ಒಂದೇ ಕೆಲಸ, ಒಂದೇ ವಾತಾವರಣ, ಒಂದೇ ಅಭ್ಯಾಸ, ಹವ್ಯಾಸ ಇವುಗಳಿಂದ ಏಕತಾನತೆ ಮರೆಯಬಹುದು. ರೈತನೊಬ್ಬನಿಗೆ ಕಾಲಕಾಲಕ್ಕೆ ಬದಲಾಗುವ ವಾತಾವರಣ, ಬೆಳೆ, ಕೆಲಸ, ಸುಗ್ಗಿ,ಹಿಗ್ಗು ಇವೆಲ್ಲಾ ಆತನ ಏಕತಾನತೆಯನ್ನು ಮುರಿದು ಹೊಸ ಹುರುಪಿನ ಚಿಗುರನ್ನು ಹುಟ್ಟಿಸುತ್ತವೆ.
ವಿಜ್ಞಾನಿ ಮೌನದಲ್ಲಿ ಏಕಾಂತವನ್ನು ಹೊದ್ದು ಏನನ್ನಾದರೂ ಸಾಧಿಸುತ್ತಾನೆ.
ರಾಜಕಾರಣಿ, ಕವಿ,ಸಾಂಸ್ಕೃತಿಕ ವ್ಯಕ್ತಿ ಏಕಾಂತ, ಏಕತಾನತೆಯಲ್ಲೇ ವೈವಿಧ್ಯವನ್ನು ಕನಸುತ್ತಾನೆ.
ಒಟ್ಟಾರೆ ಏಕತಾನತೆ ಬಹುತೇಕರಿಗೆ ಆಪ್ತವಲ್ಲ.
ಒಂದು ಪ್ರಸಂಗ ನಡೆಯಿತು. ಆಗ ನಾವೆಲ್ಲಾ ಬೆಂಗಳೂರು ಮಹಾನಗರದಲ್ಲಿ ಕನಸು ಬಿತ್ತುವ ಕೆಲಸದಲ್ಲಿ ತೊಡಗಿಕೊಂಡ ಸಮಯ. ಖಾಲಿ ಜೇಬು ತಲೆ ತುಂಬಾ ಯೋಚನೆ, ಯೋಜನೆ ಆಕಾಶದಗಲದ ಕನಸು.
ಸ್ನೇಹಿತ ಮಹಾಂತೇಶ ನಮಗಿಂತ ಹೆಚ್ಚು ಪ್ರಬುದ್ಧನಂತಿದ್ದ ಆತನ ಪ್ರಬುದ್ಧತೆಯ ಮಟ್ಟ ಯಾವ ಎತ್ತರದಲ್ಲಿತ್ತೆಂದರೆ… ಮಿ.ನಾಯ್ಕ ಒಬ್ಬ ತಂತ್ರಜ್ಞ ಹೊಸ ಆವಿಷ್ಕಾರ ಮಾಡುತ್ತಾನೆ. ವೈದ್ಯ ರೋಗಿಯನ್ನು ಬದಲಿಸುತ್ತಾನೆ. ನಾವೇನು ಅವರಿವರು ಹೇಳಿದ್ದನ್ನು ಬರೆದು ಮಹಾ ಸುಧಾರಣೆ ಮಾಡುತ್ತೇವೆ ಎಂದು ಪತ್ರಿಕೋದ್ಯೊಗದ ನಿರರ್ಥತೆಯನ್ನು ಹೇಳುತಿದ್ದ!
ನಾವಿದ್ದ ಹೋಟೆಲ್ ನಿಂದ ಮಾರುದೂರ ನಡೆದುಹೋಗಿ ಉಪಹಾರ ಮಂದಿರದಲ್ಲಿ ಪ್ರತಿದಿನ ಸೆಟ್ ದೋಸೆ ತಿನ್ನುತಿದ್ದ. ಪ್ರತಿದಿನ ಬದಲಾವಣೆ ಬಯಸುತಿದ್ದ ನನಗೆ ಅವನ ಏಕತಾನತೆ ಬೇಸರವಾಗಿ ಆಹೋಟೆಲ್ ಹುಡುಗರಂತೆ ಪ್ರತಿದಿನ ಅದೇ ತಿಂದುಕೊಂಡು ಬದುಕುವುದು ವಾಕರಿಕೆ! ಏಕತಾನತೆ ಎನಿಸುವುದಿಲ್ಲವೆ ಎಂದೆ.
ಎಂದಿನಂತೆ ಹುಸುನಕ್ಕ!
ಯಾರಿಗೆ ಏಕತಾನತೆ? ಆಯ್ಕೆ ಇಲ್ಲದವರಿಗೆ ಎಂಥಾ ಎಕತಾನತೆ ಬೋರು ಎಂದ.
ಹೌದಲ್ವಾ? ಅನಿವಾರ್ಯತೆ, ಅನ್ಯ ಆಯ್ಕೆಗಳ ಅವಕಾಶ ಇದ್ದಿದ್ದರೆ ಭಾರತದಲ್ಲಿ ಮುಕ್ಕಾಲು ಪಾಲು ಜನ ಕೃಷಿ ಮಾಡುತಿದ್ದರೆ….?
ಆಯ್ಕೆ, ಅನುಕೂಲಗಳಿದ್ದಿದ್ದರೆ ಎಳೆ ಪ್ರತಿಭಾವಂತರು ಪ್ರಾಥಮಿಕ ಶಾಲೆಗಳ ಶಿಕ್ಷಕ-ಶಿಕ್ಷಕಿಯರಾಗುತಿದ್ದರೆ….
ಏಕತಾನತೆ ಮೀರಬೇಕೆಂದರೆ ಆಯ್ಕೆಯ ಅವಕಾಶವಿರಬೇಕು, ಇಲ್ಲ ನಾವೇ ಆಯ್ಕೆ, ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಯಾಕೆಂದರೆ ನಾವು ಅಂದುಕೊಂಡಂತೆ ಬದುಕುವುದಕ್ಕಿಂತ ಬದುಕಿದ್ದಲ್ಲಿ ಆಯ್ಕೆ ಮಾಡಿಕೊಳ್ಳುವುದರಲ್ಲಿ ಮಜವಿದೆ.
೨೦೨೪ ರಲ್ಲಿ ಏಕಾಂತ, ಏಕತಾನತೆಗಳಿಂದ ಹೊರಬರೋಣ, ಸುಂದರ ಸಂಕ್ರಾಂತಿ. ಸಂಬ್ರಮದ ಈ ದಶಕ ನಿಮ್ಮದಾಗಲಿ.