ಬೆಟ್ಟದ ನೆಲ್ಲಿಗೂ ಸಮುದ್ರದ ಉಪ್ಪಿಗೂ ಎತ್ತಣಿಂದೆತ್ತಣ ಸಂಬಂಧ? ಎನ್ನುವುದು ಪ್ರಸಿದ್ಧ ನುಡಿ. ಬೆಟ್ಟದ ನೆಲ್ಲಿಗೂ ಕಾಡಿನ ಜಿಂಕೆಗೂ ಎತ್ತಣಿಂದೆತ್ತಣ ಸಂಬಂಧ ಗೊತ್ತಾ?
ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಣುವ ಬೆಟ್ಟದ ನೆಲ್ಲಿ ಔಷಧಗಳ ಆಗರ. ನೆಲ್ಲಿಕಾಯಿ ತಿಂದು ನೀರು ಕುಡಿದರೆ ಅನುಭವಿಸುವ ಸಿಹಿಯಂತೆ ಕಹಿ ಒಗರಿನ ನೆಲ್ಲಿಕಾಯಿ ತಿಂದರೆದೇಹಕ್ಕೆ ಸಿಹಿ. ಈ ನೆಲ್ಲಿ ಅನೇಕ ಔಷಧ,ಸೌಂದರ್ಯ ವರ್ಧಕಗಳಿಗೆ ಕಚ್ಚಾ ವಸ್ತುವಾಗಿ ಬಳಕೆಯಾಗುತ್ತದೆ.
ಆಯುರ್ವೇದದ ಪ್ರಮುಖ ಕಾಯಿ ನೆಲ್ಲಿ ಬಹುಪಯೋಗಿ ಕಾಡು ಉತ್ಫನ್ನ.
ನೆಲ್ಲಿಕಾಯಿಯ ಒಳಗಿನ ಬೀಜ ಒರಟಾಗಿ ಗಟ್ಟಿಯಾಗಿರುತ್ತದೆ.ಇದು ಭೂಮಿಗೆ ಬಿದ್ದರೆ ಮೊಳಕೆ ಒಡೆದು ಸಸಿ,ಗಿಡವಾಗುವುದು ಅಪರೂಪ. ಆದರೆ ಈ ನೆಲ್ಲಿಕಾಯಿಯನ್ನು ಜಿಂಕೆಗಳು ತಿಂದು ವಿಸರ್ಜಿಸಿದರೆ ಸುಲಭವಾಗಿ ಮೊಳಕೆ ಒಡೆದು ಗಿಡವಾಗುತ್ತದೆ ಎನ್ನುವುದು ವಾಸ್ತವ. ಹಿಂದೆಲ್ಲಾ ಕಾಡಿನಲ್ಲಿ ಜಿಂಕೆಗಳಿರುತಿದ್ದವು ಜಿಂಕೆಗಳು ನೆಲ್ಲಿಕಾಯಿ ತಿಂದು ವಿಸರ್ಜಿಸಿ ಬೆಟ್ಟದ ನೆಲ್ಲಿಯ ಪ್ರಸಾರಕ್ಕೆ ಕಾರಣವಾಗುತಿದ್ದವು. ಈಗ ಜಿಂಕೆಗಳ ಸಂತತಿ ಕ್ಷೀಣಿಸುತ್ತಿದೆ. ಜಿಂಕೆಗಳು ಹುಲಿ, ಮಾನವನಿಗೆ ಆಹಾರವಾಗುತಿದ್ದರೆ ನೆಲ್ಲಿ ಮರಗಳು ನೀರೊಳಗೆ ಕೊಳೆಯದೆ ಶುದ್ಧ ನೀರು ಪೂರೈಸುವ ಬಾವಿಗಳ ಅಡಿಗೆ ಬಳಕೆಯಾಗುತ್ತಿವೆ!
ಬೆಟ್ಟದ ನೆಲ್ಲಿ ನರ್ಸರಿಗಳಲ್ಲಿ ಅಷ್ಟಾಗಿ ಬೆಳೆಯುವುದಿಲ್ಲ. ಕಸಿ ಪದ್ಧತಿಯಲ್ಲಿ ನೆಲ್ಲಿ ವೃದ್ಧಿಸಬಹುದು. ನೆಲ್ಲಿ ಬೆಳೆಗೆ ಪ್ರೋತ್ಸಾಹ ನೀಡುವ ಮೂಲಕ ಬೆಟ್ಟದ ನೆಲ್ಲಿ ಉಳಿಸುವ ಕೆಲಸ ಮಾಡಬಹುದು. ಜಿಂಕೆಗೂ ಅಂಕೆಗೂ ಸಿಗದ ಬೆಟ್ಟದ ನೆಲ್ಲಿ ಚಿತ್ರ, ವಿಡಿಯೋಕ್ಕೆ ಸೀಮಿತವಾಗದಂತೆ ಉಳಿಸಿ- ಬೆಳೆಸುವ ಮೂಲಕ ನೆಲ್ಲಿಗೂ ಮನುಷ್ಯರಿಗೂ ಇರುವ ನಂಟು ಉಳಿಸಬೇಕಿದೆ. (ಚಿತ್ರ-ಗಣೇಶ್ ಹೊಸ್ಮನೆ)