನ್ ಟ್ರಸ್ಟ್ನ ಖಾಯಂ ಸದಸ್ಯರಾಗಿದ್ದರು.
ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಈ ಬಾರಿಯೂ ಚುನಾವಣೆಯಲ್ಲೂ ಇನಾಂದಾರ್ ಕಿತ್ತೂರು ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಅನಾರೋಗ್ಯದ ಕಾರಣ ಇನಾಂದಾರ್ಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿತ್ತು. ಇನಾಂದಾರ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇನಾಮ್ದಾರ್ 1983ರಲ್ಲಿ ಜನತಾ ಪಕ್ಷದಿಂದ ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ಗೆಲುವು ಸಾಧಿಸಿದ್ದರು. 1994 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈವರೆಗೆ 9 ಚುನಾವಣೆ ಎದುರಿಸಿದ್ದ ಇನಾಂದಾರ್ 1983, 1985 ರಲ್ಲಿ ಜನತಾ ಪಕ್ಷದಿಂದ, 1994, 1999, 2013ರ ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿದ್ದರು. 1989, 2004, 2008 ಹಾಗೂ 2018 ರಲ್ಲಿ ಸೋಲು ಕಂಡಿದ್ದರು. ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು, ಎಸ್.ಎಂ ಕೃಷ್ಣ, ಎಸ್. ಬಂಗಾರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದರು.
