

ಮಲೆನಾಡಿನ ಮಳೆ, ಜಲಪಾತಗಳ ವೈಭವ ವರ್ಣಿಸಲಸದಳ ಉತ್ತರ ಕನ್ನಡ ಜಿಲ್ಲೆಯಲ್ಲಿ ತುಸು ಬಿಡುವು ನೀಡಿರುವ ಮಳೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಸ್ವರ್ಗ ಎನ್ನಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಜೋಗ ಜಲಪಾತ ಸೇರಿ ಇಲ್ಲಿ ಪ್ರತಿ ತಾಲೂಕಿನಲ್ಲೂ ಜಲಪಾತಗಳ ಸೊಬಗು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಹುಸೂರು ಜಲಪಾತ ಇಂಥ ಆಕರ್ಷಕ ಜಲಪಾತಗಳಲ್ಲೊಂದು ಜೋಗದಿಂದ ಹದಿನೈದು ಕಿಲೋ ಮೀಟರ್ ದೂರದ ಈ ಜಲಪಾತ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಹುಸೂರಿನಲ್ಲಿರುವ ಆಣೆಕಟ್ಟು (ಜಲಾಗಾರ) ವರ್ಷದ ಆರು ತಿಂಗಳು ತುಂಬಿರುತ್ತದೆ. ಇನ್ನುಳಿದ ಆರು ತಿಂಗಳಲ್ಲಿ ಈ ಆಣೆಕಟ್ಟೆಯಲ್ಲಿ ನೀರಿಲ್ಲದಿರುವುದರಿಂದ ಹುಸೂರು ಜಲಪಾತ ಬಡವಾಗುತ್ತದೆ. ಈ ವರ್ಷ ವಿಳಂಬವಾಗಿ ಸುರಿದಿರುವ ಮಳೆ ಈಗ ಎಲ್ಲಾ ಜಲಪಾತಗಳನ್ನು ಮೈದುಂಬಿಸಿದೆ. ಈ ಜಲಪಾತದ ಹುಸೂರಿನ ಆಣೆಕಟ್ಟೆಯ ನೀರು ವರ್ಷಂಪ್ರತಿ ಇಲ್ಲದಿರುವುದರಿಂದ ಹುಸೂರು ಜಲಪಾತ ಕೇವಲ ಆರು ತಿಂಗಳು ಮಾತ್ರ ಮೈತುಂಬಿಕೊಂಡಿರುತ್ತದೆ. ಇದೇ ಆಣೆಕಟ್ಟೆಗೆ ಸಾಗರದ ಲಿಂಗನಮಕ್ಕಿ ಜಲಾಶಯದ ನೀರು ಹರಿಸುವುದರಿಂದ ಈ ಜಲಪಾತವನ್ನು ಸರ್ವಋತು ಜಲಪಾತವನ್ನಾಗಿ ಅಭಿವೃದ್ಧಿ ಪಡಿಸಬಹುದು ಎನ್ನುವ ಅಭಿಪ್ರಾಯವಿದೆ.
ಸಿದ್ಧಾಪುರ ತಾಲೂಕಿಗೆ ಲಿಂಗನಮಕ್ಕಿಯಿಂದ ಹಿನ್ನೀರನ್ನು ತರಲು ಯೋಜನೆ ಸಿದ್ಧವಾಗಿದೆ. ಈ ಯೋಜನೆಯನ್ನು ತುಸು ಬದಲಿಸಿ ಹುಸೂರುಜಲಾಶಯಕ್ಕೆ ಲಿಂಗನಮಕ್ಕಿ ಹಿನ್ನೀರನ್ನು ಹರಿಸಿ ಅದರಿಂದ ಹುಸೂರಿನ ಜಲಪಾತವನ್ನು ವರ್ಷವಿಡೀ ಜೀವಂತವಿಡಬಹುದು ಎನ್ನುವ ಅಭಿಪ್ರಾಯ ಸ್ಥಳೀಯರದ್ದು. ಹುಸೂರಿನ ರಮಣೀಯ ಪರಿಸರದ ಜಲಪಾತ ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ವೈಭವವನ್ನು ವರ್ಷವಿಡೀ ವಿಸ್ತರಿಸಲು ಸ್ಥಳೀಯ ಆಡಳಿತ ಪ್ರಯತ್ನಿಸಿದರೆ ಸಿದ್ಧಾಪುರಕ್ಕೆ ವರ್ಷವಿಡೀ ಕುಡಿಯುವ ನೀರಿನ ಜೊತೆಗೆ ತಾಲೂಕಿನ ಪ್ರವಾಸೋದ್ಯಮವನ್ನೂ ಅಭಿವೃದ್ಧಿಪಡಿಸಬಹುದೆನ್ನುವ ಆಶಯ ಈಗ ಸಾರ್ವಜನಿಕ ಅಭಿಪ್ರಾಯವಾಗುತ್ತಿದೆ.
