

ಸಿದ್ದಾಪುರ: ರೈತರಿಗೆ ಸರ್ಕಾರದಿಂದ ನೀಡುವ ಸಲಕರಣೆಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ತೆಗೆದುಕೊಂಡರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಎಚ್ಚರಿಕೆ ನೀಡಿದರು.
ಕೃಷಿ ಇಲಾಖೆ ವತಿಯಿಂದ ಫಲಾನುಭವಿ ರೈತರಿಗೆ ವಿವಿಧ ಯೋಜನೆಯಡಿ ಸಹಾಯಧನ ಮಂಜೂರಾತಿ ಪತ್ರ, ಕೃಷಿ ಪರಿಕರಗಳ ವಿತರಣೆ ಹಾಗೂ ಆತ್ಮ ಯೋಜನೆಯಡಿ ಪರಿಶಿಷ್ಟ ಜಾತಿ ರೈತರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಕೆಲವರು ತಾನು ಕೃಷಿಕ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ನನಗಂತೂ ಕೃಷಿಕ ಎಂದುಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ. ರೈತರನ್ನು ಯಾರೂ ಕೂಡ ನಿರ್ಲಕ್ಷ ಮಾಡಬಾರದು. ರೈತರಿಗೆ ಅವಶ್ಯವಾಗಿ ಬೇಕಾಗಿರುವ ನೀರು ಹಾಗೂ ವಿದ್ಯುತ್ ಸರಿಯಾಗಿ ನೀಡಬೇಕು. ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕೃಷಿ ಪಂಪಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೊಳಿಸದಿದ್ದರೆ ಎಷ್ಟೋ ಕೃಷಿಕರು ಕೃಷಿಯಿಂದ ವಿಮುಖರಾಗುತ್ತಿದ್ದರು. ರೈತರಿಗೆ ದಿನದ 24 ಗಂಟೆ ಕರೆಂಟ್ ಕೊಡಬೇಕು. ರೈತರಿಗೆ ಸರ್ಕಾರದಿಂದ ನೀಡುವ ಸಲಕರಣೆಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿಸಿದರೆ ಸಹಿಸಲು ಸಾಧ್ಯವಿಲ್ಲ ಎಂದ ಅವರು, ಈ ಬಾರಿ ಮಳೆ ತುಂಬಾ ಕಡಿಮೆಯಾಗಿದೆ. ಜಿಲ್ಲೆಯ ಬರ ಪರಿಸ್ಥಿತಿ ನಿಭಾಯಿಸಲು 16 ಕೋಟಿ ಜಿಲ್ಲಾಧಿಕಾರಿ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್.ಎಂ., ಮಾತನಾಡಿ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಸಾಕಷ್ಟು ಸೌಲಭ್ಯಗಳಿವೆ. ರೈತರು ಇಲಾಖೆಯಿಂದ ಸಿಗುವ ಸಹಾಯಧನ ಪಡೆದುಕೊಳ್ಳಬೇಕು ಎಂದರು.
ಇದೇ ವೇಳೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನರಾದ ಪಿ.ಎಸ್.ಭಟ್ ಮುತ್ತಿಗೆ, ರಾಮಚಂದ್ರ ಹೆಗಡೆ, ಕಿರಣ ನಾಯ್ಕ ಕ್ಯಾದಗಿ, ಪುರುಷೋತ್ತಮ ನಾಯ್ಕ ಕಿಲಾರ ಇವರಿಗೆ ಶಾಸಕ ಭೀಮಣ್ಣ ನಾಯ್ಕ ಪ್ರಶಸ್ತಿ ಪತ್ರ ಪ್ರಧಾನ ಮಾಡಿದರು.
ಈ ವೇಳೆ ಕೋರ್ಲಕಟ್ಟಾ ಗ್ರಾಪಂ ಅಧ್ಯಕ್ಷ ನಟರಾಜ ಜಿಡ್ಡಿ, ವಿವಿಧ ಗ್ರಾಪಂ. ಸದಸ್ಯರುಗಳಾದ ಸೀಮಾ ಹೆಗಡೆ, ಸುರೇಂದ್ರ ಗೌಡ, ಹನುಮಂತ ನಾಯ್ಕ, ಬೇಡ್ಕಣಿ ಸೊಸೈಟಿ ಉಪಾಧ್ಯಕ್ಷ ಬಾಬು ನಾಯ್ಕ ಉಪಸ್ಥಿತರಿದ್ದರು. ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್.ಎಂ. ಸ್ವಾಗತಿಸಿದರು. ಪ್ರಶಾಂತ ಜಿ.ಎಸ್ ನಿರೂಪಿಸಿದರು.
