

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದ್ದಾರೆ.

ಭಾನುಪ್ರಕಾಶ್
ಶಿವಮೊಗ್ಗ: ಇಂಧನ ಮೇಲಿನ ವ್ಯಾಟ್ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾಜಿ ಎಂಎಲ್‌ಸಿ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಂ ಬಿ ಭಾನುಪ್ರಕಾಶ್ (69) ಹೃದಯಾಘಾತದಿಂದ ನಿಧನರಾದರು. ಪ್ರತಿಭಟನಾ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲಿನ ವ್ಯಾಟ್ ಏರಿಕೆ ಖಂಡಿಸಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಭಾನುಪ್ರಕಾಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಿವಪ್ಪ ನಾಯ್ಕ ವೃತ್ತದಿಂದ ಗೋಪಿ ವೃತ್ತದವರೆಗೆ ಮೆರವಣಿಗೆ ನಡೆಸಿ ನಂತರ ಗೋಪಿ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಪ್ರತಿಭಟನೆ ಮುಗಿಸಿ ಹಿಂತಿರುಗುತ್ತಿದ್ದಾಗ ಭಾನುಪ್ರಕಾಶ್ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡ ಭಾನುಪ್ರಕಾಶ್ ಅವರ ಹಠಾತ್ ನಿಧನದಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆಘಾತಕ್ಕೊಳಗಾಗಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದಲ್ಲಿರುವ ಅವರ ನಿವಾಸಕ್ಕೆ ಪಾರ್ಥಿವ ಶರೀರ ರವಾನಿಸಲಾಗಿದೆ.
ತಮ್ಮ ರಾಜಕೀಯ ಜೀವನದಲ್ಲಿ ಭಾನುಪ್ರಕಾಶ್ ಅವರು 2009 ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಮತ್ತು 2013 ರಿಂದ 2019 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಸಂಘಟನೆಗೆ ಅವರ ಕೊಡುಗೆ ಗಣನೀಯವಾಗಿದೆ ಮತ್ತು ಅವರು ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಗಾಜನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾಗಿರುವ ಭಾನುಪ್ರಕಾಶ್ ಅವರು 2001ರಿಂದ 2005ರವರೆಗೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2005 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ವಿರುದ್ಧ ಸ್ಪರ್ಧಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾ ಬೆಂಬಲಿಗರಾದ ಭಾನುಪ್ರಕಾಶ್ ಅವರು ತಮ್ಮ ವಾಗ್ಮಿ ಕೌಶಲ್ಯ ಮತ್ತು ಸರಳತೆಗೆ ಹೆಸರುವಾಸಿಯಾಗಿದ್ದರು.

ವಿಜಯೇಂದ್ರ ಸಂತಾಪ
ಈ ನಡುವೆ ಭಾನುಪ್ರಕಾಶ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ವಿಧಾನ ಪರಿಷತ್ ಮಾಜಿ ಸದಸ್ಯರೂ ಸಂಘಟನೆಯ ಹಿರಿಯ ಮಾರ್ಗದರ್ಶಕರೂ ಆಗಿದ್ದ ಮಾನ್ಯ ಭಾನುಪ್ರಕಾಶ್ ಅವರ ಅನಿರೀಕ್ಷಿತ ಸಾವು ಸಂಘ ಪರಿವಾರ ಹಾಗೂ ಪಕ್ಷದ ಕಾರ್ಯಕರ್ತರ ವಲಯಕ್ಕೆ ಅತೀವ ಆಘಾತವನ್ನುಂಟು ಮಾಡಿದೆ. ಸಂಘಟನೆಯ ಕುರಿತು ಕಾಲ ಕಾಲಕ್ಕೆ ನನಗೆ ಸೂಕ್ತ ತಿಳುವಳಿಕೆ ನೀಡುತ್ತಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ಅಪಾರ ನೋವನ್ನುಂಟು ಮಾಡಿದೆ.
ತಮ್ಮ ಇಡೀ ಜೀವನವನ್ನು ಸಂಘ ಮತ್ತು ಸಂಘಟನೆಗೆ ಸಮರ್ಪಿಸಿಕೊಂಡಿದ್ದ ಭಾನುಪ್ರಕಾಶ್ ಜೀ ಅವರು ಇಂದಿನ ಪೀಳಿಗೆಯ ರಾಷ್ಟ್ರ ಭಕ್ತರಿಗೆ ಮಾದರಿಯಾಗಿದ್ದರು. ಅವರ ಕುಟುಂಬವೂ ಸಹ ಸಂಘದ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿತ್ತು, ತಮ್ಮ ಕುಟುಂಬ ಬೇರೆಯಲ್ಲ ಸಂಘ ಪರಿವಾರ ಬೇರೆಯಲ್ಲ ಎಂದು ತಮ್ಮ ಜೀವನ ಶೈಲಿಯನ್ನು ತ್ಯಾಗದ ಪ್ರತಿರೂಪವಾಗಿ ಸಮರ್ಪಿಸಿಕೊಂಡು ಕ್ರಿಯಾಶೀಲರಾಗಿದ್ದ ಅವರು ವಿಧಾನಪರಿಷತ್ತಿನ ಸದಸ್ಯರಾಗಿಯೂ ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಪಾರದರ್ಶಕವಾಗಿ ಎತ್ತಿ ಹಿಡಿಯಲು ಪ್ರಾಮಾಣಿಕವಾಗಿ ಪರಿಶ್ರಮಿಸಿದ್ದರು.
ಭಾನುಪ್ರಕಾಶ್ ಅವರು ಸಂಘಟನೆ ಹಾಗೂ ಹೋರಾಟದ ಸಮಯದಲ್ಲೇ ಅಸುನೀಗುವ ಮೂಲಕ ಸಂಘ ಪರಿವಾರದ ತ್ಯಾಗ ಬಲಿದಾನಗೈದ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರ್ಪಡೆಗೊಂಡು ಇತಿಹಾಸ ಪುಟಗಳಲ್ಲಿ ಸೇರಿ ಹೋದರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವೆ.
ಒಬ್ಬ ಅಪರೂಪದ ಸರಳ, ಸಜ್ಜನ, ಪರಿಶುಭ್ರ ವ್ಯಕ್ತಿತ್ವದ ಭಾನುಪ್ರಕಾಶ್ ಅವರ ಇನ್ನಿಲ್ಲದಿರುವಿಕೆ ಪರಿವಾರ ಹಾಗೂ ಪಕ್ಷದ ವಲಯದಲ್ಲಿ ಶೂನ್ಯ ಆವರಿಸಲು ಕಾರಣವಾಗಿದೆ. ಅವರು ನಮ್ಮೊಂದಿಗೆ ಭವಿಷ್ಯತ್ತಿನಲ್ಲಿ ಭೌತಿಕವಾಗಿ ಇಲ್ಲದಿರಬಹುದು, ಆದರೆ ಅವರು ನೀಡಿದ ಪ್ರೇರಣೆ, ಹೋರಾಟ, ಮಾರ್ಗದರ್ಶನ ಸದಾ ನಮ್ಮ ಬೆನ್ನಿಗೆ ನಿಂತು ಭವಿಷ್ಯತ್ತಿನಲ್ಲೂ ಪ್ರೇರಣೆಯ ಶಕ್ತಿಯಾಗಿರಲಿದೆ ಎಂದು ಹೇಳಿದ್ದಾರೆ. (kpc)
