ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ಸಿದ್ದಾಪುರ ತಾಲೂಕಿನ ವಿವಿಧ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶ ಹಾಗೂ ಮನೆಗಳನ್ನು ಪರಿಶೀಲಿಸಿದರು.
ತಾಲೂಕಿನ ದೊಡ್ಮನೆಯ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಹಾಸ್ಟೆಲ್ ಕಟ್ಟಡ ಹಾಗೂ ಅಡುಗೆ ಕೋಣೆ ವೀಕ್ಷಿಸಿ ಸ್ವಚ್ಚತೆ ಕಾಪಾಡುವ ಜತೆಗೆ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗೆ ಸೂಚಿಸಿದರು.
ನಂತರ ದೊಡ್ಮನೆಯ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಪಂಚಾಯ್ತಿ ವ್ಯಾಪ್ತಿಯ ಅಗತ್ಯ ಕಾಮಗಾರಿಗಳಿಗೆ ಅನುದಾನ ನೀಡುವ ಜತೆಗೆ ಹಂತ ಹಂತವಾಗಿ ಅನುದಾನ ನೀಡುವುದಾಗಿ ತಿಳಿಸಿ ಚುನಾಯಿತ ಪ್ರತಿನಿಧಿಗಳು ಪಕ್ಷಬೇಧ ಮರೆತು ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾಗಬೇಕೆಂದು ಕರೆ ನೀಡಿದರು.
ತಾಲೂಕಿನ ಸೋವಿನಕೊಪ್ಪ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಬೈಲ್ ಪರಿಶಿಷ್ಟರ ಕೇರಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಮನೆಗಳನ್ನು ಪರಿಶೀಲಿಸಿ ವೈಯಕ್ತಿಕ ಸಹಾಯ ನೀಡಿದರು. ನಂತರ ಶಿರಗಳ್ಳೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಮನೆ ವೀಕ್ಷಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೊಳ್ಳುವಂತೆ ಆರ್ಥಿಕ ನೆರವು ನೀಡಿದರು. ನಂತರ ಸೋವಿನಕೊಪ್ಪ ಸೊಸೈಟಿಯಲ್ಲಿ ಸಿ.ಎಸ್.ಸಿ ಕೇಂದ್ರ ಉದ್ಘಾಟಿಸಿ ಗ್ರಾಮ ಪಂಚಾಯ್ತಿಯಲ್ಲಿ ಸಭೆ ನಡೆಸಿದರು. ಅಲ್ಲಿಂದ ಹುಲ್ಕುತ್ರಿಗೆ ಭೇಟಿ ನೀಡಿ ಅತಿವೃಷ್ಟಿಯಿಂದ ಹಾನಿಯಾದ ಮನೆಗಳನ್ನು ವೀಕ್ಷಿಸಿ ವೈಯಕ್ತಿಕ ಸಹಾಯ ನೀಡಿದರು. ಮಧ್ಯಾಹ್ನ ತಾಲೂಕಿನ ಹಾರ್ಸಿಕಟ್ಟಾ ಹಾಗೂ ತಂಡಾಗುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷ ಕೆ.ಜಿ.ನಾಗರಾಜ, ಡಿಸಿಸಿ ಉಪಾಧ್ಯಕ್ಷ ವಿ.ಎನ್.ನಾಯ್ಕ, ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಬಿ.ಆರ್.ನಾಯ್ಕ, ಪ್ರಮುಖರಾದ ಸಿ.ಆರ್.ನಾಯ್ಕ, ಬಾಬು ನಾಯ್ಕ ಕಡಕೇರಿ,
ರವಿ ನಾಯ್ಕ ಹೆಗ್ಗಾರಕೈ, ಅಣ್ಣಪ್ಪ ಶಿರಳಗಿ, ಮಂಜುನಾಥ ನಾಯ್ಕ ತ್ಯಾರ್ಸಿ, ಎಂ.ಜಿ.ನಾಯ್ಕ ಹಾದ್ರಿಮನೆ, ಎಂ.ಆರ್.ನಾಯ್ಕ, ವಿನಾಯಕ ಕೊಂಡ್ಲಿ ಮತ್ತಿತರರು ಹಾಜರಿದ್ದರು.