

ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳೆಂಟು ಜನರನ್ನು ಬಲಿ ಪಡೆದ ಮಂಗನಕಾಯಿಲೆ ಸಭೆಗಳು ಕಾಟಾಚಾರದ ಸಭೆಗಳಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳಿವೆ. ಪ್ರತಿವರ್ಷ ಬೇಸಿಗೆಯಲ್ಲಿ ಪ್ರಾರಂಭವಾಗುತಿದ್ದ ಮಂಗನ ಕಾಯಿಲೆ ಈ ವರ್ಷ ಚಳಿಗಾಲದಲ್ಲೇ ಪ್ರಾರಂಭವಾಗಿ ಈಗಲೂ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಸಕಾಲಿಕ ಪ್ರಯತ್ನ ನಡೆಯುತ್ತಿರುವಾಗಲೇ ಜಿಲ್ಲಾಡಳಿತ, ಜನಪ್ರತಿನಿಧಿಗಳೆಲ್ಲಾ ಸೇರಿ ಈ ವರೆಗೆ ಅನೇಕ ಸಭೆಗಳನ್ನು ನಡೆಸಿದ್ದಾರೆ. ಆದರೆ ಸಭೆಗಳು ಮಾಮೂಲು ಫಾರ್ಮಾಲಿಟಿ ಸಭೆಗಳಾಗಿ ನಡೆದಿವೆಯೇ ಹೊರತು ಫಲಿತಾಂಶ ಸೊನ್ನೆ.
ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಅವಧಿಯಲ್ಲಿ ಕ್ಯಾದಗಿ ಗ್ರಾಮ ಪಂಚಾಯತ್ ಮತ್ತು ತಾಲೂಕಾ ಕೇಂದ್ರಗಳಲ್ಲಿ ಸಭೆಗಳಾಗಿ ತುರ್ತು ವಾಹನಗಳು, ಕೆಲವು ತುರ್ತು ಕೆಲಸಗಳಾಗಿದ್ದವು. ಅದೇ ಅವಧಿಯಲ್ಲಿ ಮಂಗನಕಾಯಿಲೆಯ ತುರ್ತು ಸಂಚಾರಿ ಆಸ್ಫತ್ರೆ ಮತ್ತು ರೋಗಪತ್ತೆ ಕೇಂದ್ರ ಸ್ಥಾಪನೆಗೆ ಬೇಡಿಕೆ ವ್ಯಕ್ತವಾಗಿದ್ದವು.
ಸಂಚಾರಿ ಆಸ್ಫತ್ರೆಗೆ ತಜ್ಞವೈದ್ಯರು ಬೇಕು, ಅವರಿಗೆ ಸಹಾಯಕರು ಬೇಕು, ಲ್ಯಾಬ್ ನಲ್ಲಿ ಶೀಘ್ರ ರೋಗಪತ್ತೆಗೆ ಯಂತ್ರ-ಮಾನವಶಕ್ತಿಗಳ ಅವಶ್ಯವಿದೆ. ಇವುಗಳಿಲ್ಲದೆ ಸಂಚಾರಿ ಆಸ್ಫತ್ರೆ ವ್ಯರ್ಥ.
ಲ್ಯಾಬ್ ವಿಚಾರದಲ್ಲಿ ಶಿರಸಿಯಲ್ಲಿ ಮಂಗನಕಾಯಿಲೆ ಪತ್ತೆಗೆ ಅವಶ್ಯವಿರುವ ಲ್ಯಾಬ್ ಸ್ಥಾಪನೆಗೆ ಶಾಸಕ ಭೀಮಣ್ಣರಿಂದ ಪ್ರಸ್ಥಾವನೆ ಹೋಗಿದೆ. ಅದೇ ಫಾಲೋ ಅಪ್ ಕೆಲಸವನ್ನು ಮಾಡಿದ ಜಿಲ್ಲಾಧಿಕಾರಿಗಳು ವಾಸ್ತವವನ್ನು ಹೇಳಲಿಲ್ಲ.

ಸಿದ್ಧಾಪುರ ಉತ್ತರ ಕನ್ನಡವನ್ನು ಕೇಂದ್ರೀಕರಿಸಿ ಪ್ರತಿಬಾರಿ ಮರುಕಳಿಸುವ ಮಂಗನಕಾಯಿಲೆಗೆ ಸೂಕ್ತ ಔಷಧಿ ಇರದಿರುವುದು ಸರ್ಕಾರಗಳ ವಿಫಲತೆ. ತಾಲೂಕಿನ ೭ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ, ಸಿಬ್ಬಂದಿಗಳ ಕೊರತೆ, ಮಂಗನಕಾಯಿಲೆ ಹಾಟ್ ಸ್ಪಾಟ್ ಕೊರ್ಲಕೈ, ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಂತ್ರಿಕ ಸಿಬ್ಬಂದಿಗಳೇ ಇಲ್ಲದಿರುವುದು ಜಿಲ್ಲೆಯ ಆರೋಗ್ಯ ವ್ಯವಸ್ಥೆಗೆ ಹಿಡಿದ ಕನ್ನಡಿ.
ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಶಾಸಕರ ಸಭೆಗಳು ಮಾಮೂಲು ಅದರ ಒಂದು ಸಭೆಯಿಂದ ಇನ್ನೊಂದು ಸಭೆಯ ವರೆಗಿನ ಪ್ರಗತಿ ಪರಿಶೀಲನೆಯಾಗದೆ ಮಾಮೂಲು ಕೆ.ಡಿ.ಪಿ. ಸಭೆಗಳ ಮಾದರಿಯಲ್ಲಿ ಕೆ.ಎಫ್.ಡಿ. ಸಭೆಗಳಾಗುತ್ತಿರುವುದು ಆಳುವವರ ನಿರಾಸಕ್ತಿಗೆ ದೃಷ್ಟಾಂತ.
ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಪ್ರವಾಸದ ಮಧ್ಯೆ ನಾಮಕಾವಾಸ್ಥೆ ಸಭೆ ನಡೆಸಿರುವುದು ಬಿಟ್ಟರೆ ಮಂಗನಕಾಯಿಲೆ ಬಗ್ಗೆ ಅವರ ನಿರ್ಲಿಪ್ತತೆ ಸಮರ್ಥನೀಯವಲ್ಲ. ಮಂಗನಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಮಾಧ್ಯಮದವರು ಬರಬೇಡಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಅವಕಾಶವಿಲ್ಲ ಎನ್ನುತ್ತಾ ಜ್ಯೋತಿಷಿಗಳನ್ನು ಕರೆಸಿ ಭವಿಷ್ಯ, ಪರಿಹಾರ ಕೇಳುತ್ತಿರುವುದು ಮೂಢನಂಬಿಕೆ, ಅರಾಜಕತೆ ಬೆಳೆಸಿ ಲಾಭ ಮಾಡುವ ಮತಾಂಧ ಆಸಾಢಭೂತಿಗಳಿಗೆ ಖುಷಿಕೊಡಬಹುದೆ ವಿನ: ನಾಗರಿಕ ಸಮಾಜ, ಚುನಾಯಿತ ಸರ್ಕಾರಕ್ಕೆ ಗೌರವ ತರುವ ವಿಚಾರವಲ್ಲ.
ಗೋಡಾ ಹೈ ಮೈದಾನ್ ಹೈ ಮಾಡುವ ಅಧಿಕಾರ ಶಾಹಿ, ಆಡಳಿತಶಾಹಿ ಜನಪ್ರತಿನಿಧಿಗಳು ತೋರಿಕೆಗೆ ಸಭೆ ನಡೆಸಿ ಕರ್ಚು-ವೆಚ್ಚ ದಾಖಲಿಸುವುದಕ್ಕಿಂತ ವಾಸ್ತವದ ಅನಿವಾರ್ಯತೆ, ಅವಶ್ಯಕತೆ ಅರಿತು ಕೆಲಸಮಾಡಬೇಕಾದ ಜವಾಬ್ಧಾರಿ ಪ್ರದರ್ಶಿಸಬೇಕು. ಹಿಂದಿನ ಶಾಸಕರು ಕೆಲಸ ಮಾಡಿದ್ದರು ಈಗಿನವರಿಲ್ಲ ಎನ್ನುವ ರಾಜಕೀಯ ಪಕ್ಷಗಳು ಈ ಹಿಂದಿನ ಅವಧಿಗಳಲ್ಲಿ ಆಗಿದ್ದಕ್ಕಿಂತ ಆಗದಿರುವುದೇ ಹೆಚ್ಚು ಎನ್ನುವುದನ್ನು ಅರಿತು ಮಾತನಾಡುವ ಸೌಜನ್ಯವನ್ನಾದರೂ ಇಟ್ಟುಕೊಳ್ಳಬೇಕು. ತಾಲೂಕಾ ಆಡಳಿತದ ಜವಾಬ್ಧಾರಿಯ ತಹಸಿಲ್ಧಾರ ಮತ್ತು ತಾ.ಪಂ. ಆಡಳಿತ ವರ್ಗ ತಮ್ಮ ಅಧಿಕಾರಶಾಹಿ ಮನೋಧರ್ಮ ಮರೆತು ಮನುಷ್ಯತ್ವ ದಿಂದ ಕೆಲಸ ಮಾಡದಿದ್ದರೆ ಪರಿಸ್ಥಿತಿ ಅರಾಜಕತೆಯತ್ತ ಸಾಗುವುದಕ್ಕೆ ನೇರ ಹೊಣೆಯಾಗಬೇಕಾಗುತ್ತದೆ. ಇಂದಿನ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹೇಳಿದಂತೆ ಎಲ್ಲಾ ಇಲಾಖೆಗಳು ಇದನ್ನು ತಾಲೂಕಿನ, ಜಿಲ್ಲೆಯ ಸಮಸ್ಯೆ ಎಂದು ಪರಿಗಣಿಸಬೇಕಾಗುತ್ತದೆ.
