



ಸಿದ್ಧಾಪುರ,ಮಾ.೨೩- ಇಲ್ಲಿಯ ವಾಟಗಾರ್ ಕುಂಟೆಹೊಳೆ ಬಳಿ ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಸುಂಗೊಳ್ಳಿಮನೆಯ ಗಣೇಶ್ ಮಾಬ್ಲೇಶ್ವರ ಹೆಗಡೆ ಸಾವು ಕೊಲೆ ಇರಬಹುದೆ? ಎನ್ನುವ ಸಂಶಯಕ್ಕೆ ಕಾರಣವಾಗಿದೆ.

ಮಾ.೨೨ ರ ರಾತ್ರಿಯಿಂದ ೨೩ ರ ಮುಂಜಾನೆ ಮಧ್ಯದಲ್ಲಿ ನಡೆದಿರಬಹುದಾದ ಈ ಘಟನೆಯಲ್ಲಿ ಸುಂಗೊಳ್ಳಿಮನೆಯ ಗಣೇಶ್ ಮಾಬ್ಲೇಶ್ವರ ಹೆಗಡೆ ಭಾಗಶ: ಸುಟ್ಟ ಸ್ಥಿತಿಯಲ್ಲಿ ರವಿವಾರ ಮುಂಜಾನೆ ಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಿರುವ ಮೃತರ ಸಹೋದರ ಶ್ರೀಧರ ಹೆಗಡೆ. ಗಣೇಶ್ ಹೆಗಡೆ ಸುಂಗೊಳ್ಳಿಮನೆಯಲ್ಲಿ ಏಕಾಂಗಿಯಾಗಿ ಬದುಕುತಿದ್ದರು. ಅವರ ಮಗ ಉಡುಪಿಯಲ್ಲಿರುತಿದ್ದು ವಾಟಗಾರಿನ ಸ್ಥಳೀಯರ ಮಾಹಿತಿ ಮೇರೆಗೆ ವಾಟಗಾರಿನ ಹೊಳೆ ಸಮೀಪ ನೋಡಿದಾಗ ಬಲಬದಿ ಗಣೇಶ್ ಹೆಗಡೆ ಉಪಯೋಗಿಸುತಿದ್ದ ಮೊಪೆಡ್ ಸ್ಕೂಟರ್ ಪತ್ತೆಯಾಗಿದ್ದು ಅದರ ಪಕ್ಕದಲ್ಲಿಯೇ ಗಣೇಶ್ ಹೆಗಡೆ ಭಾಗಶ: ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಾವಿನ ಬಗ್ಗೆ ಬಲವಾದ ಸಂಶಯ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂಶಯಾಸ್ಫದ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ವಿದುರನಾದ ಗಣೇಶ್ ಹೆಗಡೆ ಜೂಜಿನ ವ್ಯವಹಾರಸ್ಥರಾಗಿದ್ದು ಮುಸ್ಸಂಜೆಯ ಮೊದಲು ಮನೆ ಸೇರುವ ಪ್ರವೃತ್ತಿಯವಾರಾಗಿದ್ದರು ಎನ್ನುವ ಸುಳಿವಿನ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಗಣೇಶ್ ಹೆಗಡೆ ಶುಕ್ರವಾರದ ಸಾಯಂಕಾಲ ಆರು-ಏಳು ಗಂಟೆಯ ನಂತರ ಕೂಡಾ ಪೇಟೆಯಲ್ಲಿದ್ದರು. ಅವರ ಜೊತೆಗಿದ್ದವರ್ಯಾರು ಎನ್ನುವ ಮಾಹಿತಿ ಆಧರಿಸಿ ನಗರದ ಸಿ.ಸಿ. ಟಿ.ವಿ. ಪರಶೀಲಿಸಲಾಗಿ ನಗರದಲ್ಲಿ ಸಿ.ಸಿ. ಟಿ.ವಿ.ಗಳು ಸುಸ್ಥಿತಿಯಲ್ಲಿರದಿದ್ದುದರಿಂದ ಈ ಮಾಹಿತಿ ಲಭ್ಯವಾಗಿಲ್ಲ.
ಓ.ಸಿ. ಮಟಕಾ, ಇಸ್ಫೀಟ್ ಹವ್ಯಾಸಿಯಾಗಿದ್ದ ಗಣೇಶ್ ಹೆಗಡೆಯವರ ಜೊತೆ ಇದ್ದವರ್ಯಾರು? ಅವರ ಬಳಿ ಹಣ ಇದ್ದಿರಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಇವರನ್ನು ಕೊಲೆ ಮಾಡಿ ಹಣ ಅಪಹರಿಸಿರಬಹುದೆ? ಎನ್ನುವ ಸಂಶಯ ವ್ಯಕ್ತಪಡಿಸಿರುವ ಸ್ಥಳೀಯ ಮೂಲಗಳನ್ನಾಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ಲೊರೆನ್ಸಿಕ್ ವರದಿ ಅಧರಿಸಿ ತನಿಖೆ ನಡೆಸಲಿರುವ ಪೊಲೀಸರು ಈ ಸಾವಿನ ರಹಸ್ಯ ಭೇದಿಸಬಹುದೆ? ಎನ್ನುವ ಕುತೂಹಲ ಎಲ್ಲರಲ್ಲಿದೆ.
