ಕವಿತೆಯ ರಚನೆ ಸರಳ ದಾರಿಯಲ್ಲ.ಅದು ದಕ್ಕಬೇಕಾದರೆ ಕಷ್ಟ ಹೆಚ್ಚು. ಇಂಥ ಕಷ್ಟಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಪಕ್ವತೆ ಬರುತ್ತದೆ. ಇಲ್ಲವಾದರೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಕವಿ ಕೆ.ಬಿ.ವೀರಲಿಂಗನಗೌಡ ಹೇಳಿದರು.
ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಪಟ್ಟಣದ ಬಾಲಭವನದಲ್ಲಿ ಆಯೋಜಿಸಿದ ಶ್ರಾವಣ ಕವಿಗೋಷ್ಠಿ ಮತ್ತು ಕವಿತೆ,ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಆಶಯ ಮಾತುಗಳನ್ನಾಡುತ್ತ ಸತ್ಯ,ಸಿದ್ಧಾಂತ,ನ್ಯಾಯಪರ,ಸಮಾನತೆಯ ಆಶಯ ಇಟ್ಟುಕೊಂಡು ಬರೆಯಬೇಕು. ಕವಿತೆ ಅಂದರೆ ಕರುಳಿನಲ್ಲಿ ಅರಳುವ ಸರಳ ಹೂಗಳು. ವ್ಯಕ್ತಿ,ಸಮಾಜ,ವ್ಯವಸ್ಥೆಯಿಂದ ಘಾಸಿಗೊಂಡಾಗ ಕಾವ್ಯ ನಮ್ಮನ್ನು ಸಲಹುತ್ತದೆ ಎಂದರು.
ನ್ಯಾಯಾಧೀಶ ತಿಮ್ಮಯ್ಯ ಜಿ.ಮಾತನಾಡಿ ಬರೆಹಗಾರರಿಗೆ ಅಧ್ಯಯನ ಮುಖ್ಯ.ಹೆಚ್ಚು,ಹೆಚ್ಚು ಓದಬೇಕು.ನಮ್ಮ ಭಾಷೆಯ,ಇತರ ಭಾಷೆಯ ಅನುವಾದಿತ ಕೃತಿಗಳನ್ನು ಓದಿ. ಸಾಹಿತ್ಯಕ್ಕೆ ವಿಶೇಷವಾದ ಶಕ್ತಿ ಇದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡ ಸಾಹಿತಿ,ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ ಬರೆಹಗಾರನಿಗೆ ಅಧ್ಯಯನ ಮುಖ್ಯ. ಅದರರ್ಥ ಅದನ್ನು ನಕಲು ಮಾಡಬೇಕು ಅಂತಲ್ಲ. ಸಾಹಿತ್ಯದ ಶಿಸ್ತು, ನಮ್ಮ ಮಿತಿಗಳು ಅರಿವಿಗೆ ಬರುತ್ತದೆ. ನಾವು ಬರೆದದ್ದೆಲ್ಲ ಕವಿತೆಯಾಗುವದಿಲ್ಲ. ಮತ್ತೆ ಮತ್ತೆ ತಿದ್ದಿ ತೀಡಿ ನಮ್ಮೆಲ್ಲ ಭಾವಶಕ್ತಿಯನ್ನು ವೃದ್ದಿಸಿಕೊಂಡು ಬರೆದಾಗ ನೂರರಲ್ಲಿ ಒಂದೆರಡು ಉತ್ತಮ ಕವಿತೆಗಳಾಗುತ್ತದೆ. ಬಹಳಷ್ಟು ಯುವಕವಿಗಳು ಸಕ್ರೀಯರಾಗಿರುವದು ಸಾಹಿತ್ಯದ ಸಮೃದ್ಧತೆಯ ಸೂಚನೆ ಎಂದರು.
ಇನ್ನೊರ್ವ ಅತಿಥಿ ಪತ್ರಕರ್ತ ಶಿವಾನಂದ ಹೊನ್ನೆಗುಂಡಿ ಮಾತನಾಡಿ ಕವಿ ಎದುರಾದ ಸಮಸ್ಯೆಗಳನ್ನು ಮೀರಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಮಾತನಾಡಿ ನಾಡು,ನುಡಿ,ಕಲೆ,ಸಂಸ್ಕೃತಿಗಳ ಕುರಿತು ಯುವಮನಸ್ಸುಗಳಿಗೆ ಪ್ರೇರಣೆ ನೀಡುವ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ ಎಂದರು.
ಈ ಸಂದರ್ಭದಲ್ಲಿ ಶ್ರಾವಣ ಕವಿಗೋಷ್ಠಿ ಪ್ರಯುಕ್ತ ಹಲವು ಕವಿಗಳು ಸ್ವರಚಿತ ಕವಿತೆ ವಾಚಿಸಿದರು. ಪ್ರಾಥಮಿಕ,ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕವಿತೆ,ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಕಸಾಪ ಖಜಾಂಚಿ ಪಿ.ಬಿ.ಹೊಸೂರ ಉಪಸ್ಥಿತರಿದ್ದರು
ಗಾಯಕಿ ಸುಮಿತ್ರಾ ಶೇಟ್ ಕವಿತೆ ಹಾಡಿದರು. ಬರಹಗಾರ ಪ್ರೊ| ರತ್ನಾಕರ ನಾಯ್ಕ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ವಂದಿಸಿದರು.