

ಬೇಡ್ಕಣಿ ಮೇಳದ 26ನೇ ವರ್ಷದ ತಿರುಗಾಟ ಪ್ರಾರಂಭ – ಶಾಸಕ ಭೀಮಣ್ಣ ನಾಯ್ಕ ಚಾಲನೆ.
ಸಿದ್ದಾಪುರ. ತಾಲೂಕಿನ ಬೇಡ್ಕಣಿಯ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಕಲಾಸಂಘ ತನ್ನ 26ನೇ ವರ್ಷದ ತಿರುಗಾಟದ ಮೊದಲ ಪ್ರದರ್ಶನವನ್ನು ವರ್ಷ ತೊಡಕಿನ ದಿನ ಪ್ರಾರಂಭಿಸಿತು. ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ದೀಪ ಬೆಳಗಿಸುವುದರೊಂದಿಗೆ ಪ್ರಾರಂಭೋತ್ಸವವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 25 ವರ್ಷಗಳ ಸುದೀರ್ಘ ಅವಧಿಗೆ ಗ್ರಾಮೀಣ ಪ್ರದೇಶದ ಹವ್ಯಾಸಿ ಮೇಳವೊಂದು ನಿರಂತರವಾಗಿ ಯಕ್ಷಗಾನ ಪ್ರದರ್ಶಿಸುತ್ತಾ ಬಂದಿರುವುದು ತುಂಬಾ ಹರ್ಷದಾಯಕ. ಕಲಾವಿದರ ಬದುಕಿನ ಬವಣೆಗಳನ್ನು ಸಮಾಜ ಮತ್ತು ಸರಕಾರವು ಗಮನಿಸಿ ಅವರಿಗೆ ಸಹಾಯ ಸಹಕಾರವನ್ನು ನೀಡಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಭೀಮಣ್ಣ ಟಿ. ನಾಯ್ಕರವರನ್ನು ಯಕ್ಷ ವೇದಿಕೆಯಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಶ್ರೀಧರ ವೈದ್ಯ, ಎಂ. ಕೆ. ನಾಯ್ಕ ಹೊಸಳ್ಳಿ ಮೇಳದ ತಿರುಗಾಟಕ್ಕೆ ಶುಭಕೋರಿದರು.
ಮೇಳದ ಅಧ್ಯಕ್ಷ ಲಕ್ಷ್ಮಣ ನಾಯ್ಕ ಬೇಡ್ಕಣಿ ಯಕ್ಷಗಾನ ಕಲಾವಿದರ ಹಾಗೂ ಮೇಳದ ಸಂಕಷ್ಟಗಳ ಬಗ್ಗೆ ಮಾತನಾಡಿದರು. ಸಿ.ಆರ್.ನಾಯ್ಕ ಕೆಳಗಿನಸಸಿ, ವಿ.ಆರ್.ಗೌಡ ಅಜ್ಜಿಬಳ, ವಿನಾಯಕ ನಾಯ್ಕ ವೇದಿಕೆಯಲ್ಲಿದ್ದರು. ಕೋಟೆ ಆಂಜನೇಯ ದೇವಸ್ಥಾನದ ಅಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಲಾವಿದ ಜೈಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ(ಬೇಡ್ಕಣಿ) ಸ್ವಾಗತಿಸಿ ನಿರೂಪಿಸಿದರು.
ನಂತರ ಮಹಿರಾವಣ ಕಾಳಗ ಮತ್ತು ಮೀನಾಕ್ಷಿ ಕಲ್ಯಾಣ ಎಂಬ ಆಖ್ಯಾನಗಳ ಬಯಲಾಟವನ್ನು ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಕಲಾ ಸಂಘದ ಕಲಾವಿದರು ಆಕರ್ಷಕವಾಗಿ ನಡೆಸಿಕೊಟ್ಟರು.

