

ಹಿಂದೆ ಕೆನರಾ ಲೋಕಸಭಾ ಕ್ಷೇತ್ರವಾಗಿದ್ದ ಉತ್ತರ ಕನ್ನಡ ತನ್ನ ಲೋಕಸಭಾ ಕ್ಷೇತ್ರಕ್ಕೆ ಶಿವಮೊಗ್ಗ, ದಕ್ಷಿಣಕನ್ನಡ ಭಾಗಗಳನ್ನು ಸೇರಿಸಿಕೊಂಡು ಕನ್ನಡ ಜಿಲ್ಲೆ ಅಥವಾ ಕೆನರಾ ಕ್ಷೇತ್ರ ಎಂದು ಕರೆಸಿಕೊಂಡಿದ್ದು ಹಳೆಯ ಕತೆ. ಈ ಕ್ಷೇತ್ರ ಶಿವಮೊಗ್ಗ,ದಕ್ಷಿಣ ಕನ್ನಡಗಳನ್ನು ಜೋಡಿಸಿಕೊಂಡಿದ್ದರಿಂದ ಇಲ್ಲಿ ಬಂಗಾರಪ್ಪ ಪ್ರಭಾವ ಆಳ್ವ ಕುಟುಂಬದ ರಾಜಕಾರಣ ನಡೆದುಹೋಗಿದ್ದು ಚರಿತ್ರೆ.

ಈಗ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಕ್ಷೇತ್ರಗಳನ್ನು ಒಳಗೊಂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಹಲವು ಕಾರಣಗಳಿಂದ ಸುದ್ದಿ ಮಾಡುತ್ತಿದೆ.
ಉತ್ತರ ಕನ್ನಡ ಜಿಲ್ಲೆಯನ್ನು ನಿರಂತರ ನಾಲ್ಕುಬಾರಿ ಪ್ರತಿನಿಧಿಸಿದ್ದ ಬಿ.ಜೆ.ಪಿ.ಯ ಘೋರ ಭಾಷಣಕಾರ ಅನಂತಕುಮಾರ್ ಹೆಗಡೆ ಬಿ.ಜೆ.ಪಿ.ಜೊತೆ ಮಧುರ ಬಾಂಧವ್ಯ ಮುಂದುವರಿಸದಿರುವುದು ಈ ಬಾರಿ ತನಗೆ ಬಿ.ಜೆ.ಪಿ.ಯ ಲೋಕಸಭೆ ಟಿಕೇಟ್ ಬೇಡ ಎಂದು ನಿರಾಕರಿಸುವುದು ವಿಶೇಶ (ಪ್ರತಿ ಚುನಾವಣೆ ವೇಳೆ ತನಗೆ ಟಿಕೇಟ್ ಬೇಡ ಎನ್ನುವುದು ಅನಂತಕುಮಾರ ಹೆಗಡೆ ಟ್ರಿಕ್ ಕೂಡಾ!)
ಬಿ.ಜೆ.ಪಿ. ಟಿಕೇಟ್ ಗಾಗಿ ಕಾಯುತ್ತಿರುವವರಲ್ಲಿ ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ, ಯಲ್ಲಾಪುರದ ಮಾಜಿ ಸಚಿವ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್, ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಪರಾಜಿತಗೊಂಡಿರುವ ಸುನಿಲ್ ನಾಯ್ಕ, ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸಮೀತಿ ಮಾಜಿ ಸದಸ್ಯ ಕೇ.ಜಿ.ನಾಯ್ಕ ಸೇರಿದ್ದಾರೆ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ಜೆ.ಡಿ.ಎಸ್. ಎನ್.ಡಿ.ಎ. ಒಕ್ಕೂಟ ಸೇರಿದರೆ ಜೆ.ಡಿ.ಎಸ್. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬೇಡಿಕೆ ಇಡುವುದರಿಂದ ಬಿ.ಜೆ.ಪಿ. ಈ ಕ್ಷೇತ್ರ ಬಿಟ್ಟುಕೊಟ್ಟು ಜಾದಳಕ್ಕೆ ಬೆಂಬಲಿಸುವ ಸಾಧ್ಯತೆ ಹೆಚ್ಚು. ಹೀಗಾದರೆ ಈ ಬಾರಿ ಕುಮಟಾದಿಂದ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾಗಿ ಅತಿ ಕಡಿಮೆ ಅಂತರದಿಂದ ವಿರೋಚಿತ ಸೋಲು ಕಂಡಿರುವ ಸೂರಜ್ ನಾಯ್ಕ ಸೋನಿ ಜಾದಳದ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎನ್ನುವ ನಿರೀಕ್ಷೆಗಳಿವೆ.
ಕುಮಟಾದ ಸೂರಜ್ ನಾಯ್ಕ ಸೋನಿ ಉತ್ತರ ಕನ್ನಡಜಿಲ್ಲೆಯ ಬಹುಸಂಖ್ಯಾತ ನಾಮಧಾರಿಗಳನ್ನು ಪ್ರತಿನಿಧಿಸುತ್ತಿರುವುದು ಹಿಂದೆ ಬಿ.ಜೆ.ಪಿ.ಯಲ್ಲಿದ್ದು ಬಿ.ಜೆ.ಪಿ.ಯ ಮುಖಂಡರು ಕಾರ್ಯಕರ್ತರ ಸಂಪರ್ಕದಲ್ಲಿದ್ದುದು ಉಪಯೋಗಕ್ಕೆ ಬರಲಿದೆ ಎನ್ನುವ ಲೆಕ್ಕಾಚಾರಗಳಿವೆ.
ಜಾದಳ ಬಿ.ಜೆ.ಪಿ.ಯ ಹೊಂದಾಣಿಕೆಯ ಎನ್.ಡಿ.ಎ. ಅಭ್ಯರ್ಥಿ ದೀವರ ಸೂರಜ್ ನಾಯ್ಕ ಸೋನಿಯಾದರೆ ಕಾಂಗ್ರೆಸ್ ತನ್ನ ಇಂಡಿಯಾ ಬಳಗದ ಅಭ್ಯರ್ಥಿಯಾಗಿ ಕಾರವಾರದ ಹಾಲಿ ಶಾಸಕ ಸತೀಶ್ ಶೈಲ್ ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಮರುಪ್ರವೇಶಕ್ಕೆ ತುದಿಗಾಲ ಮೇಲೆ ನಿಂತಿರುವ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ತಮ್ಮ ಪುತ್ರ ವಿವೇಕ್ ಹೆಬ್ಬಾರ್ ರನ್ನು ಕಣಕ್ಕಿಳಿಸಲು ಸಿದ್ಧರಾಗಿರುವ ವರ್ತಮಾನವಿದೆ. ಸಂಪನ್ಮೂಲ, ಜಾತಿ ಕಾರಣಕ್ಕೆ ಹಾಲಿ ಶಾಸಕ ಶಿರಸಿಯ ಭೀಮಣ್ಣ ನಾಯ್ಕರಿಗೆ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಮಾಡಲು ತವಕಿಸುತ್ತಿರುವ ಕಾಂಗ್ರೆಸ್ ಗೆ ಹವ್ಯಕ ವಿವೇಕ್ ಹೆಬ್ಬಾರ್, ಮರಾಠ ಸತೀಶ್ ಶೈಲ್ ಅಥವಾ ನಾಮಧಾರಿ ಅಥವಾ ದೀವರಾಗಿರುವ ಭೀಮಣ್ಣ ಅಥವಾ ಅರಣ್ಯ ಹಕ್ಕು ಹೋರಾಟಗಾರ ಎ. ರವೀಂದ್ರ ಮೇಲೆ ಒಲವು. ಉತ್ತರ ಕನ್ನಡದ ಬಹುಸಂಖ್ಯಾತ ದೀವರು, ತಪ್ಪಿದರೆ ಎರಡನೇ ಬಹುಸಂಖ್ಯಾತ ಮರಾಠರು ಅಥವಾ ನಾಲ್ಕು ಐದನೇ ಬಹುಸಂಖ್ಯಾತ ಮತದಾರರಾದ ಬ್ರಾಹ್ಮಣರನ್ನು ಬಿಟ್ಟು ಇತರರನ್ನು ಅಭ್ಯರ್ಥಿ ಮಾಡಲು ಥೈರ್ಯಮಾಡದ ಪಕ್ಷಗಳು ಮಾಜಿ,ಹಾಲಿ ಜನಪ್ರತಿನಿಧಿಗಳನ್ನೇ ನಿಲ್ಲಿಸಿ ಗೆಲ್ಲಿಸುವ ಕಾರ್ಯತಂತ್ರ ರಚಿಸುತ್ತಿವೆ.
ಎನ್.ಡಿಎ ದಿಂದ ನಾಮಧಾರಿ ಅಥವಾ ದೀವರು ತಪ್ಪಿದರೆ ಮರಾಠರು ಅಥವಾ ಬ್ರಾಹ್ಮಣರಿಗೆ ಅವಕಾಶಗಳಿವೆ. ಎನ್.ಡಿ.ಎ. ಅಭ್ಯರ್ಥಿಗೆ ಇಂಡಿಯಾ ಮೂಲಕ ಸವಾಲು ಹಾಕಲು ಈಡಿಗರು (ನಾಮಧಾರಿ,ದೀವರು) ಮರಾಠರು, ಅಥವಾ ಬ್ರಾಹ್ಮಣರು ಸರಿಯಾದ ಅಸ್ತ್ರ ಎಂದು ಕಾಂಗ್ರೆಸ್ ಯೋಚಿಸುತ್ತಿದೆ. ಕಾಂಗ್ರೆಸ್ ಗೆ ಬರಲಿರುವ ಶಿವರಾಮ ಹೆಬ್ಬಾರ್ ರ ಪುತ್ರ ವಿವೇಕ ಮತ್ತು ಮಾಜಿ ಸಚಿವ ದೇಶಪಾಂಡೆ ಪುತ್ರ ಪ್ರಶಾಂತ ದೇಶಪಾಂಡೆ ಸಧ್ಯ ಕಾಂಗ್ರೆಸ್ ಗೆ ಲಭ್ಯರಿರುವ ಬ್ರಾಹ್ಮಣ ಹುರಿಯಾಳುಗಳು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನಾಮಧಾರಿ,ಬ್ರಾಹ್ಮಣರು ಅಥವಾ ಮರಾಠರಿಗೆ ಕಾಂಗ್ರೆಸ್ ಟಿಕೇಟ್ ನೀಡಿದರೆ ಇಂಡಿಯಾ ಗೆಲುವು ಸಾಧ್ಯ ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಈ ಸಾಧ್ಯತೆಗಳ ಹಿನ್ನೆಲೆಯಲ್ಲಿ ಬಿ.ಜೆ.ಪಿ. ಕ್ಷೇತ್ರವಾಗಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಮರಳಿ ಗೆಲ್ಲಲು ತಂತ್ರಗಾರಿಕೆ ಹೂಡಿರುವುದು ಮೇಲ್ನೋಟಕ್ಕಂತೂ ರಾರಾಜಿಸುವಂತಿದೆ.
( -ಕನ್ನೇಶ್ವರ ನಾಯ್ಕ ಕೋಲಶಿರ್ಸಿ ಕೃಪೆ-ವಿ.ಕ. ದಿಜಿಟಲ್)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
