

ನಮ್ಮಲ್ಲಿ ಒಬ್ಬ ಸಂಸದರಿದ್ದರು. ಅವರು ಕೇಂದ್ರಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳೂ ನಿಚ್ಛಳವಾಗಿದ್ದವು ಆದರೆ ಅವರು ಸಚಿವರಾಗಲಿಲ್ಲ. ರಾಜ್ಯದ ಸಂಸದರ ನಿಯೋಗದ ಮುಖ್ಯಸ್ಥರಾಗಿ ದೆಹಲಿ ಮಟ್ಟದಲ್ಲಿ ತಿರುಗಾಡುತಿದ್ದರು ಆದರೆ ಹಾದಿತಪ್ಪಲಿಲ್ಲ. ಕೊನೆಗೆ ಚುನಾವಣಾ ವೆಚ್ಚ ಏರಿಕೆಯಾಗಿದ್ದರಿಂದ ತನಗೆ ಚುನಾವಣೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಟಿಕೇಟ್ ಬಿಟ್ಟುಕೊಟ್ಟರು! ಅವರೇ ದೇವರಾಯ ನಾಯ್ಕ.
ಜಮೀನ್ಧಾರರ ಕುಟುಂಬದ ಕುಡಿಯಾಗಿ ದಿ. ದಿನಕರ ದೇಸಾಯಿಯವರ ಜೊತೆಗೆ ಗೇಣಿದಾರರ ಪರವಾಗಿ ಹೋರಾಡಿದರು. ನಂತರ ನಿರಂತರ ನಾಲ್ಕುಬಾರಿ ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ ತಪ್ಪು ಮಾಡಿದ ಅಪರಾಧಿ ಅವರ ಬಳಿ ಸುಳಿಯುವಂತಿರಲಿಲ್ಲ. ಕಾನೂನು ಪೊಲೀಸರಿಂದ ಬಿಡಿಸಿ ಎಂದು ಹೋಗುತಿದ್ದವರಿಗೆ ಬೈದು ಕಳಿಸಿಕೊಡುತಿದ್ದುದೇ ಹೆಚ್ಚು ಇಂಥ ಪ್ರಾಮಾಣಿಕ, ನಿಷ್ಠೂರ ರಾಜಕಾರಣಿಯಾಗಿದ್ದರು ದೇವರಾಯ ನಾಯ್ಕ.
ಇದೇ ಪ್ರಭೇದದ ರಾಜಕಾರಣಿ ಜನಾರ್ಧನ ಪೂಜಾರಿ. ಅವರ ಕೆ.ಪಿ.ಸಿ.ಸಿ. ಅಧ್ಯಕ್ಷತೆಯ ಅವಧಿಯಲ್ಲಿ ಅಧಿಕಾರಸ್ಥ, ಪ್ರಭಾವಿಗಳೆಲ್ಲಾ ಪೂಜಾರಿ ಹೇಳಿದರೆ ಕೂರುತಿದ್ದರು. ಅವರು ಸನ್ನೆ ಮಾಡಿದರೆ ಏಳುತಿದ್ದರು! ಈ ಅಧಿಕಾರ,ಶಕ್ತಿ ಕೇವಲ ಹುದ್ದೆಯಿಂದ ಬರಲು ಸಾಧ್ಯವಿಲ್ಲ. ಅದಕ್ಕೆ ವೈಯಕ್ತಿಕ ಸಾಮರ್ಥ್ಯ,ಬದ್ಧತೆ, ಗಟ್ಟಿತನ ಬೇಕಾಗುತ್ತದೆ.
ದಿ. ದೇವರಾಯ ಜಿ. ನಾಯ್ಕರನ್ನು ಬಲು ಹತ್ತಿರದಿಂದ ಕಂಡಿದ್ದ ನನಗೆ ಅವರ ಕುಟುಂಬವರ್ಗದ ಪರಿಚಯ ಇತ್ತಾದರೂ ತೀರಾ ಅವರ ಕೌಟುಂಬಿಕ ವಿಚಾರಗಳೇನೂ ತಿಳಿದಿರಲಿಲ್ಲ. ದೇವರಾಯ ನಾಯಕ ಸಂಸತ್ತಿನಲ್ಲಿ ಪೊಲಿಸಿ ಮಾಡುವ ನಿಜದ ಜನಪ್ರತಿನಿಧಿಯಾಗಿದ್ದರು ಬಿಟ್ಟರೆ ಅವರಲ್ಲಿ ಲಾಭಾಕಾಂಕ್ಷೆಯ ರಾಜಕೀಯ ನಿಪುಣತೆಯ ಲವಲೇಶವೂ ಇರಲಿಲ್ಲ!.
ತಮ್ಮ ಮಕ್ಕಳಿಗೆ ರಾಜಕೀಯ ಬೇಡ ಎನ್ನುತಿದ್ದ ದೇವರಾಯ ನಾಯ್ಕ ತಮ್ಮ ಇಬ್ಬರು ಮಕ್ಕಳನ್ನು ವೈದ್ಯರನ್ನಾಗಿಸಿದ್ದರು. ಇಬ್ಬರಲ್ಲಿ ಹಿರಿಯ ಮಗ ನಾಗರಾಜ್ ನಾಯ್ಕ ಶಿರಸಿ-ಸಿದ್ಧಾಪುರಗಳಲ್ಲಿ ಪ್ರಸಿದ್ಧ ವೈದ್ಯ. ತಾನೊಬ್ಬ ರಾಜಕೀಯ ನಾಯಕನ ಮಗ, ತಾನೊಬ್ಬ ಉತ್ತಮ ವೈದ್ಯ ಎನ್ನುವ ಯಾವ ಹಮ್ಮು-ಬಿಮ್ಮುಗಳಿಲ್ಲದ ಡಾ. ನಾಗರಾಜ್ ನಾಯ್ಕ ಸಿದ್ಧಾಪುರದ ಪ್ರಸಿದ್ಧ, ಜನಪರವೈದ್ಯರಲ್ಲಿ ಒಬ್ಬರು.
ವೈದ್ಯಕೀಯ ಕ್ಷೇತ್ರದ ಆದ್ಯತೆ, ಬಾಧ್ಯತೆಗಳು ಬದಲಾಗುತ್ತಿರುವ ಈ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡಲು ಹಿಂಜರಿಯುವವರೇ ಅಧಿಕ. ಈ ಸ್ಥಿತಿ-ಪರಿಸ್ಥಿತಿಯಲ್ಲಿ ಜನರಲ್ಲಿ ಜನಾರ್ಧನನನ್ನು ಕಾಣುವ ವೈದ್ಯರಲ್ಲೊಬ್ಬರು ಡಾ. ನಾಗರಾಜ್ ನಾಯ್ಕ ಎನ್ನುವುದು ಅವರ ಹೆಗ್ಗಳಿಕೆ.
ಡಾ. ಶ್ರೀಧರ ವೈದ್ಯರ ನಿರಂತರ ಸೇವೆ, ಡಾ. ಪ್ರಕಾಶ ಪುರಾಣಿಕರವೈದ್ಯಕೀಯ ಬದ್ಧತೆ, ಪರ ಜಿಲ್ಲೆಯಿಂದ ಬಂದು ಹೊನ್ನಾವರದ ಕವಲಕ್ಕಿಯಲ್ಲಿ ಗ್ರಾಮೀಣ ಜನರ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟಿರುವ ಬರಹಗಾರ್ತಿ ಡಾ. ಎಚ್.ಎಸ್. ಅನುಪಮರ ಅನುಪಮ ಬದ್ಧತೆ ಇವುಗಳ ಬಗ್ಗೆ ಯೋಚಿಸುತಿದ್ದಾಗ. ಸಂಸದರ ಮಗನಾಗಿ ತನ್ನ ಸರಳತೆ, ನಿಷ್ಠೂರತೆ, ಬದ್ಧತೆಯ ಕಾರಣಕ್ಕೆ ಹೆಸರು ಮಾಡಿರುವ ಡಾ. ನಾಗರಾಜ್ ನಾಯ್ಕರೊಂದಿಗೆ ಅವರ ತಂದೆ ದೇವರಾಯ ನಾಯ್ಕರ ನೆನಪುಗಳ ಒರತೆ ಉಕ್ಕಿ ಬಂತು. ಇವರನ್ನೆಲ್ಲಾ ನೋಡಿದ ಮೇಲೆ ಸಮಾಜಮುಖಿ ಬದುಕೆಂದರೆ..ಇಷ್ಟು ಮತ್ತು ಇನ್ನಷ್ಟು ಎನಿಸಿತಷ್ಟೇ….
ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ವೈದ್ಯರೊಂದಿಗೆ ಎಲ್ಲಾ ವೈದ್ಯರಿಗೂ ವೈದ್ಯರ ದಿನದ ವಿಳಂಬಿತ ಶುಭಾಶಯಗಳು.

