

ಒಬ್ಬ ಗುಣಗ್ರಾಹಿ ಹುಡುಗ ಸೀದಾಸಾದಾ ಬದುಕಿರುತ್ತಾನೆ. ಆತನಿಗೆ ಮಲೆನಾಡ ಕ್ರೀಡೆ ಕೆರೆಬೇಟೆಯೆಂದರೆ ವಿಪರೀತ ಆಸಕ್ತಿ,ಉತ್ಸಾಹ. ಅಮ್ಮನ ಈ ಪ್ರೀತಿಯ ಮಗನಿಗೆ ಬೆರಕೆ ಎನ್ನುವ ಆರೋಪ. ಗ್ರಾಮೀಣ ಹುಡುಗಾಟದ ಈ ಹುಡುಗ ಸ್ಪಲ್ಪ ಅತಿ ಎನ್ನುವಷ್ಟು ಆಡುತ್ತಾನಾದರೂ ಆತ ದುಷ್ಟನಲ್ಲ. ಕಾನೂನು ಬಾಹೀರ ಕೆಲಸದ ಈ ವಿಚಿತ್ರ ಹುಡುಗನ ಲೈಫ್ ನಲ್ಲಿ ಏನಾಯ್ತು ಎನ್ನುವ ಸಾದಾ ಕತೆಗೆ ಸರಿಸುಮಾರು ಎರಡು ಗಂಟೆಗಳ ನಂತರ ಸಿಗುವ ತಿರುವಿನಲ್ಲಿ ಹುಟ್ಟು ಕಲಾವಿದ ಗುರು ಯಾನೆ ರಾಜ್ ಗುರು ಕೈಚಳಕವಿದೆ.
ಸೊರಬಾ ಭಾಷೆ ಉತ್ತರ ಕನ್ನಡ, ಶಿವಮೊಗ್ಗಗಳ ಪರಿಸರ ಅದಕ್ಕೆ ಗ್ರಾಮೀಣ ಸೊಗಡಿನ ದೇಶೀ ಆಚಾರ, ಆಟ,ಅನನ್ಯತೆಗಳ ಮೇಲೋಗರ ಎರಡು ಗಂಟೆಗಳ ವರೆಗೆ ಬೋರು ಹೊಡೆಸಿಬಿಟ್ಟ ಎನ್ನುವಷ್ಟರಲ್ಲಿ ಸಿಗುವ ಟ್ವಿಸ್ಟ್ ಇಡೀ ಸಿನೆಮಾದ ಜೀವಾಳ. ಕೊನೆಗೂ ಜಾತಿ ಸೋತು ಪ್ರೀತಿ ಗೆದ್ದಿತು ಎನ್ನುವಷ್ಟರಲ್ಲಿ ನಮ್ಮ ಯೋಚನೆ, ಊಹೆ ತಪ್ಪಾಗಿಬಿಡುತ್ತದೆ!.
ಟ್ರೆಂಡ್ ಸೆಟ್ ಮಾಡಬಲ್ಲ ವಿನೂತನ ಸಿನೆಮಾ ಎನ್ನುವ ಮುನ್ನ ಮಲೆನಾಡಿನ ಹಬ್ಬ- ಆಚರಣೆ, ಪರಿಸರವೈವಿಧ್ಯ,ಜನಾಂಗೀಯ ವೈವಿಧ್ಯ ನಿಧಾನ ನಿರೂಪಣೆ ಸಾಗುತ್ತಾ ಸಾಗುತ್ತಾ ಒಂದು ಹಂತದಲ್ಲಿ ಪ್ರೇಕ್ಷಕನನ್ನು ಸೀಟಿನ ತುದಿಗೆ ಕೂರಿಸಿ, ಕುತೂಹಲಕ್ಕೆ ನೂಕುವ ಕತೆ ಹೇಳುವ ಶೈಲಿ ಪ್ಲ್ಯಾಶ್ ಬ್ಯಾಕ್ ಮಾದರಿಯಾದರೂ ಅಲ್ಲಿ ಹೊಸತನವಿದೆ. ಕೊನೆಯ ಅರ್ಧಗಂಟೆಯ ಗಟ್ಟಿ ಕತೆಗೆ ಯಾವ ವಿಶೇಶ ವೈಚಿತ್ರ್ಯವಿಲ್ಲವಾದರೂ ನೋಡುಗ, ಪ್ರೇಕ್ಷಕ ಅಂದುಕೊಂಡಂತೆ ಆಗದಿರುವುದೇ ಈ ಚಿತ್ರದ ವಿಶೇಶ, ವೈಶಿಷ್ಟ್ಯ. ಮಾಮೂಲು ಕತೆಗೆ ಸಸ್ಪೆನ್ಸನ ಕೋಟು ತೊಡಿಸಿದಂತಿರುವ ಈ ಹೊಸತನ ಕನ್ನಡ ಚಿತ್ರರಂಗದ ಮಟ್ಟಿಗಂತೂ ವಿನೂತನವೇ.

ಮಲೆನಾಡಿನ ಸೊಬಗು, ಸೌಂದರ್ಯ ಅದಕ್ಕೊಂದಿಷ್ಟು ಮೆಲೊಡ್ರಾಮಾ ಎನ್ನುವ ಮಾಮೂಲು ತಂತ್ರವನ್ನು ಸುಳ್ಳುಮಾಡಿ ಪ್ರೇಕ್ಷಕನನ್ನು ದಂಗುಬಡಿಸುವ ರಾಜ್ ಗುರು ತನ್ನ ಚೊಚ್ಚಲ ನಿರ್ಧೇಶನದಲ್ಲೇ ಭರವಸೆ ಮೂಡಿಸಿದ್ದಂತೂ ಸತ್ಯ. ಎರಡೂ ವರೆ ತಾಸಿನ ಮನರಂಜನೆಗೆ ತನ್ನ ೧೬ ವರ್ಷಗಳ, ಅನುಭವ,ಆಸಕ್ತಿಯ ಅಂಶಗಳನ್ನು ಸಂಪೂರ್ಣ ಎರಕಹೊಯ್ಯುವಲ್ಲಿ ಯಶಸ್ವಿಯಾಗದ ಗುರು ತನ್ನಲ್ಲಿ ಇನ್ನಷ್ಟು, ಮತ್ತಷ್ಟು ಸ್ಟಫ್ ಉಂಟು ಎನ್ನುವ ಸತ್ಯ ಬಿಚ್ಚಿಡುವಲ್ಲಿ ರಾಜ್ ಗುರು ಸಿನಿಪಯಣದ ಆರಂಭ ಶುಭಕರವಾಗಿದೆ.
ಹೊಸತನಕ್ಕೆ, ಹೊಸಪ್ರಯೋಗಕ್ಕೆ ಕಾಯುತ್ತಿರುವ ಸ್ಯಾಂಡಲ್ ವುಡ್ ಒಬ್ಬ ಹೊಸ ಉದಯೋನ್ಮುಕನನ್ನು ಪರಿಚಯಿಸಿದೆ ಎನ್ನುವಲ್ಲಿ ಕೆರೆಬೇಟೆ ಗೆದ್ದಿದೆ.
ಉತ್ತರ ಕನ್ನಡ, ಶಿವಮೊಗ್ಗದ ಕೆರೆಬೇಟೆ ಬಲ್ಲವರಿಗೆ ಈ ಚಿತ್ರ ಎದೆಗೆ ಇಳಿಯುವುದೂ ಈ ಚಿತ್ರದ ಪ್ರಸ್ತುತತೆಗೆ ಸಾಕ್ಷಿ. ಬಹುತೇಕ ನಟರು ಪಾತ್ರಗಳನ್ನು ಜೀವಿಸಿರುವುದು ಕೂಡಾ ನಿರ್ಧೇಶಕರ ಪ್ರತಿಭೆಗೆ ಕನ್ನಡಿ.
