ವಿಶ್ವಪ್ರಸಿದ್ಧ ಜೋಗದ ಜಲಪಾತ ನೋಡದವರುಂಟೆ? ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಎಂದು ಡಾ. ರಾಜ್ ಕುಮಾರ್ ಹಾಡಿ ಕುಣಿದಾದ ಮೇಲೆ ಮುಂಗಾರು ಮಳೆ ಚಿತ್ರದ ನಂತರ ಜೋಗದ ಗುಂಡಿ ಈಗಿನ ಭಾಷೆಯಲ್ಲಿ ವೈರಲ್, ಸೆನ್ಸೆಷನ್ ಆಗಿತ್ತು.
ಇದೇ ವೈಭವದ ಮಾತನ್ನು ಹಲವು ದಶಕಗಳಿಂದ ಕೇಳುತ್ತಾ ಬಂದ ಸಾರ್ವಜನಿಕರಿಗೆ ಈಗೊಂದು ಕೆಟ್ಟ ಸುದ್ದಿ ಇದೆ. ಜೋಗದ ಕಲ್ಪನೆ, ಯೋಚನೆ ಎಂದರೆ ರಮ್ಯ,ಗಮ್ಯ ಎಂದುಕೊಂಡವರು ಈಗ ಜೋಗದ ಜಲಪಾತವನ್ನು ನೋಡಲೇ ಬಾರದು. ಪ್ರತಿವರ್ಷ ಮಳೆಗಾಲದಲ್ಲಿ ಅದರಲ್ಲೂ ಜೂನ್ ನಿಂದ ಅಕ್ಟೋಬರ್, ನವೆಂಬರ್ ವರೆಗೆ ಜೋಗ ಜಲಪಾತ ನೋಡಲು ಹೇಳಿ ಮಾಡಿಸಿದ ಸಮಯ! ಎನ್ನುವ ರೂಢಿಯೊಂದಿತ್ತು. ಆದರೆ ಈಗ ಜೋಗದ ಸ್ಥಿತಿ -ಗತಿ ಹಿಂದಿನಂತಿಲ್ಲ.
ಮಲೆನಾಡಿನಲ್ಲಿ ಕೈಕೊಟ್ಟ ಮಳೆರಾಯ ದಿನಕ್ಕೆ ಆಗೊಮ್ಮೆ ಈಗೊಮ್ಮೆಯೂ ಹನಿಗಳನ್ನು ಚೆಲ್ಲಲು ತಯಾರಿಲ್ಲ. ಮಳೆ ಇಲ್ಲ,ನೀರಿಲ್ಲ ಎಂದರೆ ಜೋಗದ ಜಲಪಾತ ಎಷ್ಟು ನೀರಸವಿರಬೇಡ. ಹೌದು ಈಗ ಜೋಗ ಹಿಂದಿನಂತಿಲ್ಲ ಜೋಗದ ರಾಜ, ರಾಣಿ ರೋರರ್, ರಾಕೆಟ್ ಜಲಧಾರೆಗಳೆಲ್ಲಾ ಸೊರಗಿವೆ. ಜೋವೆಂದರೆ ಅಬ್ಬರ, ರೋಮಾಂಚನ, ಮಂಜು, ಮನೋಲ್ಲಾಸ ಎನ್ನುವ ಶಬ್ಧಗಳ ಭೌತಿಕ ರೂಪ ಈಗ ಕಾಣಿಯಾಗಿದೆ.
ಸುರಿಯದ ಮುಂಗಾರು ಮಳೆ ಜೋಗವೆಂದರೆ ನಿರ್ಲಿಪ್ತ, ನೀರಸ, ನೀರವೆನ್ನುವಂತೆ ಮಾಡಿದೆ. ಪ್ರತಿವರ್ಷ ಮಳೆಗಾಲದ ಈ ಅವಧಿಯಲ್ಲಿ ಜೋಗ ಜಲಪಾತದ ಸುತ್ತಮುತ್ತ ಮುತ್ತಿಕೊಳ್ಳುತಿದ್ದ ಜನ-ವಾಹನಗಳು ಈಗ ಜೋಗ ಕಡೆ ಮುಖ ಮಾಡುತ್ತಿಲ್ಲ. ಮಳೆಗಾಲದ ಮೂರು ತಿಂಗಳಲ್ಲಿ ವರ್ಷದ ದುಡಿಮೆ ಮಾಡುತಿದ್ದ ಸ್ಥಳೀಯ ವ್ಯಾಪಾರಿಗಳಿಗೆ ಈಗ ಹಸಿದ ಹೊಟ್ಟೆ ಮೇಲೆ ಹಸಿಬಟ್ಟೆ ಎನ್ನುವ ಸ್ಥಿತಿ ಇದೆ.
ಮಳೆಗಾಲವೇನೋ ಕೈಕೊಟ್ಟು ಜೋಗದಸಿರಿ ಬೆಳಕನ್ನು ಕತ್ತಲೆಗೆ ದೂಡಿದೆ. ಇದರ ಜೊತೆಗೇ ಜೋಗದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಂದಾಗಿ ಜೋಗ ಜ(ನ) ಲಪಾತದ ಎದುರು ಮಣ್ಣ-ಧೂಳು ರಾರಾಜಿಸುತ್ತಿದೆ. ಜೋಗದ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಈಗ ಜೋಗ ಜಲಪಾತದ ಎದುರು ವಾಹನಗಳೂ ಹೋಗುವಂತಿಲ್ಲ ಜನರೂ ಸುಳಿಯುವಂತಿಲ್ಲ. ಪ್ರತಿವರ್ಷ ಮಳೆ ಗಾಲದಲ್ಲಿ ಜೋಗದ ಸಂಭ್ರಮ ಸವಿಯಲು ಬರುತಿದ್ದ ಜನತೆ, ಪ್ರವಾಸಿಗರಿಗೆ ಒಂದು ಸಂದೇಶವಿದೆ. ಪ್ರತಿವರ್ಷ ಮಳೆಗಾಲಕ್ಕೆ ತಪ್ಪದೆ ಜೋಗಕ್ಕೆ ಬರುತಿದ್ದವರು ಈ ವರ್ಷ ಬರಲೇ ಬೇಡಿ ಯಾಕೆಂದರೆ ಜೋಗದಲ್ಲಿ ಈಗ ನೀರಿಲ್ಲ ಬರೀ ಮಣ್ಣು ಧೂಳು ಜೋಗವೆಂದರೆ ನಿಮ್ಮ ಕಣ್ಣಲ್ಲಿದ್ದ ಚೆಂದ ಮನದಲ್ಲಿದ್ದ ಮಧುರತೆ ಅಚಲವಾಗಿರಬೇಕೆಂದರೆ ದಯವಿಟ್ಟು ಈ ವರ್ಷ ಜೋಗದ ಕಡೆ ಬರಲೇ ಬೇಡಿ.!