



ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ. ಕೆ.ಶ್ರೀಧರ ವೈದ್ಯ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಸಿದ್ದಾಪುರದ ಡಾ. ಶ್ರೀಧರ ವೈದ್ಯ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಹಳಷ್ಟು ಜವಾಬ್ದಾರಿ ಇರುತ್ತದೆ. ವೈದ್ಯರಿಗೆ ಕೆಲವು ಬಾರಿ ಸಮಸ್ಯೆಗಳು ಎದುರಾಗುವುದು ಕೂಡ ಇದೆ. ಈ ಎಲ್ಲವನ್ನೂ ಸರಿ ದೂಗಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ. ಸೇವೆಯನ್ನು ಯಜ್ಞವೆಂಬಂತೆ ಸ್ವೀಕರಿಸಿ ಮಾಡುತ್ತಿದ್ದೇವೆ. ಇದನ್ನು ಗುರುತಿಸಿ ನಿಟ್ಟೆ ವಿವಿ ಗೌರವಿಸಿದಕ್ಕೆ ಚಿರಋಣಿ. ವೈದ್ಯರಿಗೆ ಬಹಳಷ್ಟು ಗೌರವ ಇದೆ. ರೋಗಿಗಳು ಕೂಡ ಗೌರವ ಕೊಡುತ್ತಾರೆ. ಆದರೆ ಸೇವೆಯಲ್ಲಿ ಎಡವಟ್ಟು ಆದರೆ ಮೊದಲು ಪ್ರಶ್ನೆ ಮಾಡುವುದು ವೈದ್ಯರನ್ನೇ. ವೈದ್ಯರನ್ನು ಪ್ರಶ್ನೆ ಮಾಡಿದ ಹಾಗೆ ಉಳಿದ ಯಾರನ್ನು ಕೂಡ ಮಾಡುವುದಿಲ್ಲ. ಆದರೂ ಕೂಡ ವೈದ್ಯರು ಗೌರವ ಉಳಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿವಿ ಶೈಕ್ಷಣಿಕ ಸಹ ಕುಲಾಧಿಪತಿ ಫ್ರೊ.ಡಾ. ಶಾಂತರಾಮ ಶೆಟ್ಟಿ, ನಿಟ್ಟೆ ಪರಿಗಣಿತ ವಿವಿ ಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ, ನಿಟ್ಟೆ ವಿವಿ ಸಂಶೋಧನ ಅಧ್ಯಯನ ಕೇಂದ್ರ ಮತ್ತು ಸ್ವ ಸಮೀಕ್ಷೆ ವಿಭಾಗಗಳ ಉಪಾಧ್ಯಕ್ಷ ಪ್ರೊ. ಡಾ. ಬಿ ಸತೀಶ್ ಕುಮಾರ್ ಭಂಡಾರಿ, ನಿಟ್ಟೆ ವಿವಿ ರಿಜಿಸ್ಟ್ರಾರ್ ಪ್ರೊ. ಹರ್ಷ ಹಾಲಹಳ್ಳಿ , ಡೀನ್ ಪ್ರೊ. ಡಾ. ಪಿ.ಎಸ್. ಪ್ರಕಾಶ್ ಹಾಗೂ ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಇದೇ ವೇಳೆ ಕೇರಳ ನೀಲೇಶ್ವರದ ಕುಟುಂಬ ವೈದ್ಯ ಡಾ. ಕೆ.ಸಿ.ಕೆ. ವರ್ಮ ರಾಜಾ, ಇಎಸ್ಐ ಆಸ್ಪತ್ರೆ ಮಾಜಿ ವೈದ್ಯಕೀಯ ಅಧೀಕ್ಷಕ ಡಾ. ಅಶೋಕ್ ಕುಮಾರ್ ನಾಯಕ್, ಕೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಕುಟುಂಬ ವೈದ್ಯ ಡಾ. ಉಮಾಪತಿ ಅವರನ್ನೂ ಸಮ್ಮಾನಿಸಿ ಗೌರವಿಸಲಾಯಿತು.
