
ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ಯೋಜನೆ ಆರಂಭಿಸಿದ ನಂತರ ಪ್ರತಿನಿತ್ಯ ಬೆಳಗ್ಗೆ-ಸಾಯಂಕಾಲ ಸರ್ಕಾರಿ ಬಸ್ಸಿನಲ್ಲಿ ಓಡಾಡುವ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ಬಸ್ ಸಿಗದೆ ಪರದಾಡುವಂತಾಗಿದೆ.

ಬೆಂಗಳೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ಯೋಜನೆ ಆರಂಭಿಸಿದ ನಂತರ ಪ್ರತಿನಿತ್ಯ ಬೆಳಗ್ಗೆ-ಸಾಯಂಕಾಲ ಸರ್ಕಾರಿ ಬಸ್ಸಿನಲ್ಲಿ ಓಡಾಡುವ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ಬಸ್ ಸಿಗದೆ ಪರದಾಡುವಂತಾಗಿದೆ.
ದಿನಕ್ಕೆ ಬೆರಳೆಣಿಕೆಯ ಸಂಚಾರದ ಸರ್ಕಾರಿ ಬಸ್ಸುಗಳ ಸೌಲಭ್ಯ ಇರುವ ಜಿಲ್ಲೆಗಳ ಗ್ರಾಮ ಪ್ರದೇಶಗಳಲ್ಲಿ ಶಾಲೆ-ಕಾಲೇಜು ಮಕ್ಕಳಿಗೆ ನಿತ್ಯ ಪ್ರಯಾಣಿಸಲು ಬಹಳ ಕಷ್ಟವಾಗುತ್ತಿದೆ. ಉಚಿತ ಪ್ರಯಾಣವೆಂದು ಹೊರಗೆ ದೇವಸ್ಥಾನ, ಮಠ-ಮಂದಿರಗಳು, ನೆಂಟರ ಮನೆ ಎಂದು ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.ಬಸ್ಸುಗಳಲ್ಲಿ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ. ಇದರಿಂದ ಬಸ್ಸಿನಲ್ಲಿ ಪ್ರಯಾಣಿಸುವ ಮಕ್ಕಳು ಮತ್ತು ಪುರುಷರಿಗೆ ಕಷ್ಟವಾಗುತ್ತಿದೆ.
ಶಕ್ತಿ ಯೋಜನೆ(Shakti Scheme) ಪ್ರಾರಂಭಕ್ಕೂ ಮುನ್ನ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ಪಾಸ್ ಮಾಡಿಸಿಕೊಂಡಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ತೆರಳಲು ವಿದ್ಯಾರ್ಥಿಗಳಿಗೆ ಅವಕಾಶವಿದ್ದರೂ ಬಸ್ ಏರಲು ಸಾಧ್ಯವಾಗದಷ್ಟುಜನ ತುಂಬಿರುತ್ತಾರೆ. ವಾಹನ ಚಾಲಕ ಮತ್ತು ನಿರ್ವಾಹಕರಿಗೂ ಇದು ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಹರಸಾಹಸಪಡುತ್ತಿದ್ದಾರೆ.
ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣದ ಪರಿಣಾಮ ವಿದ್ಯಾರ್ಥಿಗಳ ಮೇಲೆ ಬೀರಿದ್ದು, ಬಸ್ಗಳು ಫುಲ್ ರಶ್ ಆಗಿವೆ. 52 ಜನರು ಹತ್ತುವ ಬಸ್‌ನಲ್ಲಿ ಬರೋಬ್ಬರಿ 120 ಜನ ತುಂಬಿಕೊಂಡಿದ್ದು, ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬಸ್ ತಡೆದು ಆಕ್ರೋಶ ಹೊರ ಹಾಕಿರುವ ಘಟನೆ ಬಾಗಲಕೋಟೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ನಡೆದಿದೆ. ದಿನ ನಿತ್ಯ ಬೆಳಗ್ಗೆ ಶಾಲೆ, ಕಾಲೇಜುಗಳಿಗೆ ತೆರಳಲು, ಸಂಜೆ ವಾಪಸ್ಸು ಊರಿಗೆ ಹೋಗಲು ವಿದ್ಯಾರ್ಥಿಗಳ ಪರದಾಡುವ ಸ್ಥಿತಿ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಂಬಾರವಾಡ ಗ್ರಾಮದಲ್ಲಿ ಮಹಿಳೆಯರಿಂದ ಬಸ್ಸು ತುಂಬಿ ಹೋದಾಗ ಮಕ್ಕಳನ್ನು ಹತ್ತಿಸಿಕೊಳ್ಳದೆ ಹೊರಟು ಹೋಗುವುದನ್ನು ಖಂಡಿಸಿ ತಮ್ಮ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನ ಸೆಳೆಯಲು ಪೋಷಕರು ಮತ್ತು ಮಕ್ಕಳು ಪ್ರತಿಭಟನೆ ನಡೆಸಿದರು. (kpc)
