.
ಸಿದ್ದಾಪುರ
ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಮೂರೂರು ವಿಷ್ಣು ಗಜಾನನ ಭಟ್ಟ (೬೫) ಸಿದ್ದಾಪುರ ತಾಲೂಕಿನ ಭಾನ್ಕುಳಿಯ ಶ್ರೀರಾಮದೇವ ಮಠದಲ್ಲಿ ಭಾನುವಾರ ನಿಧನಹೊಂದಿದರು.
ಮೂಲತಃ ಕುಮಟಾ ತಾಲೂಕಿನ ಮೂರೂರಿನವರಾದ ಅವರು ಕಳೆದ ಮೂರು ವರ್ಷದಿಂದ ಭಾನ್ಕುಳಿಮಠದಲ್ಲಿ ತಮ್ಮ ಪುತ್ರನೊಂದಿಗೆ ವಾಸವಾಗಿದ್ದರು. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.
ಗುಂಡುಬಾಳ, ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಶಿರಸಿ, ಪೆರ್ಡೂರು,ಮಂದಾರ್ತಿ, ಸಾಲಿಗ್ರಾಮ, ಪೂರ್ಣಚಂದ್ರ ಮತ್ತಿತರ ಯಕ್ಷಗಾನಮೇಳದಲ್ಲಿ ನಾಲ್ಕು ದಶಕಗಳ ಕಾಲ ಕಲಾಸೇವೆ ಗೈದಿದ್ದಾರೆ.
ದಾಕ್ಷಾಯಿಣಿ, ಸೀತೆ, ಅಂಬೆ, ಚಂದ್ರಮತಿ, ದಮಯಂತಿ ಮುಂತಾದ ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿ ಯಕ್ಷಗಾನ ಕಲಾಸಕ್ತರ ಮನೆಮಾತಾಗಿದ್ದರು. ತಮ್ಮ ಭಾವ ಪೂರ್ಣ ಅಭಿನಯ, ಮಾತುಗಾರಿಕೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು.
ಯಕ್ಷಗಾನ ಕಲಾರಂಗ ಪ್ರಶಸ್ತಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಅವರ ಅಂತ್ಯ ಸಂಸ್ಕಾರ ಭಾನ್ಕುಳಿಮಠದ ಶಂಕರಗಿರಿಯಲ್ಲಿ ಭಾನುವಾರ ನಡೆಯಿತು.
ಮಠದ ಪ್ರಮುಖರಾದ ಆರ್.ಎಸ್.ಹೆಗಡೆ ಹರಗಿ, ಎಂ.ಜಿ.ರಾಮಚಂದ್ರನ್, ಮಹೇಶ ಭಟ್ಟ ಚಟ್ನಳ್ಳಿ, ಶಾಂತಾರಾಮ ಹಿರೇಮನೆ, ಎಂ.ಎಂ.ಹೆಗಡೆ ಮಗೇಗಾರ ಸೇರಿದಂತೆ ಮಠದ ಶಿಷ್ಯವೃಂದದವರಿದ್ದರು.
ವಿಷ್ಣು ಭಟ್ಟ ಅವರ ನಿಧನಕ್ಕೆ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ, ಯಕ್ಷಚಂದನ ದಂಟಕಲ್, ಕಲಾಭಾಸ್ಕರ ಇಟಗಿ, ಸರಸ್ವತಿ ಕಲಾ ಟ್ರಸ್ಟ್ ಹೊಸಗದ್ದೆ ಸಂಘಟನೆ, ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ, ಸ್ರ್ತೀ ವೇಷಧಾರಿ ಭಾಸ್ಕರ ಜೋಶಿ ಶಿರಳಗಿ, ಮಹಾಬಲೇಶ್ವರ ಇಟಗಿ ಸೇರಿದಂತೆ ಅನೇಕ ಯಕ್ಷಗಾನ ಕಲಾವಿದರು, ಗಣ್ಯರು ಕಂಬನಿ ಮಿಡಿದಿದ್ದಾರೆ.