

ಹಳಿಯಾಳ ತಾಲೂಕನ್ನು ಕೇಂದ್ರವಾಗಿಸಿಕೊಂಡು ಈಗಿನ ಮೂರು ತಾಲೂಕುಗಳಿಗೆ ಹಂಚಿಕೆಯಾಗಿರುವ ಹಳಿಯಾಳ ವಿಧಾನಸಭಾ ಕ್ಷೇತ್ರ ಅಲ್ಪಸಂಖ್ಯಾತರ ಪ್ರಾಬಲ್ಯದ ಕ್ಷೇತ್ರ. ಧಾರ‍್ಮಿಕ ಅಲ್ಪಸಂಖ್ಯಾತರ ಮತ ಬಾಹುಳ್ಯದ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಗೌಡ ಸಾರಸ್ವತ ಬ್ರಾಹ್ಮಣರು ತಮ್ಮ ರಾಜಕೀಯನಾಯಕತ್ವವನ್ನು ಮುಂದುವರಿಸಿದ್ದಾರೆ.
ನಿರಂತರ ಎನ್ನುವಂತೆ ೭ ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಈ ಕ್ಷೇತ್ರದ ರಾಜಕೀಯ ಬ್ರಹ್ಮ. ಇವರ ಶಿಷ್ಯಂದಿರಾದ ಎಸ್.ಎಲ್. ಘೊಟ್ನೇಕರ್, ಸುನಿಲ್ ಹೆಗಡೆ ಈ ಬಾರಿ ದೇಶಪಾಂಡೆಯವರಿಗೆ ಎದುರಾಳಿಗಳಾಗಿರುವುದು ವಿಶೇಶ. ಮತಬಾಹುಳ್ಯದಲ್ಲಿ ಈ ಕ್ಷೇತ್ರದ ನಂ೧ ಸಮೂದಾಯವಾದ ಮರಾಠರು ಇಲ್ಲಿ ಶಾಸಕರಾಗಿರುವುದು ಅಪರೂಪ. ಮರಾಠರು,ಕೊಂಕಣ ಮರಾಠರು ಸೇರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ದೊಡ್ಡ ಮತದಾರರಾಗಿರುವ ಈ ಬಹುಸಂಖ್ಯಾತರಿಗೆ ಶಾಸಕತ್ವ,ಸಂಸದ ಸ್ಥಾನ ಒಲಿಯದಿರುವುದಕ್ಕೆ ಮುಖ್ಯ ಕಾರಣ ದೇಶಪಾಂಡೆ ರಾಜಕಾರಣ!.
ಯಾವುದೇ ಪಕ್ಷದಲ್ಲಿದ್ದರೂ ಅಲ್ಲಿಯ ಪ್ರಮುಖರೊಂದಿಗೆ ಉತ್ತಮ ಸಂಪರ‍್ಕ, ಸಂಬಂಧ ಕಾಯ್ದುಕೊಳ್ಳುವ ದೇಶಪಾಂಡೆ ತನ್ನ ರಾಜಕೀಯ ರಸ್ತೆಯನ್ನು ಸುಗಮ ಮಾಡಿಕೊಳ್ಳುತ್ತ ಎದುರಾಳಿಗಳನ್ನು ಹಣಿಯುವುದರಲ್ಲಿ ಸಮರ‍್ಥ ಎನ್ನುವ ಹೆಸರು ಸಂಪಾದಿಸಿರುವ ದೇಶಪಾಂಡೆ ಈ ಬಾರಿ ಹೆಚ್ಚು ವಿಶ್ವಾದಲ್ಲಿದ್ದಾರೆ ಎಂದರೆ ಅವರ ರಾಜಕೀಯ ಪಟ್ಟುಗಳ ಮೇಲೆ ಅವರಿಗೆ ಹೆಚ್ಚು ನಂಬಿಕೆ ಎಂದರ‍್ಥ.
ಕಾಂಗ್ರೆಸ್ ಅಭ್ಯರ್ಥಿ ಯಾಗಿರುವ ದೇಶಪಾಂಡೆ ಎದುರಾಳಿಗಳನ್ನು ಹಿಮ್ಮೆಟ್ಟಿಸುವ ಜೊತೆಗೆ ತನಗೆ ಸ್ಫರ್ಧೆ ನೀಡಬಲ್ಲ ಯಾರನ್ನೂ ಆರಂಭಿಕ ಹಂತದಲ್ಲೇ ಹಿಮ್ಮೆಟ್ಟಿಸುವುದರಲ್ಲಿ ನಿಷ್ಣಾತ. ಶಿರಸಿಯ ಭೀಮಣ್ಣ ನಾಯ್ಕ ಇರಲಿ, ಕಾರವಾರದ ಸತೀಶ್, ಭಟ್ಕಳದ ಮಂಕಾಳು, ಜೆ.ಡಿ.ನಾಯ್ಕ, ಕುಮಟಾದ ನಿವೇದಿತ್,ಯಲ್ಲಾಪುರದ ಪಾಟೀಲ್ ಯಾರೇ ಆದರೂ ದೇಶಪಾಂಡೆಯವರಿಗೆ ಪೂರಕವಾಗಿದ್ದರೆ ಬಚಾವ್ ಇಲ್ಲದಿದ್ದರೆ ಸ್ವಪಕ್ಷೀಯರನ್ನೇ ಗುರಿಮಾಡಿ ಹಿಮ್ಮೆಟ್ಟಿಸುವ ದೇಶಪಾಂಡೆ ಈ ಬಾರಿ ಕಾಂಗ್ರೆಸ್ ನಿಂದ ಆಯ್ಕೆಯಾಗಿ ಮತ್ತೆ ಸಚಿವರಾಗುವ ನಿರೀಕ್ಷೆಯಲ್ಲಿದ್ದಾರೆ.
ತನ್ನ ನೇತೃತ್ವ, ಯಜಮಾನಿಕೆಗೆ ಅಡ್ಡಯಾಗಬಹುದಾದ ನಿವೇದಿತ್ ಇರಲಿ, ಭೀಮಣ್ಣ ಇರಲಿ ಪ್ರಾರಂಭದಲ್ಲೇ ಅವರನ್ನು ಕಾಲೆಳೆದು ತನಗೆ ಪ್ರತಿಸ್ಫರ್ಧಿಗಳೇ ಇಲ್ಲ ಎನ್ನುವ ದೇಶಪಾಂಡೆ ಈ ಬಾರಿ ಪಾಟೀಲ್ ಒಬ್ಬರನ್ನು ಬಿಟ್ಟು ಬೇರೆ ಯಾರೂ ಆಯ್ಕೆಯಾಗದಂತೆ ವ್ಯೂಹ ರಚಿಸಿದ್ದಾರೆ. ಮೊದಲ ಹಂತದಲ್ಲಿ ಟಿಕೇಟ್ ಕೊಡಿಸುವ ವಿಚಾರದಲ್ಲಿ ವಿಫಲರಾಗಿರುವ ದೇಶಪಾಂಡೆ ಎರಡನೇ ಹಂತದಲ್ಲಿ ಜಿಲ್ಲೆಯ ಕೋಟಾದಲ್ಲಿ ಮಂತ್ರಿಯಾಗುವ ವಿಚಾರದಲ್ಲಿ ಪ್ರತಿಸ್ಫರ್ಧಿಗಳಾಗಲಿರುವ ನಿವೇದಿತ್ ಮತ್ತು ಭೀಮಣ್ಣ ರಿಗೆ ದುಸ್ವಪ್ನವಾಗಿದ್ದಾರೆ ಎನ್ನಲಾಗುತ್ತಿದೆ!
ಜಿಲ್ಲೆಯಲ್ಲಿ ಇನ್ನೊಬ್ಬ ನಾಯಕ ಬೆಳೆಯದಂತೆ ಯಜಮಾನಿಕೆ ಮುಂದುವರಿಸಿರುವ ದೇಶಪಾಂಡೆ ಸ್ವಂತ ಕ್ಷೇತ್ರದಲ್ಲಿ ಕೂಡಾ ತನ್ನನ್ನು ಬಿಟ್ಟರೆ ಇನ್ನೊಬ್ಬನಿಲ್ಲ ಎನ್ನುವ ಸ್ಥಿತಿಗಾಗಿ ಹಂಬಲಿಸುವ ಅಧಿಕಾರದಾಹಿ.
ಮರಾಠರ ಇತ್ತೀಚಿನ ಪ್ರಶ್ನಾತೀತ ನಾಯಕರಾಗಿರುವ ಎಸ್.ಎಲ್. ಘೊಟ್ನೇಕರ್ ರನ್ನು ಅವರ ನಾಯಕನಾಗದಂತೆ ತಡೆದ ದೇಶಪಾಂಡೆ ತನ್ನ ಹಣಬಲದಿಂದ ಈ ಬಾರಿಯೂ ಸೈನ್ಯವಿಲ್ಲದ ನಾಯಕನನ್ನಾಗಿಸುವಲ್ಲಿ ದೇಶಪಾಂಡೆ ಯಶಸ್ವಿಯಾಗಿದ್ದಾರೆ ಎನ್ನುವ ಮಾಹಿತಿಗಳ ಹಿನ್ನೆಲೆಯಲ್ಲಿ ಈ ಬಾರಿ ಕೂಡಾ ತನ್ನ ಇನ್ನೊಬ್ಬ ಶಿಷ್ಯ ಸುನಿಲ್ ಹೆಗಡೆಗೆ ನೇರಸ್ಫರ್ಧಿ ಯನ್ನಾಗಿಸುವಲ್ಲಿ ಶ್ರಮಿಸಿದ ಖುದ್ದು ದೇಶಪಾಂಡೆ ಈ ಕ್ಷೇತ್ರದಲ್ಲಿ ಬಿ.ಜೆ.ಪಿ.ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಗೇ ಪ್ರಯತ್ನಿಸಿದ್ದಾರೆ.
ಕಾಂಗ್ರೆಸ್, ಜನತಾದಳಗಳಲ್ಲಿ ಏಗಲಾಗದೆ ಬಿ.ಜೆ.ಪಿ. ಸೇರಿ ಅಭ್ಯ ರ‍್ಥಿಯಾಗಿರುವ ಸುನಿಲ್ ಹೆಗಡೆ ಪಕ್ಷ ಮತ್ತು ರಾಷ್ಟ್ರೀ ಯ ನಾಯಕರನ್ನು ನೆಚ್ಚಿಕೊಂಡಿದ್ದಾರೆ. ಬಿ.ಜೆ.ಪಿ. ಕೇಂದ್ರ ನಾಯಕತ್ವ ಕೂಡಾ ಶಿರಸಿ-ಭಟ್ಕಳಗಳಲ್ಲಿ ಬಿ.ಜೆ.ಪಿ. ಸೋತರೂ ತೊಂದರೆ ಇಲ್ಲ ಆದರೆ ಹಳಿಯಾಳದಲ್ಲಿ ಸೋಲಬಾರದು ಎಂದು ನಿರ‍್ಧರಿಸಿದೆಯಂತೆ!
ಬೆಳಗಾವಿಕಡೆಯಿಂದ ಹಿಂದುತ್ವದ ಅಲೆ ಎಬ್ಬಿಸಿ ಮಗ್ಧ ಮರಾಠರನ್ನು ಹುಚ್ಚೆಬ್ಬಿಸಲು ಯೋಜನೆ ಸಿದ್ಧಪಡಿಸಿರುವ ಬಿ.ಜೆ.ಪಿ. ದೇಶಪಾಂಡೆಯಂಥ ಹಿರಿಯರನ್ನು ಸೋಲಿಸುವ ಮೂಲಕ ಸ್ಥಳೀಯ ಬಹುಸಂಖ್ಯಾತರಿಗೆ ಅವಕಾಶ ನೀಡದೆ ಅಲ್ಪಸಂಖ್ಯಾತ ಸುನಿಲ್ ಹೆಗಡೆ ಬೆಳೆಸಿದರೆ ಪಕ್ಷಕ್ಕೆ ಪೂರಕ ಎಂದುಕೊಂಡಿರುವ ಬಿ.ಜೆ.ಪಿ. ಕೇಂದ್ರ ನಾಯಕರು ಹಳಿಯಾಳವನ್ನು ಗೆಲ್ಲಲೇಬೇಕಾದ ಕ್ಷೇತ್ರ ಎಂದು ನಿರ‍್ಧರಿಸಿದ್ದಾರಂತೆ!
ಈ ಹಿನ್ನೆಲೆ ಅರಿತಿರುವ ದೇಶಪಾಂಡೆ ಸ್ಥಳಿಯ ಬಹುಸಂಖ್ಯಾತ ಮರಾಠರು ಮತ್ತು ಅಲ್ಪಸಂಖ್ಯಾತ ಮುಸ್ಲಿಂರನ್ನು ಗುರಿಯಾಗಿಸಿ ಗೆಲ್ಲುವ ಸೂತ್ರ ಹೆಣೆದಿದ್ದಾರಂತೆ! ಆದರೆ ಪಕ್ಷದಿಂದ ಪಕ್ಷಕ್ಕೆ ಗೆಲುವಿನ ಅಂತರ ಕಡಿತಮಾಡಿಕೊಳ್ಳುತ್ತಿರುವ ದೇಶಪಾಂಡೆಗೆ ಜಾ ದಳದ ಘೊಟ್ನೇಕರ್ ತಮ್ಮ ವಿರೋಧಿ ಮತಗಳನ್ನು ಪಡೆದು ಸುನಿಲ್ ಹೆಗಡೆಯವರನ್ನು ತಡೆಯುತ್ತಾರೆ ಅದರಿಂದಾಗುವ ಲಾಭ ಪಡೆದು ತನ್ನ ಗೆಲುವು ಖಾತ್ರಿಮಾಡಿಕೊಳ್ಳಬೇಕೆಂದಿದ್ದಾರೆ.
ದೇಶಪಾಂಡೆಯವರಿಗೆ ಅವರ ಶಿಷ್ಯರ ಗುಣ-ದೋಷಗಳೆಲ್ಲಾ ಗೊತ್ತು. ಇದು ತನ್ನ ಕೊನೆಯ ಚುನಾವಣೆ ಎನ್ನುವ ರೀತಿ ಅಂತಿಮ ಹೋರಾಟಕ್ಕಿಳಿದಿರುವ ಹಳೆ ಹುಲಿ ದೇಶಪಾಂಡೆ ಈ ಬಾರಿಯೂ ಗೆದ್ದರೆ ಅವರ ದಂಡಯಾತ್ರೆ ಮುಂದುವರಿಯುತ್ತದೆ. ಇಲ್ಲದಿದ್ದರೆ ಶಿಷ್ಯಂದಿರಿಬ್ಬರೂ ಪರಸ್ಪರ ಎದುರಾಳಿಗಳಾಗಿ ಮುಂದುವರಿಯುತ್ತಾರೆ ಎನ್ನುವ ಸ್ಫಷ್ಟತೆ ಕೂಡಾ ಇದೆ.
ಈ ಎಲ್ಲಾ ಕಾರಣಗಳಿಂದ ಸ್ಥಳಿಯ ಬಹುಸಂಖ್ಯಾತರ ನಾಯಕ ಘೊಟ್ನೇಕರ್ ವಿರುದ್ಧ ಬಿ.ಜೆ.ಪಿ. ಕಾಂಗ್ರೆಸ್ ಗಳು ಮುಗಿಬಿದ್ದಿವೆ. ಎಲ್ಲೆಡೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿ.ಜೆ.ಪಿ.ಗೆ ಇಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ ಬದಲಾಗಿ ಕಾಂಗ್ರೆಸ್ ಗೆ ಇಲ್ಲಿ ಆಡಳಿತ ವಿರೋಧಿ ಅಲೆ ಇದೆ. ಈ ರಾಷ್ಟ್ರೀಯ ಪಕ್ಷಗಳ ಅಲ್ಪಸಂಖ್ಯಾತರ ಎದುರು ಬಹುಸಂಖ್ಯಾತ ಘೊಟ್ನೇಕರ್ ಜನತಾದಳದ ತೆನೆ ಹೊತ್ತ ಮಹಿಳೆಯನ್ನು ವಿಧಾನಸೌಧಕ್ಕೆ ಕರೆದೊಯ್ಯಲು ಸಾತ್-ವಿಕ ಹೋರಾಟವೇ ಅಡ್ಡಿಯಾಗುವ ಸಾಧ್ಯತೆ ಹೆಚ್ಚು ಎನ್ನುವ ವಿಶ್ಲೇಷಣೆಗಳಿವೆ. ರಾಜಕೀಯ ಹೋರಾಟದ ಅಂತಿಮ ದಿನಗಳಲ್ಲಿರುವ ಘೊಟ್ನೇಕರ್ ಮತ್ತು ದೇಶಪಾಂಡೆ ಎದುರು ಸುನಿಲ್ ಹೆಗಡೆ ಸೋತರೆ ಅವರಿಗೆ ಅವಕಾಶವಾದರೂ ಜೀವಂತ, ಆದರೆ ಎದುರಾಳಿಗಳಾದ ಇಬ್ಬರು ಹಿರಿಯರ ಸೋಲು ಅವರ ರಾಜಕೀಯ ಜೀವನದ ಅಂತ್ಯಕ್ಕೆ ಕಾರಣವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
