


ಸಂಘ-ಸಂಘಟನೆಗಳಲ್ಲಿ ಬಹುಮತಕ್ಕೆ ಆದ್ಯತೆ. ಕೆಲವೊಮ್ಮೆ ಬಹುಮತವೆಂಬುದು ಮೂರ್ಖರ ನಿರ್ಧಾರವಾಗುವ ಸಂಭವವೂ ಉಂಟು. ಇಂಥ ಬಹುಮತದ ಮೂರ್ಖರ ಕೆಲಸಕ್ಕಿಂತ ಒಬ್ಬರ-ಕೆಲವರ ವಿದಾಯಕ ಕೆಲಸಗಳು ಮಹತ್ವ ಪಡೆಯುವುದುಂಟು ಇಂಥ ನಿದರ್ಶನವೊಂದು ಇಲ್ಲಿದೆ.

ಸಿದ್ಧಾಪುರದ ಉಮೇಶ್ ಟಪಾಲ್ ನಿವೃತ್ತ ನೌಕರ. ಅವರು ಸರ್ಕಾರಿ ಸೇವೆಯಲ್ಲಿದ್ದಾಗ, ನಿವೃತ್ತಿ ನಂತರ ಸಮಾಜಮುಖಿಯಾಗಿ ಗುರುತಿಸಿಕೊಂಡವರು. ಉಮೇಶ್ ಟಪಾಲ್ ಎಂದರೆ ರೇಷ್ಮೆ ಟಪಾಲ್ ಎನ್ನುವ ಮಟ್ಟಿಗೆ ಅನ್ವರ್ಥಕರಾದ ಉಮೇಶ್ ನಾಯ್ಕ ತಮ್ಮ ಸೇವಾವಧಿಯಲ್ಲಿ ತಮ್ಮ ಮಿತಿ-ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡಿದವರು. ತಮ್ಮ ಕರ್ತವ್ಯದ ಜೊತೆಗೆ ಅವರ ಸೇವಾ ಮನೋಭಾವ ಎಲ್ಲರ ಗಮನಸೆಳೆದಿದೆ. ಹಲವು ಸಂಘ-ಸಂಸ್ಥೆ ಸಂಘಟನೆಗಳಲ್ಲಿ ಸಕ್ರೀಯರಾಗಿರುವ ೬೪ ರ ಹರೆಯದ ಉಮೇಶ್ ಕೆಲವು ಸಂಘಟನೆಗಳಲ್ಲಿ ಪ್ರತಿಭಾವಂತರಿಗೆ ನೂರಾರು ಜನರು ಸೇರಿ ೫೦೦, ಸಾವಿರ ರೂಪಾಯಿ ಸಹಾಯ ಮಾಡಿ ಪ್ರಚಾರ ಪಡೆಯುವುದಕ್ಕಿಂತ ನೈಜ ಅರ್ಹರಿಗೆ ಅವಶ್ಯ ಸಹಾಯ ಮಾಡುವುದು ಒಳ್ಳೆಯದು ಎಂದು ಅರಿತು ಸಮಾನ ಮನಸ್ಕರ ತಂಡ ಕಟ್ಟಿದರು. ಆತಂಡದಲ್ಲಿ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ರವೀಂಧ್ರ ಟಪಾಲ, ರವಿ ಮೆಣಸಿ, ನಾಗಭೂಷಣ್ ನಾಯ್ಕ ರೆಲ್ಲಾ ಸೇರಿದರು. ತಾಲೂಕಿನಲ್ಲಿ ದ್ವಿತಿಯ ಪಿ.ಯು. ಪರೀಕ್ಷೆಯಲ್ಲಿ ಅತ್ತ್ಯುನ್ನತ ಅಂಕ ಪಡೆದ ಕೆಲವು ಪ್ರತಿಭಾವಂತ ಬಡ ಮಕ್ಕಳನ್ನು ಹುಡುಕಿದರು. ಅವರೆಲ್ಲರಿಗೆ ಸಮಾನಮನಸ್ಕರು ತಮ್ಮ ವೈಯಕ್ತಿಕ ನೆರವು ೫,೧೦ ಸಾವಿರ ರೂಪಾಯಿಗಳನ್ನು ಅವರ ಮನೆಗೇ ತೆರಳಿ ಹಂಚಿದರು. ಈ ಸಮಾನಮನಸ್ಕರ ಸಹಾಯ ಕನಿಷ್ಟ ಅರ್ಹ, ಸೂಕ್ತ ಮನೆಗಳನ್ನು ತಲುಪಿತು.

ಈ ತಂಡದ ನೇತೃತ್ವ ವಹಿಸಿದ್ದ ಉಮೇಶ್ ಟಪಾಲ್ ಹೇಳುವ ಪ್ರಕಾರ ಈ ಆರ್ಥಿಕ ಸಹಾಯ ಬಡ ಪ್ರತಿಭಾವಂತರಿಗೆ ಉಪಯೋಗವಾಗುತ್ತದೆ. ಇಂಥ ನೆರವು ಪಡೆದವರು ಮುಂದೆ ಇತರ ಬಡ ಪ್ರತಿಭಾವಂತರಿಗೆ ಸಹಾಯಮಾಡಲು ದಾರಿಮಾಡಿಕೊಡುತ್ತದೆ .

ಸಮಾಜದಲ್ಲಿ ಅನೇಕ ಬಡ ಪ್ರತಿಭಾವಂತರಿಗೆ ಪ್ರೋತ್ಸಾಹ, ನೆರವಿನ ಅಗತ್ಯವಿರುತ್ತದೆ ಕೆಲವರು ತಂಡ ಮಾಡಿಕೊಂಡು ಪ್ರತಿಭಾವಂತರಿಗೆ ನೆರವಾದರೆ ಅದರಿಂದ ಅರ್ಹರಿಗೆ ಉತ್ತೇಜನದ ಜೊತೆಗೆ ಮಾರ್ಗದರ್ಶನ ಪಡೆಯಲೂ ಅನುಕೂಲವಾಗುತ್ತದೆ ಎನ್ನುತ್ತಾರೆ ಈ ತಂಡದ ಒಬ್ಬ ಸದಸ್ಯ ಆರ್.ಬಿ. ನಾಯ್ಕ ಟಪಾಲ್.
ಹೀಗೆ ಸಿದ್ದಾಪುರದ ಸಮಾನಮನಸ್ಕರ ತಂಡ ಮಾದರಿ ಕೆಲಸ ಮಾಡಿರುವುದನ್ನು ಅನೇಕರು ಪ್ರಶಂಸಿಸಿದ್ದಾರೆ. ಉಳ್ಳವರು ಇಲ್ಲದವರಿಗೆ ನೆರವಾಗುವ ಈ ಮಾನವೀಯ ಕೆಲಸ ನಮ್ಮಿಂದ ಆಗುತ್ತಿರುವುದಕ್ಕೆ ಉಮೇಶ್, ರವಿ ಅಣ್ಣ, ನಾಗಭೂಷಣ್ ಕಾರಣ. ಇವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿರುವ ತೃಪ್ತಿ-ಸಮಾಧಾನದ ಮುಂದೆ ಏನಿದೆ ಸರ್? ಎನ್ನುತ್ತಾರೆ ವಾಹನ ಚಾಲಕ ರವಿ ನಾಯ್ಕ ಮೆಣಸಿ.
ನಾವು ನಮ್ಮೂರು ಇಂಥ ಸ್ಥಳೀಯ ಉತ್ತಮ ಕೆಲಸಗಳಿಗೆ ವೇದಿಕೆ. ನಿಮ್ಮ ವ್ಯಾಪ್ತಿಯಲ್ಲಾದ ಇಂಥ ಸಮಾಜಮುಖಿ ಕೆಲಸಗಳನ್ನು ನಮ್ಮ ಗಮನಕ್ಕೆ ತನ್ನಿ.
