

ಭೂಮಾಪನಾ ಇಲಾಖೆಯಲ್ಲಿ ವ್ಯಕ್ತಿಯೊಬ್ಬರಿಂದ ಪಡೆದಿದ್ದ ಲಂಚದ ಹಣವನ್ನು ಸಾರ್ವಜನಿಕರ ಎದುರು ಸಿಬ್ಬಂದಿಯೊಬ್ಬ ಮರಳಿಸಿದ ನಾಟಕೀಯ ಘಟನೆ ನಡೆದಿದೆ. ಈ ಘಟನೆ ನಡೆದಿದ್ದು ಸಿದ್ಧಾಪುರ ತಾಲೂಕಿನ ಆಡಳಿತ ಸೌಧದಲ್ಲಿ!
ವ್ಯಕ್ತಿಯೊಬ್ಬರ ಭೂಮಿ ಮಾಪನಕ್ಕೆ ಲಂಚ ಪಡೆದಿದ್ದ ಸಿಬ್ಬಂದಿಯೊಬ್ಬ ಹಣವನ್ನೂ ನೀಡದೆ, ಕೆಲಸವನ್ನೂ ಮಾಡಿಕೊಡದೆ ಸತಾಯಿಸುತಿದ್ದ. ಈ ರೀತಿ ಸಾರ್ವಜನಿಕರನ್ನು ಹಿಂಸಿಸುವ ಕೆಲಸ ಸಿದ್ಧಾಪುರದಲ್ಲಿ ಕಳೆದ ಏಳೆಂಟು ವರ್ಷಗಳಿಂದಲೂ ನಿರಾಯಾಸವಾಗಿ ನಡೆಯುತಿತ್ತು. ಪ್ರಭಾವಿಗಳಿಗೆ, ರಾಜಕೀಯ ನಾಯಕರಿಗೆ ಕೆಲಸಮಾಡಿಕೊಡುತಿದ್ದ ಭೂಮಾಪನಾ ಇಲಾಖೆಯ ಸಿಬ್ಬಂದಿಗಳು ಅಸಹಾಯಕರು, ಅಮಾಯಕರಿಗೇ ಸತಾಯಿಸಿ ಕಾಸು ಮಾಡುತಿದ್ದರು. ಈ ಬಗ್ಗೆ ಕೆಲವು ವರ್ಷಗಳಿಂದಲೂ ದೂರುಗಳಿದ್ದರೂ ಕೂಡಾ ಸಾರ್ವಜನಿಕರು ಒಟ್ಟಾಗಿ ಪ್ರತಿಭಟಿಸಿರಲಿಲ್ಲ.
ಇಂದು ಮಧ್ಯಾಹ್ನದ ಸಮಯಕ್ಕೆ ಭೂಮಾಪನಾ ಇಲಾಖೆಯ ನೌಕರರಿಂದ ನೊಂದಿದ್ದ ಕೆಲವರು ಸೇರಿದ್ದರು. ಅವರೊಂದಿಗೆ ಜೊತೆಯಾಗಿದ್ದ ಕೆಲವರು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ನೇರವಾಗಿ ಭೂಮಾಪನಾ ಇಲಾಖೆಗೆ ಧಾವಿಸಿದ್ದಾರೆ. ಅಲ್ಲಿದ್ದ ಸಿಬ್ಬಂದಿಗಳು ಒಬ್ಬ ಸಿಬ್ಬಂದಿ ಕಛೇರಿಯಲ್ಲೇ ಇಲ್ಲ, ಹೊರಗಡೆ ಇದ್ದಾರೆ ಎಂದು ಬಚಾವು ಮಾಡುಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ಸಾರ್ವಜನಿಕರು ತಹಸಿಲ್ಧಾರರ ಮೂಲಕ ಸಿಬ್ಬಂದಿಯನ್ನು ಕರೆಸುವಂತೆ ದುಂಬಾಲು ಬಿದ್ದಿದ್ದಾರೆ.
ಇದೇ ವೇಳೆ ಕೆಲವರು ಪ್ರತಿಭಟನಾ ರೀತಿಯಲ್ಲಿ ಘೋಷಣೆಗಳನ್ನೂ ಕೂಗಿದ್ದಾರೆ. ಕೆಲವು ವರ್ಷಗಳಿಂದ ಅನಾಯಾಸವಾಗಿ ದುಡಿಮೆ ಮಾಡಿಕೊಂಡಿದ್ದ ಈ ನೌಕರರಿಗೆ ಆಡಳಿತ ಪಕ್ಷದವರೇ ವಿರೋಧಿಗಳಾಗಿ ವರ್ತಿಸಿದ್ದು ದಿಗ್ಭ್ರಮೆಯಾಗಿದೆ. ಸಾರ್ವಜನಿಕರ ಪರವಾಗಿ ನೇತೃತ್ವ ವಹಿಸಿದ ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರ ಬಗ್ಗೆ ಸ್ಥಳೀಯರ ಮೆಚ್ಚುಗೆ ವ್ಯಕ್ತವಾಗಿದೆ. ಕಛೇರಿಯ ಹೊರಗೆ ಸೇರಿದ್ದ ಸಾರ್ವಜನಿಕರೂ ಕೂಡಾ ಹಲವು ವರ್ಷಗಳಿಂದ ಜಿಡ್ಡುಗಟ್ಟಿದ ಆಡಳಿತಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸ್ಥಳೀಯ ನಾಯಕರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಕಾರಣ, ಆಧುನಿಕತೆ ಹೆಸರಲ್ಲಿ ಸತಾಯಿಸುವ ಭೂಮಾಪನಾ ಇಲಾಖೆಯ ನೌಕರರು ಬಡವರಿಂದ ಲಂಚ ಪಡೆದು ಕೊಬ್ಬಿದ್ದು ಇಡೀ ಕಛೇರಿಯ ಸಿಬ್ಬಂದಿಗಳನ್ನು ಸಾಮೂಹಿಕವಾಗಿ ವರ್ಗಾಯಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
